Advertisement
ಶಿಕ್ಷಕರಾಗಿ ಬೋಧನೆ ಮಾಡಲು ಪ್ರತಿ ದಿನ ಸಿದ್ಧತೆ ನಡೆಸ ಬೇಕು. ಆದರೆ, ನರೇಗಾ ಕೂಲಿಗೆ ಯಾವುದೇ ಸಿದ್ಧತೆ ಇಲ್ಲದೆ, ಕೆಲಸ ಮಾಡುವುದಕ್ಕೂ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಸರ್ಕಾರ ತೂಗು ವಂತಾಗಿದೆ ಎಂದು ಅತಿಥಿ ಶಿಕ್ಷಕರ ಅಳಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ನರೇಗಾ ಕೂಲಿ ದಿನವೊಂದಕ್ಕೆ 289 ರೂ.ಗಳನ್ನು ನೀಡಲಾಗುತ್ತಿದೆ. ಅದೇ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಮಾಸಿಕ 7,500 ರೂ. ನಿಗದಿ ಮಾಡಿದ್ದಾರೆ.
Related Articles
Advertisement
ಇದೀಗ ಟಿಇಟಿ ಪಾಸ್ ಮಾಡಿಕೊಂಡಿದ್ದೇನೆ. ಆದರೆ, ಶಿಕ್ಷಕ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆಯದಿರುವುದರಿಂದ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಇತ್ತ ವೃತ್ತಿ ಬಿಟ್ಟು ಬೇರೆ ಹುದ್ದೆಗೂ ಹೋಗುವಂತಿಲ್ಲ. ಇದೀಗ 15 ಸಾವಿರ ಶಿಕ್ಷಕ ಹುದ್ದೆ ನೇಮಕಾತಿ ಮಾಡುವುದಾಗಿ ಸರ್ಕಾರ ಹೇಳಿದೆ. ಈ ಅವಕಾಶದಲ್ಲಿ ಶಿಕ್ಷಕ ಹುದ್ದೆ ಸಿಗದಿದ್ದರೆ, ಬೇರೆ ಆಲೋಚನೆ ಮಾಡುತ್ತೇನೆ ಎನ್ನುತ್ತಾರೆ ತುಮಕೂರಿನ ಅತಿಥಿ ಶಿಕ್ಷಕ ಸುನೀಲ್.
ಅತಿಥಿ ಉಪನ್ಯಾಸಕರ ಬೇಡಿಕೆಗಳ ಅಧ್ಯಯನಕೆ ಸಮಿತಿ ರಚನೆ
ಬೆಂಗಳೂರು: ರಾಜ್ಯದಲ್ಲಿರುವ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಅಧ್ಯಯನ ನಡೆಸಿ, ವಿಸ್ತೃತ ವರದಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಂಬಂಧ ಸೋಮವಾರ ಆದೇಶ ಹೊರಡಿಸಿದ್ದು,
ಇದರಲ್ಲಿ ಆರ್ಥಿಕ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸದಸ್ಯರಾಗಿರಲಿದ್ದಾರೆ. ಸಮಿತಿಯು ನಿಗದಿತ ಕಾಲಮಿತಿಯೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.
ಇಂದು ಸಭೆ: ಜತೆಗೆ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರ ಸಭೆಯನ್ನು ಮಂಗಳವಾರ ಬೆಳಗಾವಿಯಲ್ಲಿ ಕರೆಯಲಾಗಿದೆ ಕನಿಷ್ಠ 15 ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬೇರೆ ದಾರಿ ಇಲ್ಲದೆ, ಅತಿಥಿ ಶಿಕ್ಷಕರಾಗಿ ಬೋಧನೆ
ಕೊರೊನಾಗಿಂತ ಮೊದಲು ಖಾಸಗಿ ಶಾಲೆಯೊಂದರಲ್ಲಿ ಬೋಧನೆ ಮಾಡುತ್ತಿದ್ದೆ. ವೈಯಕ್ತಿಕ ಕಾರಣದಿಂದ ಬೇರೊಂದು ಶಾಲೆಗೆ ಹೋಗಲು ನಿರ್ಧರಿಸಿ, ಹಿಂದೆ ಬೋಧನೆ ಮಾಡುತ್ತಿದ್ದ ಶಾಲೆಯನ್ನು ಬಿಟ್ಟೆ. ಅದೇ ಸಮಯಕ್ಕೆ ಕೊರೊನಾ ಸೋಂಕು ಬಂದಿದ್ದರಿಂದ ಶಾಲೆಗಳು ಮುಚ್ಚಿದವು. ಹೊಸದಾಗಿ ಸೇರ್ಪಡೆಯಾಗಬೇಕಿರುವ ಶಾಲಾ ಆಡಳಿತ ಮಂಡಳಿಯು ಮುಂದಿನ ವರ್ಷದಿಂದ ಸೇರ್ಪಡೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಕೆಲಸವಿಲ್ಲದ ಕಾರಣ ಅನಿವಾರ್ಯವಾಗಿ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಬೋಧನೆ ಮಾಡಲು ಸೇರಿದ್ದೇನೆ. ಸರ್ಕಾರ ನೀಡುತ್ತಿರುವ 7,500 ವೇತನ ಯಾವುದಕ್ಕೂ ಸಾಲುತ್ತಿಲ್ಲ. ಏನು ಮಾಡುವುದೆಂಬ ದಾರಿ ತೋಚುತ್ತಿಲ್ಲ. ಕನಿಷ್ಠ 15 ಸಾವಿರ ರೂ.ಗಳಾದರೂ ನೀಡಿದರೆ, ಶಿಕ್ಷಕರಾಗಿ ಬೋಧನೆ ಮಾಡುವುದಕ್ಕೂ ಗೌರವ ಸಿಗುತ್ತದೆ ಎನ್ನುತ್ತಾರೆ ಅತಿಥಿ ಶಿಕ್ಷಕಿ ಶಿಲಾ
ಕನಿಷ್ಠ ವೇತನ ನೀಡಲು ಆಗ್ರಹ
ಅತಿಥಿ ಶಿಕ್ಷಕರಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಡಿಮೆ ವೇತನ ನೀಡಿ ಶಿಕ್ಷಣ ಸಂಸ್ಥೆಗಳು ಕೈತೊಳೆದುಕೊಳ್ಳುತ್ತಿವೆ. ಆದರೆ, 7ನೇ ವೇತನ ಆಯೋಗದ ಪ್ರಕಾರ ಕನಿಷ್ಠ ವೇತನ ದಿನವೊಂದಕ್ಕೆ 600 ರೂ. ನೀಡಬೇಕು. ಅದರಂತೆ ಕನಿಷ್ಠ 18 ಸಾವಿರ ರೂ. ನೀಡಬೇಕು. ಕೊನೇ ಪಕ್ಷ 15 ಸಾವಿರ ರೂ.ಗಳಾದರೂ ನೀಡಬೇಕು ಎನ್ನುತ್ತಾರೆ ಕಾರ್ಮಿಕ ಸಂಘಟನೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ.
- – ಎನ್.ಎಲ್. ಶಿವಮಾದು