Advertisement

ನಂಜನಗೂಡಲ್ಲಿ ಉಪಚುನಾವಣೆ: ಕಾಂಗ್ರೆಸ್‌ ರಣಕಹಳೆ

01:01 PM Mar 13, 2017 | Team Udayavani |

ಮೈಸೂರು: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಭೆ ನಡೆಸುವ ಮೂಲಕ ಕಾಂಗ್ರೆಸ್‌ ಚುನಾವಣಾ ರಣಕಹಳೆ ಮೊಳಗಿಸಿತು.

Advertisement

ಭಾನುವಾರ ನಂಜನಗೂಡು ನಗರದ ವಿದ್ಯಾವರ್ಧಕ ಶಾಲೆ ಮೈದಾನದಲ್ಲಿ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಬಹುತೇಕ ಸಚಿವರು, ಶಾಸಕರು, ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ವಿರುದ್ಧ ಹರಿಹಾಯ್ದರು.

ಮತದಾರರನ್ನು ಓಲೈಸುವ ಸಲುವಾಗಿ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರುವಂತೆ ಲಿಂಗಾಯಿತ, ದಲಿತ, ಉಪ್ಪಾರ, ಮುಸ್ಲಿಂ ಜಾತೀ ಸಮೀಕರಣ ಮಾಡಿಯೇ ಸಚಿವರು, ಶಾಸಕರಿಗೆ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಅಂಬೇಡ್ಕರ್‌ ವಾದಿ ಎನ್ನುತ್ತಿದ್ದ ಶ್ರೀನಿವಾಸ ಪ್ರಸಾದ್‌ ತಮ್ಮ ಸ್ವಾರ್ಥಕ್ಕಾಗಿ ಕೋಮುವಾದಿ ಪಕ್ಷ ಸೇರಿ ಬಿಜೆಪಿ ಸರ್ಕಾರ ಮತ್ತು ಮೋದಿಯನ್ನು ಹೊಗಳುತ್ತಿದ್ದಾರೆ. ಇಂಥವರಿಗೆ ಮತ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಶ್ರೀನಿವಾಸಪ್ರಸಾದ್‌ ಸ್ವಾಭಿಮಾನದ ಹೆಸರಿನಲ್ಲಿ ರಾತ್ರಿ ಕಂಡ ಬಾವಿಗೆ ಹಗಲೇ ಬೀಳಲು ಹೊರಟಿದ್ದಾರೆ. ಬಿಜೆಪಿಯವರು ಉತ್ತರಪ್ರದೇಶದಲ್ಲಿ ಮಳೆ ಬಿದ್ದರೆ, ಕರ್ನಾಟಕದಲ್ಲಿ ಕೊಡೆ ಹಿಡಿಯುತ್ತಿದ್ದಾರೆ. ಅಲ್ಲಿನ ವಾತಾವರಣವೇ ಬೇರೆ, ಇಲ್ಲಿನ ವಾತಾವರಣವೇ ಬೇರೆ. ಕರ್ನಾಟಕದಲ್ಲಿ ಬಿಜೆಪಿಯ ಮಕ್ಮಲ್‌ ಟೋಪಿ ಆಟ ನಡೆಯುವುದಿಲ್ಲ ಎಂದರು.

1974ರಲ್ಲಿ ಪ್ರಸಾದ್‌ ಎಲೆತೋಟದಲ್ಲಿ ಚುನಾವಣೆಗೆ ನಿಂತು 6 ಸಾವಿರ ವೋಟ್‌ ತೆಗೆದುಕೊಂಡಿದ್ದರು. ದಲಿತ ನಾಯಕ ಬೆಳೆಯಲಿ ಎಂಬ ಭಾವನೆ ನಮ್ಮಲ್ಲೂ ಇತ್ತು. ಪ್ರಸಾದ್‌ ಅವರೇ ಈ ಚುನಾವಣೆಯಲ್ಲಿ ನೀವು ನಂಜನಗೂಡು ಸುತ್ತಬೇಕಿಲ್ಲ. ನಂಜನಗೂಡು ಪಟ್ಟಣದಲ್ಲಿ ನಾನು, ನೀವು, ಬಿ.ಎಸ್‌.ಯಡಿಯೂರಪ್ಪ ಒಂದೇ ವೇದಿಕೆಯಲ್ಲಿ ಕ್ಷೇತ್ರಕ್ಕೆ ಯಾರ ಕೊಡುಗೆ ಏನು ಎಂಬುದನ್ನು ಚರ್ಚೆ ಮಾಡೋಣ. ಸುಮ್ಮನೆ ಬಸ್‌ಸ್ಟ್ಯಾಂಡ್‌ನ‌ಲ್ಲಿ ಬೊಂಬಡಾ ಹೊಡೆಯುವುದು ಬೇಡ ಎಂದು ಸವಾಲು ಹಾಕಿದರು.

Advertisement

ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ಭೀಕರ ಬರಗಾಲದಲ್ಲಿ ಕ್ಷೇತ್ರದ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಶ್ರೀನಿವಾಸಪ್ರಸಾದ್‌, ಸ್ವಪ್ರತಿಷ್ಠೆಗೆ ರಾಜೀನಾಮೆ ನೀಡಿ ಉಪ ಚುನಾವಣೆ ತಂದಿದ್ದಾರೆ. ಯಾವ ಉದ್ದೇಶಕ್ಕೆ ರಾಜೀನಾಮೆ ನೀಡಿದೆ ಎಂಬುದನ್ನು ಜನತೆಗೆ ಹೇಳಿ? ಮೂರೂವರೆ ವರ್ಷದಲ್ಲಿ ನಂಜನಗೂಡಲ್ಲಿ ಒಂದೇ ಒಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.2008ರ ಚುನಾವಣೆಯಲ್ಲಿ ನಿಮ್ಮ ಗೆಲುವಿನ ಅಂತರ ಕೇವಲ 860 ಮತಗಳು, ಅವು ಕೊನೆಯ ಸುತ್ತಿನಲ್ಲಿ ಚಿನ್ನದಗುಡಿ ಹುಂಡಿ ಬೂತ್‌ನಲ್ಲಿದ್ದ ಮತಗಳಲ್ಲವೇ?

ಇದು ಸಿದ್ದರಾಮಯ್ಯ ಅವರ ಸಹಾಯವಲ್ಲವೇ ಎಂದು ಕೇಳಿದರು. ಬಸವರಾಜ ರಾಯರೆಡ್ಡಿ, ಆರೋಗ್ಯ ಸರಿ ಇಲ್ಲದ ಶ್ರೀನಿವಾಸಪ್ರಸಾದ್‌ ಕಂದಾಯ ಇಲಾಖೆಯನ್ನು ಸರಿಯಾಗಿ ನಿಭಾಯಿಸಲಾಗುತ್ತಿರಲಿಲ್ಲ. ಮೈಸೂರು – ಬೆಂಗಳೂರು ನಡುವೆ ಓಡಾಡಿದ್ದು ಬಿಟ್ಟರೆ, ಬೇರೆ ಜಿಲ್ಲೆಗೆ ಪ್ರವಾಸ ಮಾಡಲೇ ಇಲ್ಲ. ಕೊಪ್ಪಳಕ್ಕೆ ಬನ್ನಿ ವಿಶೇಷ ವಿಮಾನ ಮಾಡಿಕೊಡುತ್ತೇನೆ ಎಂದರೂ ಬರಲಿಲ್ಲ ಎಂದು ದೂಷಿಸಿದರು. ತನ್ವೀರ್‌, ಸ್ವಾಭಿಮಾನದ ಬಗ್ಗೆ ಮಾತ ನಾಡುವ ಶ್ರೀನಿವಾಸಪ್ರಸಾದ್‌, ಜನಾದೇಶವನ್ನು ಧಿಕ್ಕರಿಸಿ ಮತ್ತೆ ಚುನಾವಣೆಗೆ ಬಂದಿದ್ದಾರೆ. ಅವರಿಗೆ ಪಾಠ ಕಲಿಸಿ ಎಂದರು.

ಸಚಿವ ಡಾ. ಎಚ್‌.ಸಿ. ಮಹದೇವಪ್ಪಮಾತನಾಡಿ, ಸಿದ್ದರಾಮಯ್ಯ ಮುಖ್ಯ ಮಂತ್ರಿ ಯಾಗಿರುವವರೆಗೂ ನಾನು ವಿಧಾನ ಸೌಧ ಪ್ರವೇಶ ಮಾಡಲ್ಲ ಎಂದು ಶ್ರೀನಿವಾಸ ಪ್ರಸಾದ್‌ ಶಪಥ ಮಾಡಿದ್ದಾರೆ. ಹಾಗಾಗಿ ಚುನಾವಣೆ ಯಲ್ಲಿ ಪ್ರಸಾದ್‌ ಸ್ಪರ್ಧೆಯ ಬಗ್ಗೆ ನಮಗೆ ಹೆದರಿಕೆ ಇಲ್ಲ. ಈ ಚುನಾವಣೆ ನಮಗೆ ಸವಾಲೂ ಅಲ್ಲ. ಪ್ರತಿಷ್ಠೆಯೂ ಅಲ್ಲ. ಏಕವಚನ, ವ್ಯಕ್ತಿಗತ ನಿಂದನೆ ಪ್ರಜಾಪ್ರಭುತ್ವದಲ್ಲಿ ಶೋಭೆ ಯಲ್ಲ. ಹೀಗಾಗಿ ಪ್ರಸಾದ್‌ ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳುವುದನ್ನು ಕಲಿಯಲಿ ಎಂದು ತಿರುಗೇಟು ನೀಡಿದರು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next