Advertisement

ಪಠ್ಯ ಪುಸ್ತಕ ವಿತರಣೆ ವಿಳಂಬ: ಕ್ರಮಕ್ಕೆ ಆಗ್ರಹ

07:35 AM Jul 27, 2017 | Team Udayavani |

ವೇಣೂರು: ಸರಕಾರಿ ಪ್ರಾಥಮಿಕ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಪಠ್ಯಪುಸ್ತಕ ಸಿಕ್ಕಿಲ್ಲ. ಶಾಲೆ ಪ್ರಾರಂಭವಾಗಿ ತಿಂಗಳೆರಡು ಕಳೆಯುತ್ತಿದೆ. ಪಠ್ಯಪುಸ್ತಕ ನೀಡದೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ನಾರಾವಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾರಾವಿ ಗ್ರಾ.ಪಂ.ನ 2017 -18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಜರಗಿತು. ಪಠ್ಯಪುಸ್ತಕ ವಿತರಣೆ ವಿಳಂಬದ ಕುರಿತು ಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್‌ ಅಧಿಕಾರಿ, ಬೆಳ್ತಂಗಡಿ ಶಿಕ್ಷಣ ಇಲಾಖೆಯ ಯಶೋಧರ ಸುವರ್ಣ ಅವರು ಪಠ್ಯ ಪುಸ್ತಕ ವಿತರಣೆಯಲ್ಲಿ ಇಲಾಖೆಯಿಂದ ಲೋಪವಾಗಿಲ್ಲ. ಮುದ್ರಣ ವ್ಯವಸ್ಥೆಯಲ್ಲಿ ತೊಂದರೆಯಾಗಿ ಈ ಸಮಸ್ಯೆ ಆಗಿದೆ. ಕೆಲವೇ ದಿನಗಳಲ್ಲಿ ಪುಸ್ತಕ ರವಾನೆಯಾಗಲಿದೆ ಎಂದರು.

Advertisement

ಪಶುವೈದ್ಯಾಧಿಕಾರಿ ನೇಮಕಕ್ಕೆ ಅಗ್ರಹ
ನಾರಾವಿ ಪಶು ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ಪಶುವೈದ್ಯರು ಇಲ್ಲ. ಇರುವ ಪಶು ವೈದ್ಯರಿಂದ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಪೂರ್ಣಕಾಲಿಕ ಪಶುವೈದ್ಯರ ನೇಮಕ ಒತ್ತಾಯಿಸಿ ಪಂಚಾಯತ್‌ ನಿರ್ಣಯ ಕೈಗೊಂಡಿತು.

ಗೋದಾಮಿಗೆ ಬೇಡಿಕೆ 
ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ದಯಾನಂದ ಮಾತನಾಡಿ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಲಾಭದಾಯಕವಾಗಿದೆ. ಧ.ಗ್ರಾ. ಯೋಜನೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು. ರೈತರ ಅನುಕೂಲತೆಯ ದೃಷ್ಟಿಯಿಂದ ಪಂಚಾಯತ್‌ ಗೋದಾಮು ಒದಗಿಸಿಕೊಟ್ಟರೆ ಕೃಷಿ ಸುಣ್ಣವನ್ನು ದಾಸ್ತಾನಿರಿಸಲಾಗುವುದು. ಇದರಿಂದ ಸರಬರಾಜಿಗೆ ಅನುಕೂಲವಾಗಲಿದೆ ಎಂದರು.

ಶಿಕ್ಷಕಿ ಕೊರತೆ
ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಬಾರದೆಂಬ ನಿಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದು ಅಂಗನವಾಡಿ ಇಲಾಖಾಧಿಕಾರಿ ತಿಳಿಸಿದರು. ಈ ವೇಳೆ ನೂಜೋಡಿ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯ ಕೊರತೆ ಇರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

ಅನುದಾನದ ವರ್ಗಾವಣೆ ಬೇಡ
ಪ.ಜಾತಿ ಮತ್ತು ಪ.ಪಂಗಡಕ್ಕೆ ಮೀಸಲಿಟ್ಟು ಅನುದಾನವನ್ನು ಇತರೆಡೆಗಳಿಗೆ ವರ್ಗಾವಣೆ ಮಾಡಲಾಗುತ್ತಿರುವುದು ಕಂಡು ಬಂದಿದೆ. ಈ ರೀತಿಯಾದರೆ ಒಂದು ವರ್ಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಅನುದಾನ ಬೇರೆಡೆಗೆ ವರ್ಗಾವಣೆಯಾಗಬಾರದು ಎಂದು ಗ್ರಾ.ಪಂ. ಸದಸ್ಯ ಉದಯ ಹೆಗ್ಡೆ ಅವರು ಎಂಜಿನಿಯರ್‌ ಅವರಿಗೆ ತಿಳಿಸಿದರು.

Advertisement

94ಸಿ:  ಕಾಲಾವಕಾಶ ವಿಸ್ತರಣೆ 
94ಸಿ ಯೋಜನೆಯಡಿ ನಾರಾವಿ ಗ್ರಾಮದಲ್ಲಿ 179 ಹಾಗೂ ಕುತ್ಲೂರು ಗ್ರಾಮದಲ್ಲಿ 118 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಸೆಪ್ಟೆಂಬರ್‌

ಕಸ್ತೂರಿರಂಗನ್‌ ವರದಿ
ಕಸ್ತೂರಿರಂಗನ್‌ ವರದಿ ನಾರಾವಿ ಗ್ರಾಮಕ್ಕೆ ಅನ್ವಯವಾಗುತ್ತದೆಯೋ, ಅದರ ನಿಯಮಗಳು ಇಲ್ಲಿಯೂ ಜಾರಿಯಾಗುತ್ತದೆಯೇ ಎಂದು ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಯನ್ನು ಪ್ರಶ್ನಿಸಿದರು. ಇದರ ನಿರ್ಧಾರ ಸರಕಾರದ ಮಟ್ಟದಲ್ಲಿರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ  ಎಂದರು. ಕಾಡುಪ್ರಾಣಿಗಳ ಹಾವಳಿಗೆ ನಿಯಂತ್ರಣ ಹೇರುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿನ ಮನೆಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿದರು.

ಅಭಿವೃದ್ಧಿಗೆ ಒತ್ತು 
ಗ್ರಾಮದ ಅಭಿವೃದ್ಧಿಗೆ ರಾಜಕೀಯ ರಹಿತವಾಗಿ ಒತ್ತುನೀಡಿದ್ದೇವೆ. ಗ್ರಾಮಸಭೆಯಲ್ಲಿ ಪ್ರಶ್ನೆ ಕೇಳಲು ಗ್ರಾಮಸ್ಥರು ಹಿಂಜರಿಯಬಾರದು. ಯಾವುದೇ ಸರಕಾರಿ ಯೋಜನೆ, ಅನುದಾನದ ಬಗ್ಗೆ ಮಾಹಿತಿ ಪಡೆಯಲು ನೇರವಾಗಿ ಪಂಚಾಯತ್‌ಗೆ ಭೇಟಿ ನೀಡಬಹುದು.
– ರವೀಂದ್ರ ಪೂಜಾರಿ ಗ್ರಾ.ಪಂ. ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next