Advertisement

ರಂಗಭೂಮಿಯ ಸೆನ್ಸಾರ್‌ ಮಂಡಳಿಗೆ ನಾರಾಯಣ ಶೆಟ್ಟಿ ನಂದಳಿಕೆ ಆಯ್ಕೆ

12:28 PM Mar 21, 2018 | |

ಮುಂಬಯಿ: ರಂಗಭೂಮಿಯ ಪ್ರದರ್ಶನ ಪೂರ್ವ ಮತ್ತು ಪ್ರತಿ ಪರಿವೀಕ್ಷಣ (ಸೆನ್ಸಾರ್‌) ಮಂಡಳಿಯ ತುಳು-ಕನ್ನಡ ವಿಭಾಗಕ್ಕೆ ನಗರದ ರಂಗಕರ್ಮಿ, ಕವಿ, ಲೇಖಕ ನಾರಾಯಣ ಶೆಟ್ಟಿ ನಂದಳಿಕೆ ಇವರು ಆಯ್ಕೆಯಾಗಿದ್ದಾರೆ. ಮುಂಬಯ ಕನ್ನಡ, ತುಳು ರಂಗಭೂಮಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯರಾಗಿರುವ ಇವರು ಕನ್ನಡ, ತುಳು ಭಾಷೆಗಳಲ್ಲಿ  ಒಟ್ಟು 16 ನಾಟಕಗಳನ್ನು ರಚಿಸಿದ್ದಾರೆ.

Advertisement

ಎರಡು ಮಹಿಳಾ ನಾಟಕ ಅಲ್ಲದೆ ಹಲವಾರು ನಾಟಕಗಳಿಗೆ ಸಾಹಿತ್ಯ, ಸಂವಾದ, ಪದ್ಯ ರಚನೆಗೈದಿದ್ದಾರೆ. ಇವರ ರಚನೆಯ ಬೊಜ್ಜ ನಾಟಕಕ್ಕೆ ಗಡಿನಾಡ ಕಲಾವಿದರು ಕಾಸರಗೋಡು  ಇವರಿಂದ ಹೊರನಾಡ ಉತ್ತಮ ಕೃತಿ ಪ್ರಶಸ್ತಿ ಮಾತ್ರವಲ್ಲದೆ ಈ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದೇ ನಾಟಕವನ್ನು ಮಾರ್ನಾಡು ಸಹೋದರು ಪಿ. ಎನ್‌. ರಾಮಚಂದ್ರ ಇವರ ನಿರ್ದೇಶನದಲ್ಲಿ ಸುದ್ಧ ಎನ್ನುವ ಹೆಸರಿನಿಂದ ನಿರ್ಮಾಣ ಮಾಡಿದ  ತುಳು ಡಿಜಿಟಲ್‌ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಮುಂಬಯಿಯಲ್ಲದೆ ಮಂಗಳೂರು ಮೊದಲಾದೆ‌ಡೆ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ. ಈ ಹಿಂದೆ ಮಂಗಳೂರು ಹಾಗೂ ಬಪ್ಪನಾಡು ಇಲ್ಲಿ ನಡೆದ ವಿಶ್ವತುಳು ಸಮ್ಮೇಳನದಲ್ಲಿ ಮುಂಬಯಿ ಸಾಹಿತ್ಯ ಹಾಗೂ ಮುಂಬಯಿ  ರಂಗ ಭೂಮಿಯ ಬಗ್ಗೆ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ್ದಾರೆ. ನಮ್ಮ ಕುಡ್ಲ ಟಿವಿಯಲ್ಲಿ ಎರಡು ಸಲ ಇವರ ಪರಿಚಯದ ನೇರ ಪ್ರಸಾರ ಕಾರ್ಯಕ್ರಮ ಪ್ರಸಾರಗೊಂಡಿದೆ. ಮುಂಬಯಿ, ಸೂರತ್‌, ವಾಪಿ, ಬರೋಡ, ಪುಣೆ, ಕೋಲ್ಹಾಪುರ, ಸಾಂಗ್ಲಿ ಮೀರಜ್‌ ಮಂಗಳೂರು ಹೀಗೆ ಹಲವಾರು ಕಡೆಗಳಲ್ಲಿ ಗೌರವಗಳು ಲಭಿಸಿದೆ. ಸಾಂಗ್ಲಿ ಮೀರಜ್‌ನ ತುಳು ಭವನದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪೆರ್ಮೆದ ತುಳುವೆ ಎಂಬ ಬಿರುದು ಹಾಗೂ ನಂದಳಿಕೆ ಮುದ್ದಣ ಪ್ರಶಸ್ತಿಯೊಂದಿಗೆ ಇತ್ತೀಚೆಗೆ  ಮುಂಬಯಿ ವಿವಿಯಿಂದ ಗೌರವ ಸಮ್ಮಾನಗಳು ಲಭಿಸಿವೆ.

ಚೆಂಬೂರು ಕರ್ನಾಟಕ ಶಾಲೆಯು ಕಳೆದ ಹಲವಾರು ವರ್ಷಗಳಿಂದ ರಜೆ ಸಮಯದಲ್ಲಿ  ನಡೆಸುತ್ತಿರುವ ಮಕ್ಕಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸತತ ಭಾಗವಹಿಸುತ್ತಿದ್ದಾರೆ. ಇವರ ಬೊಜ್ಜ ನಾಟಕ, ತುಳು ತುಪ್ಪೆ ಅಂಕಣ ಲೇಖನಗಳ ಕೃತಿಗಳು ಪ್ರಕಟಗೊಂಡಿವೆ. ಕಳೆದ ಹದಿನೈದು ವರ್ಷಗಳಿಂದ ಬಂಟರವಾಣಿ ಪತ್ರಿಕೆಯ ಸಂಪಾದಕ ಮಂಡಳಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next