ನವದೆಹಲಿ: ದೇಶದ ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆಯನ್ನಿಟ್ಟುಕೊಂಡು ನಡೆಸಲಾಗಿರುವ “ಇಂಡಿಯಾ ಟುಡೇ ಮೂಡ್ ಆಫ್ ದ ನೇಷನ್’ ಸಮೀಕ್ಷೆಯಲ್ಲಿ ದೇಶದ ಶೇ. 53ರಷ್ಟು ಜನ, ಹಾಲಿ ಪ್ರಧಾನಿ ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕೆಂದು ಆಶಿಸಿದ್ದಾರೆ.
ಖ್ಯಾತ ಚುನಾವಣಾ ವಿಶ್ಲೇಷಣಾ ಸಂಸ್ಥೆಯಾದ “ಸಿ-ವೋಟರ್’ ಹಾಗೂ “ಇಂಡಿಯಾ ಟುಡೇ’ ಜಂಟಿಯಾಗಿ ಈ ಸಮೀಕ್ಷೆ ನಡೆಸಿವೆ.
ಶೇ. 9ರಷ್ಟು ಜನರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬೇಕೆಂದು ಆಶಿಸಿದ್ದರೆ, ಶೇ. 7ರಷ್ಟು ಜನರು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರೇ ಪ್ರಧಾನಿಯಾಗಬೇಕೆಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.
ಆ. 1ರೊಳಗೆ ದೇಶದಲ್ಲಿ ಲೋಕಸಭಾ ಚುನಾವಣೆ ನಡೆದಿದ್ದರೆ, ಒಟ್ಟು 543 ಸ್ಥಾನಗಳಿರುವ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 307 ಸ್ಥಾನ, ಯುಪಿಎಗೆ 125 ಸ್ಥಾನ, ಇತರೆ ಪಕ್ಷಗಳಿಗೆ 111 ಸ್ಥಾನ ಸಿಗುತ್ತವೆ ಎಂದು ಹೇಳಲಾಗಿದೆ. ಈಗ, ಬಿಹಾರದಲ್ಲಿ ಸರ್ಕಾರ ಬದಲಾಗಿರುವುದರಿಂದ ಈಗ ಲೋಕಸಭಾ ಚುನಾವಣೆ ನಡೆದರೆ, ಎನ್‌ಡಿಎಗೆ 21 ಸ್ಥಾನಗಳು ನಷ್ಟವಾಗಿ 286 ಸ್ಥಾನ ಗಳಿಸಿ, ಸರ್ಕಾರ ರಚನೆಗೆ ಸ್ಪಷ್ಟ ಬಹುಮತ ಪಡೆಯಲಿದೆ. ಯುಪಿಎಗೆ 146 ಸ್ಥಾನ ಸಿಗಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಈ ಸಮೀಕ್ಷೆಯನ್ನು ಫೆಬ್ರವರಿಯಿಂದ ಆಗಸ್ಟ್ ಅವಧಿಯಲ್ಲಿ ನಡೆಸಲಾಗಿದ್ದು, ಇದರಲ್ಲಿ 1 ಲಕ್ಷದ 22 ಸಾವಿರದ 16 ಮಂದಿ ಭಾಗವಹಿಸಿದ್ದರೆಂದು ಹೇಳಲಾಗಿದೆ.
ರಾಜ್ಯದಲ್ಲಿ ಎನ್‌ಡಿಎಗೆ 13 ಸ್ಥಾನ
ಪ್ರಸ್ತುತ ಸನ್ನಿವೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ, ಕರ್ನಾಟಕದಲ್ಲಿ ಎನ್‌ಡಿಎಗೆ 13 ಸ್ಥಾನ ಸಿಗಲಿವೆ. ಮಹಾಘಟಬಂಧನಕ್ಕೆ 13 ಹಾಗೂ ಇತರರು 2 ಸ್ಥಾನ ಪಡೆಯಲಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.