Advertisement

ಕರ್ನಾಟಕ ಯುವ ಕಾಂಗ್ರೆಸ್ ನ ‘ನಮ್ಮ ಪೊಲೀಸ್ : ನಮ್ಮ ಹೆಮ್ಮೆ’ಅಭಿಯಾನಕ್ಕೆ ಚಾಲನೆ

07:10 PM May 26, 2021 | sudhir |

ಬೆಂಗಳೂರು ; ಕೋವಿಡ್ ಸೋಂಕಿನ ಎರಡನೇ ಅಲೆ ನಡುವೆಯೂ ಕೊರೋನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಪೊಲೀಸರಿಗೆ ಗೌರವ ಸೂಚಿಸುವ “ ನಮ್ಮ ಪೊಲೀಸ್: ನಮ್ಮ ಹೆಮ್ಮೆ” ರಾಜ್ಯ ಮಟ್ಟದ ಅಭಿಯಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಇಂದು ಚಾಲನೆ ನೀಡಿದರು.

Advertisement

ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಪೊಲೀಸರಿಗೆ ಕೋವಿಡ್ ನಿಂದ ರಕ್ಷಣೆ ಪಡೆಯುವ ಎಲ್ಲಾ ಪರಿಕರಗಳನ್ನು ಒಳಗೊಂಡ ಸಮಗ್ರ ಕಿಟ್ ವಿತರಣೆ ಮಾಡಿದರು.

ಬಳಿಕ ಮಾತನಾಡಿದ  ಶ್ರೀನಿವಾಸ್, ಕೋವಿಡ್ ಸಂದರ್ಭದಲ್ಲಿ ಜನರ ಸೇವೆ ಮಾಡುವುದು ನಮ್ಮ ಗುರಿಯಾಗಿದ್ದು, ರಾಷ್ಟ್ರೀಯ ಯುವ ಕಾಂಗ್ರೆಸ್ ದೇಶಾದ್ಯಂತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದೆ. ನಾವು ರಾಜಕೀಯ ಉದ್ದೇಶದಿಂದ ಇಂತಹ ಚಟುವಟಿಕೆ ನಡೆಸುತ್ತಿಲ್ಲ. ಯಾವುದೇ ಜಾತಿ, ಧರ್ಮ, ಸಮುದಾಯವನ್ನು ಗುರಿಮಾಡಿಕೊಂಡು ನಾವು ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ನ ಸಂಸ್ಕೃತಿ ಜನರ ಸೇವೆ ಮಾಡುವುದಾಗಿದೆ, ನಾವು ರಾಜಕೀಯವನ್ನು ಮೀರಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದರು.

ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಸೇವಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಆದೇಶದಂತೆ ಪ್ರದೇಶ ಯುವ ಕಾಂಗ್ರೆಸ್ ತಂಡ ಅನ್ನ, ಔಷಧಿ, ಆಂಬ್ಯುಲೆನ್ಸ್ ಸೌಲಭ್ಯಗಳ ಜತೆಗೆ ಲಸಿಕೆಗೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಜನರ ಸೇವೆ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ :ಭಾರತಕ್ಕೆ ಫೈಜರ್ ನಿಂದ 50ಮಿಲಿಯನ್ ಡೋಸ್ ರಫ್ತಿಗೆ ಸಿದ್ಧ, ಮಾಡೆರ್ನಾ ಲಸಿಕೆ ಈ ವರ್ಷಕ್ಕಿಲ್ಲ!

Advertisement

ಬಳಿಕ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ , ಪೊಲೀಸರು ಸೋಂಕು ನಿಯಂತ್ರಣ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದು, ಕನಿಷ್ಠ 16 ರಿಂದ 18 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರಿಗೆ ಗೌರವದ ಜತೆಗೆ ಧನ್ಯವಾದ ಹೇಳುವುದು ಈ ಅಭಿಯಾನದ ಉದ್ದೇಶವಾಗಿದೆ. ಕೊರೋನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಸೋಂಕಿನಿಂದ ಬಾಧಿತರಾದ ಎರಡನೇ ಅತಿ ದೊಡ್ಡ ವರ್ಗವಾಗಿದೆ ಎಂದರು.

ಸುರಕ್ಷತಾ ಕಿಟ್ ನಲ್ಲಿ ಮುಖಗವಸು, ಫೇಸ್ ಶೀಲ್ಡ್, ಕೈಗವಸು, ಸ್ಯಾನಿಟೈರ್, ಸೋಂಕು ನಿವಾರಕ, ಆಕ್ಸಿ ಮೀಟರ್ ಮತ್ತು ದೇಹದ ತಾಪಮಾನ ಪರೀಕ್ಷಿಸುವ ಉಪಕರಣ ಒಳಗೊಂಡಿದೆ.

ಈ ಸಂದರ್ಭದಲ್ಲಿ ರಾಷ್ಟ್ರ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಸುರಬಿ ದ್ವಿವೇದಿ, ಪ್ರದೇಶ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಭವ್ಯ ಕೆ.ಆರ್. ಜೆ.ಬಿ.ಎಂ ಅಧ್ಯಕ್ಷ ಸಿರಿಲ್ ಪ್ರಭು, ಕೆಪಿವೈಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆರೀಪ್ ಉಲ್ಲಾ ಕೆ.ಎಂ., ಅತೀಖ್ ಉಲ್ಲಾ, ಎಚ್.ಎಸ್. ಸಂದೀಪ್, ಪ್ರದೀಪ್, ಮನ್ನನ್, ವಿಜಯ್ ಆನಂದ್ ಮತ್ತಿತರ ಯುವ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next