Advertisement

ನಮ್ಮ ಮೆಟ್ರೋ; ಮುಂದುವರಿದ ನಷ್ಟದ ಪಯಣ

02:15 PM Aug 28, 2020 | Suhan S |

ಬೆಂಗಳೂರು: ನಮ್ಮ ಮೆಟ್ರೋ ನಷ್ಟದ ಪಯಣ ಮುಂದುವರಿದಿದ್ದು, ಪ್ರಸಕ್ತ ಸಾಲಿನಲ್ಲಿ 54.77 ಕೋಟಿ ರೂ. ನಿವ್ವಳ ನಗದು ನಷ್ಟ ಅನುಭವಿಸಿದೆ. ಕಳೆದ ವರ್ಷ ನಿವ್ವಳ ನಗದು ನಷ್ಟ 29 ಕೋಟಿ ರೂ. ಆಗಿತ್ತು. ನಗದು ಆದಾಯ 54.20 ಕೋಟಿ ರೂ. ಬಂದಿದೆ. ಆದರೆ, ಸಾಲದ ಮೇಲಿನ ಬಡ್ಡಿ ಹೊಂದಾಣಿಕೆ ನಂತರ ನಿವ್ವಳ ನಗದು ನಷ್ಟ 54.77 ಕೋಟಿ ರೂ. ಆಗುತ್ತದೆ.

Advertisement

ಗುರುವಾರ ಪ್ರಕಟಗೊಂಡ 2019-20ನೇ ಸಾಲಿನ ಫ‌ಲಿತಾಂಶದಲ್ಲಿ ಕಾರ್ಯಾಚರಣೆ ಆದಾಯದಲ್ಲಿ ಶೇ.6.16 ವೃದ್ಧಿ ಕಂಡುಬಂದಿದೆ. ವಾಣಿಜ್ಯ ಸಂಚಾರದಿಂದ ಬಂದ ಆದಾಯ ಪ್ರಮಾಣ 376.88 ಕೋಟಿ ರೂ. ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 355.02 ಕೋಟಿ ರೂ. ಆಗಿತ್ತು. ಕೋವಿಡ್ ದಿಂದ ಸುಮಾರು 5 ತಿಂಗಳಿಂದ ಸಂಚಾರ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಬರುವ ಪ್ರಸಕ್ತ ಹಣಕಾಸು ವರ್ಷದಲ್ಲೂ ನಷ್ಟದ ಪ್ರಮಾಣ ಇನ್ನಷ್ಟು ಏರಿಕೆ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

2019-20ನೇ ಹಣಕಾಸು ವರ್ಷದಲ್ಲೂ 598.58 ಕೋಟಿ ರೂ. ಒಟ್ಟಾರೆ ನಿವ್ವಳ ನಷ್ಟ ದಾಖಲಾಗಿದೆ. ಕಳೆದ ಮಾರ್ಚ್‌ಗೆ ಅಂತ್ಯಗೊಂಡಂತೆ ಮೊದಲ ಹಂತದ ಎಲ್ಲಾ ಸ್ವತ್ತುಗಳ ಮೇಲಿನ ಸವಕಳಿ ಸೇರಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು ನಿವ್ವಳ ಒಟ್ಟಾರೆ 598.58 ಕೋಟಿ ರೂ. ನಷ್ಟ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 498.41 ಕೋಟಿ ರೂ. ನಷ್ಟ ಆಗಿತ್ತು. ಅಂದರೆ ನಷ್ಟದ ಬಾಬ್ತು ಸುಮಾರು ಶೇ.17 ಹೆಚ್ಚಳ ಆಗಿದೆ. ನಾನ್‌ ಫೇರ್‌ ಬಾಕ್ಸ್‌ನಲ್ಲೂ ಕುಸಿತ: ಇನ್ನು ನಾನ್‌ ಫೇರ್‌ ಬಾಕ್ಸ್‌ ಆದಾಯ ಅಂದರೆ ವಾಣಿಜ್ಯ ಚಟುವಟಿಕೆ, ಪ್ರಾಪರ್ಟಿ ಡೆವಲಪ್‌ಮೆಂಟ್‌ನಿಂದ ಬಂದ ಆದಾಯದಲ್ಲಿ ಕುಸಿತ ಕಂಡುಬಂದಿದ್ದು, 41.91 ಕೋಟಿ ರೂ. ದಾಖಲಾಗಿದೆ. ಕಳೆದ ವರ್ಷ ಈ ಮೂಲದಿಂದ 47.33 ಕೋಟಿ ರೂ. ಬಂದಿತ್ತು. ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ವೇತನ ಪರಿಷ್ಕರಣೆಯಿಂದ 34.49 ಕೋಟಿ ರೂ., 6 ಬೋಗಿಗಳ ರೈಲು ನಿರ್ವಹಣೆ, ವಿದ್ಯುತ್‌ ಶುಲ್ಕ ಹೆಚ್ಚಳ, ಮೊದಲ ಹಂತದಲ್ಲಿ ವಿವಿಧ ವ್ಯವಸ್ಥೆ, ಹೊಸ ಒಪ್ಪಂದಗಳ ನಿರ್ವಹಣೆ ಖರ್ಚುಗಳಲ್ಲಿ ಏರಿಕೆ, ಸ್ವತ್ತುಗಳ ಸವಳಿಕೆಯಿಂದ 583.90 ಕೋಟಿ ರೂ. ಹೊರೆ ಆಗಿದೆ.

3ರಿಂದ 6 ಬೋಗಿ: ಒಂದೇ ದಿನದಲ್ಲಿ 6.01 ಲಕ್ಷ ಪ್ರಯಾಣಿಕರ ಸಂಚಾರ ಹಾಗೂ 1.67 ಕೋಟಿ ರೂ. ಆದಾಯ ದಾಖಲೆಗೆ 2019-20ನೇ ಹಣಕಾಸು ವರ್ಷ ಸಾಕ್ಷಿಯಾಗಿದೆ. 2019ರ ಅ.25ರಂದು ಅತಿ ಹೆಚ್ಚು 6,01,164 ಪ್ರಯಾಣಿಕರು ಸಂಚರಿಸಿದ್ದಾರೆ. ಅದೇ ರೀತಿ, 2020ರ ಮಾ.2ರಂದು ಅತ್ಯಧಿಕ 1.67 ಕೋಟಿ ರೂ. ಆದಾಯ ದಾಖಲಾಗಿದೆ ಎಂದೂ ಬಿಎಂಆರ್‌ಸಿಎಲ್‌ ತಿಳಿಸಿದೆ. ಇದೇ ಅವಧಿಯಲ್ಲಿ ಎಲ್ಲಾ 50 ಮೆಟ್ರೋ ರೈಲು ಮೂರರಿಂದ ಆರು ಬೋಗಿಗಳಾಗಿ ಪರಿವರ್ತನೆಗೊಂಡಿವೆ.

ಮೆಟ್ರೊ ಪರೀಕ್ಷಾರ್ಥ ಸಂಚಾರ ಆರಂಭ :  2ನೇ ಹಂತದ ಮೊದಲ ಮಾರ್ಗದಲ್ಲಿ ಗುರುವಾರ ಮೆಟ್ರೋ ಮೊದಲ ಬಾರಿಗೆ ಸಂಚಾರ ನಡೆಸಿತು. 6.29 ಕಿ.ಮೀ. ಉದ್ದದ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ನಡುವೆ ಮೆಟ್ರೋ ರೈಲನ್ನು ಬೆಳಗ್ಗೆ ಪರೀಕ್ಷಾರ್ಥವಾಗಿ ಸಂಚಾರ ನಡೆಸಲಾಯಿತು. ಈ ಅವಧಿಯಲ್ಲಿ ಹಳಿಗಳು, ವಿದ್ಯುತ್‌ ಸಂಪರ್ಕ, ರೈಲು ನಿಲುಗಡೆ ಸೇರಿ ವಿವಿಧ ಪ್ರಕಾರದ ಪರೀಕ್ಷೆ ನಡೆಸಲಾಯಿತು. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತಜ್ಞ ಎಂಜಿನಿಯರ್‌ಗಳ ನೇತೃತ್ವದಲ್ಲಿ ನಡೆದ ಪರೀಕ್ಷೆಯಲ್ಲಿ ರೈಲು ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸಿತು. ಸುಮಾರು 30 ದಿನಗಳ ಕಾಲ ನಡೆಯಲಿದೆ ಎಂದು ನಿಗಮ ಟ್ವೀಟ್‌ ಮಾಡಿದೆ. ನವೆಂಬರ್‌ನಲ್ಲಿ ಈ ಮಾರ್ಗವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ನಿಗಮ ಹೊಂದಿದ್ದು, ಇದರ ಬೆನ್ನಲ್ಲೇ ಮೈಸೂರು ರಸ್ತೆ-ಕೆಂಗೇರಿ ಮಾರ್ಗದಲ್ಲಿ ವರ್ಷಾಂತ್ಯಕ್ಕೆ ಪರೀಕ್ಷಾರ್ಥ ನಡೆಸಲು ಉದ್ದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next