ಬೆಂಗಳೂರು: ಸಾರಿಗೆ ಸಿಬ್ಬಂದಿ ರಜೆ ಮಂಜೂರಾತಿ ಮತ್ತು ಹಾಜರಾತಿಯಲ್ಲಿ ಪಾರದರ್ಶಕತೆ ತರಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯು “ನಮ್ಮ ಸಾರಿಗೆ’ ವ್ಯವಸ್ಥೆ ಪರಿಚಯಿಸಿದೆ.
“ಆನ್‌ಲೈನ್ ಲೀವ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (ಒಎಲ್‌ಎಂಎಸ್) ಇದಾಗಿದ್ದು, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಜರಾತಿ ನಿರ್ವಹಣೆ ಹಾಗೂ ರಜೆ ನಿರ್ವಹಣೆಗೆ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಸಂಸ್ಥೆಯ ಪ್ರತಿ ಸಿಬ್ಬಂದಿಗೆ ಪ್ರತ್ಯೇಕ ಯ್ಯೂಸರ್‌ನೇಮ್,ಪಾಸ್‌ವರ್ಡ್ ನೀಡಲಾಗಿದೆ. ಸಾರಿಗೆ ಸಿಬ್ಬಂದಿ ಆನ್ ಲೈನ್ ಮೂಲಕವೇ ರಜೆಗೆ ಅರ್ಜಿ ಸಲ್ಲಿಸಬಹುದು. ಅದೇ ರೀತಿ, ಹಾಜರಾತಿಗೂ ಇದು ಅನ್ವಯ. ಇದರ ಮುಖ್ಯ ಉದ್ದೇಶ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಜತೆಗೆ ಆಡಳಿತ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಕಾರ್ಯಾಚರಣೆ ಸುಧಾರಿಸುವುದಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ಕಿರುಕುಳ ಆರೋಪವಿತ್ತು: ಈಚೆಗೆ ನಡೆದ ಸಾರಿಗೆ ಮುಷ್ಕರದಲ್ಲಿ ಸಿಬ್ಬಂದಿ ಪ್ರಮುಖ ಬೇಡಿಕೆಗಳಲ್ಲಿ ರಜೆಮಂಜೂರಾತಿಗೆ ಮೇಲಧಿಕಾರಿಗಳ ಕಿರುಕುಳ ಕೂಡಒಂದಾಗಿತ್ತು. ರಜೆ ಮಂಜೂರು ಮಾಡಲುಅಧಿಕಾರಿಗಳ “ಕೈಬಿಸಿ’ ಮಾಡಬೇಕಾಗುತ್ತದೆ ಎಂಬ ಆರೋಪವೂ ಕೇಳಿ ಬರುತ್ತಿತ್ತು.
ಬಿಎಂಟಿಸಿ; ನಿಯೋಜನೆಗೆ ಹೊಸ ಪದ್ಧತಿ: ಬಿಎಂಟಿಸಿ ಜ.1ರಿಂದ ಚಾಲನಾ ಸಿಬ್ಬಂದಿಗೆ ಹೊಸದಾಗಿ ಕರ್ತವ್ಯ ನಿಯೋಜನಾ ಪದ್ಧತಿ ಜಾರಿಗೊಳಿಸಲು ನಿರ್ಧರಿಸಿದೆ. ಕೋವಿಡ್ ಹಾವಳಿಯಿಂದ ಸಂಸ್ಥೆ ಪ್ರಯಾಣಿಕರ ಕೊರತೆಎದುರಿಸುತ್ತಿದ್ದು, ಬಸ್‌ಗಳ ಕಾರ್ಯಾಚರಣೆ, ಚಾಲನಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಹೊಸ ಪದ್ಧತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಅದರಂತೆ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಚಾಲನಾ ಸಿಬ್ಬಂದಿ ಸೇವಾ ಹಿರಿತನಕ್ಕೆ ಅನುಗುಣವಾಗಿ ಜೇಷ್ಠತಾ ಪಟ್ಟಿಯನ್ನು ಹುದ್ದೆವಾರು ತಯಾರಿಸಲಾಗುವುದು.
ವಾರದ ರಜೆ ಆಯ್ಕೆಗೆ ಅನುಕೂಲ: ಘಟಕದಲ್ಲಿನ ಎಲ್ಲಾಅನುಸೂಚಿಗಳಿಗೆ ಪ್ರತ್ಯೇಕ ಮಾರ್ಗದ ಬ್ಲಾಕ್, ಚಾಲನಾ ಸಿಬ್ಬಂದಿ ಜೇಷ್ಠತಾ ಪಟ್ಟಿಯನ್ನು ಮುಂಚಿತವಾಗಿ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು. ಕೌನ್ಸೆಲಿಂಗ್ ವೇಳೆ ಚಾಲನಾ ಸಿಬ್ಬಂದಿಗೆ ತಮಗೆ ಸೂಕ್ತವಾದ ಮಾರ್ಗ ಮತ್ತು ವಾರದ ರಜೆ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಸಾಮಾನ್ಯ ಪಾಳಿ ಅನುಸೂಚಿಗಳಿಗೆ ಚಾಲನಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವಾಗ ಕನಿಷ್ಠ ಶೇ.50ರಷ್ಟು ಮಹಿಳಾ ನಿರ್ವಾಹಕಿಯರನ್ನು ನಿಯೋಜಿಸಲು ಆದ್ಯತೆ ನೀಡಲಾಗುವುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.