ನಾರಾಯಣಪುರ: ಕೃಷ್ಣಾ ಅಚ್ಚುಕಟ್ಟು ಭಾಗದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಏ.10ರ ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಮುಖ್ಯ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಭಾರಿ ಮುಖ್ಯ ಇಂಜಿನಿಯರ್ ರಂಗರಾಮ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ನಾಯಕಿ ಮಹಾದೇವಿ ಬೇವಿನಾಳಮಠ, ಈಗಾಗಲೇ ಕೃಷ್ಣಾ ಅಚ್ಚುಕಟ್ಟು ಭಾಗದ ರೈತರು ಕಾಲುವೆ ನೀರನ್ನೇ ನಂಬಿ ಹಿಂಗಾರು ಹಂಗಾಮಿನ ಶೇಂಗಾ, ಭತ್ತ, ಮೆಣಸಿನಕಾಯಿ, ಸಜ್ಜೆ ಹಾಗೂ ಇನ್ನಿತರ ಬೆಳೆ ಬೆಳೆದಿದ್ದಾರೆ.
ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗೆ ರೈತರು ಸಾಲ ಮಾಡಿದ್ದಾರೆ. ಕಾಲುವೆ ನೀರು ನಂಬಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಸಮರ್ಪಕವಾಗಿ ನೀರು ಸಿಗದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಏ. 10ರ ವರೆಗೆ ಕಾಲುವೆಗೆ ನೀರು ಹರಿಸಬೇಕು. ಅಲ್ಲದೇ ಅಗ್ನಿ ಬಳಿ ಕಾಲುವೆ ದುರಸ್ತಿಗೆ ಸೂಕ್ತ ಕ್ರಮ ತೆಗೆದುಕೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಹನುಮಗೌಡ ಮಾತನಾಡಿ, ಕಾಲುವೆ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪಿಸಬೇಕು. ಮುಂಬರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತ ಮುಖಂಡರನ್ನು ಸದಸ್ಯರಾಗಿ ನೇಮಿಸಬೇಕು. ಒಂದೊಮ್ಮೆ ರೈತ ಸಂಘದ ಎಲ್ಲ ಬೇಡಿಕೆಗಳು ಈಡೇರದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಘದ ವತಿಯಿಂದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಪ್ರಭಾರಿ ಮುಖ್ಯ ಇಂಜಿನಿಯರ್ ರಂಗರಾಮ ಮಾತನಾಡಿ, 9 ಟಿಎಂಸಿ ಅಡಿ ನೀರನ್ನು ನೀರಾವರಿಗೆ ಬಳಕೆ ಮಾಡುವಂತೆ ಸರ್ಕಾರದಿಂದ ಈಗಾಗಲೇ ಸೂಚನೆ ಬಂದಿದೆ. ಅದರಂತೆ 4 ವಲಯದ ಮುಖ್ಯ ಇಂಜಿನಿಯರಗಳು ಸೇರಿ ಮಾ.19ರಂದು ಸಭೆ ನಡೆಸಿ ಎಲ್ಲಿಯವರೆಗೆ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯ ಎಂಬುದನ್ನು ಪ್ರಕಟಿಸಲಾಗುವುದು ಮತ್ತು ನಿಮ್ಮ ಸಂಘಟನೆ ಇನ್ನುಳಿದ ಬೇಡಿಕೆಗಳನ್ನು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಸಂಬಂಧಪಟ್ಟವರಿಗೆ ಉತ್ತರಿಸುವುದಾಗಿ ಭರವಸೆ ನೀಡಿದರು.
ಎಇಇ ಆರ್.ಎಲ್. ಹಳ್ಳೂರ, ಟಿ.ಎನ್. ರಾಮಚಂದ್ರ, ಟಿ.ಎ. ಅಜೀತಕುಮಾರ, ಪಿಎಸ್‌ಐ ಅರ್ಜುನಪ್ಪ, ರೈತ ಮುಖಂಡರಾದ ಹಣಮಂತರಾಯ ಮಡಿವಾಳರ, ಸಾಹೇಬಗೌಡ ಮದಲಿಂಗನಾಳ, ತಿಪ್ಪಣ್ಣ ಜಂಪಾ, ಮಲ್ಲಿಕಾರ್ಜುನ, ಚಂದ್ರು ಗೊಡ್ರಿಹಾಳ, ಶ್ರೀಶೈಲಗೌಡ, ಸೋಮನಗೌಡ, ಈರನಗೌಡ, ಚಿನ್ನಪ್ಪ ಡೊಳ್ಳಿ, ಬಸವರಾಜ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ರೈತ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.