ಬೆಂಗಳೂರು: ದೆಹಲಿ ಮೆಟ್ರೋ ರೈಲು ನಿಗಮ ತನ್ನ ಸಿಬ್ಬಂದಿ ಭತ್ಯೆ ಮತ್ತಿತರ ಸೌಲಭ್ಯಗಳಿಗೆ ಕತ್ತರಿ ಹಾಕಿದ ಬೆನ್ನಲ್ಲೇ “ನಮ್ಮ ಮೆಟ್ರೋ’ದಲ್ಲೂ ಕಾರ್ಯನಿರ್ವಹಿಸುವ ಸಿಬ್ಬಂದಿ ಭತ್ಯೆಗೆ “ಬರೆ’ ಎಳೆಯಲು ಚಿಂತನೆ ನಡೆದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಆ.24ರಂದು ಆಡಳಿತ ಮಂಡಳಿ ಸಭೆ ಕರೆದಿದ್ದು, ಅಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕೋವಿಡ್ ಹಾವಳಿಯಿಂದ ಸರಿಸುಮಾರು 5 ತಿಂಗಳಿಂದ ಮೆಟ್ರೋ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ವಿವಿಧ ಮೂಲಗಳಿಂದ ಬರುವ ಆದಾಯವೇ ನಿಂತಿದೆ. ಈ ಮಧ್ಯೆ ಸರ್ಕಾರಗಳಿಂದಲೂ ಇದುವರೆಗೆ ಯಾವುದೇ ನೆರವು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ನಿಗಮ ಸೌಲಭ್ಯ ಮತ್ತು ಭತ್ಯೆಗಳಿಗೆ ಕತ್ತರಿ ಚಿಂತನೆ ನಡೆಸಿದೆ.
ನಿಗಮದ ನಿರ್ವಹಣೆ ಮತ್ತು ಕಾರ್ಯಾಚರಣೆ, ಯೋಜನೆ, ಅಕೌಂಟ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ವೇತನ ಮಾಸಿಕ 15ರಿಂದ 16 ಕೋಟಿ ರೂ. ಆಗುತ್ತದೆ. ಈ ಪೈಕಿ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿಕಾರ್ಯನಿರ್ವಹಿಸುವ ಸುಮಾರು 1,200-1,300 ಸಿಬ್ಬಂದಿಗೆ ಭತ್ಯೆ ಮತ್ತು ಇತರೆ ಸೌಲಭ್ಯಗಳ ಮೊತ್ತ ಶೇ.15ರಷ್ಟಿದೆ. ಇದುವರೆಗೆ ಹರಸಾಹಸಪಟ್ಟು ವೇತನ ಪಾವತಿಸಲಾಗುತ್ತಿದೆ. ಆದರೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿಎಲ್) ಬಿಎಂಆರ್‌ಸಿಎಲ್‌ನಲ್ಲಿ “ಭತ್ಯೆಗೆ ಕತ್ತರಿ’ ಚಿಂತನೆ ಮೊಳಕೆಯೊಡೆಯುವಂತೆ ಮಾಡಿದೆ.
ಚಿಂತನೆಗೆ ಅಪಸ್ವರ: ಈ ಬೆನ್ನಲ್ಲೇ ನಿಗಮದ ಸಿಬ್ಬಂದಿಯಲ್ಲಿ ಅಪಸ್ವರ ಕೇಳಿಬರುತ್ತಿದೆ. ಭತ್ಯೆ ಕಡಿತದ ವಿಚಾರದಲ್ಲಿ ಮಾತ್ರ ಡಿಎಂಆರ್‌ಸಿಎಲ್ ಅನ್ನು ಅನುಸರಿಸುವುದು ಸರಿ ಅಲ್ಲ. “ನಮ್ಮ ಮೆಟ್ರೋ’ ಸಿಬ್ಬಂದಿ ವೇತನಕ್ಕಿಂತ ಶೇ.40 ಹೆಚ್ಚು ವೇತನ ದೆಹಲಿ ಮೆಟ್ರೋದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಿದೆ. ಅಷ್ಟೇ ಅಲ್ಲ, ಅಲ್ಲಿ ಭತ್ಯೆ ಮತ್ತಿತರ ಸೌಲಭ್ಯ ಶೇ. 31ರಷ್ಟಿದೆ. 62 ವರ್ಷ ಮೇಲ್ಪಟ್ಟವರೆಲ್ಲರನ್ನೂ ಅಲ್ಲಿ ಮನೆಗೆ ಕಳುಹಿಸಲಾಗಿದೆ. ಈ ಎಲ್ಲ ವಿಚಾರಗಳಲ್ಲಿ ಏಕಿಲ್ಲ ಅನುಕರಣೆ ಎಂಬ ವಾದವನ್ನು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಸಿಬ್ಬಂದಿ ಮುಂದಿಡುತ್ತಾರೆ.
ಅಷ್ಟಕ್ಕೂ ಭತ್ಯೆಯನ್ನು ಶೇ. 50ರಷ್ಟು ಕಡಿತಗೊಳಿಸುವುದರಿಂದ ನಿಗಮಕ್ಕೆ ಆಗುವ ಉಳಿತಾಯ ಹೆಚ್ಚೆಂದರೆ 60ರಿಂದ 70 ಲಕ್ಷ ರೂ. ಆದರೆ, ಇದಕ್ಕಿಂತ 3-4 ಪಟ್ಟು ಹಣ ಅನಗತ್ಯವಾಗಿ ಪೋಲಾಗುತ್ತಿದೆ. ಹೇಗೆಂದರೆ, 65-75 ವರ್ಷದ ನಡುವಿನ 60-70 ಜನ ನಿಗಮದಲ್ಲಿ ಕೆಲಸ ಮಾಡುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 150-200 ಇದೆ. ಎಲ್ಲರನ್ನೂ ತೆಗೆದುಹಾಕುವುದು ಅಸಾಧ್ಯ. ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿ ಈ ಹೆಚ್ಚುವರಿ ಸರಿದೂಗಿಸುವ ಚಿಂತನೆ ಅವಶ್ಯಕತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಹೆಚ್ಚುವರಿ ಸಿಬ್ಬಂದಿ ಬಗ್ಗೆ ಕೇಳಿದ ಪ್ರಶ್ನೆಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ “ಉದಯವಾಣಿ’ಗೆ ಸ್ಪಷ್ಟಪಡಿಸಿ, ಅನಗತ್ಯ ಅಥವಾ ಹೆಚ್ಚುವರಿ ಸಿಬ್ಬಂದಿ ಇಲ್ಲ. ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ 60 ವರ್ಷ ಮೇಲ್ಪಟ್ಟವರು 50-60 ಜನ ಇರಬಹುದು. ಅಗತ್ಯ ಇರುವುದರಿಂದ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಮೆಟ್ರೋ ನಿರ್ಮಾಣಕ್ಕೆ ಅವರೆಲ್ಲರೂ ಕೈಜೋಡಿಸಿದ್ದಾರೆ’ ಎಂದು ಹೇಳಿದರು.
ಇದೆಲ್ಲಕ್ಕಿಂತ ಹೆಚ್ಚಾಗಿ ಕಡಿತಗೊಳಿಸಿದ್ದರ ಪರಿಣಾಮ ಏನು ಎಂಬ ಪ್ರಶ್ನೆ ಆರ್ಥಿಕ ತಜ್ಞರಿಂದ ಕೇಳಿಬರುತ್ತಿದೆ. ಸಿಬ್ಬಂದಿ ಕಡಿತದಿಂದ ಎರಡು ಕೋಟಿ ಉಳಿಯಲಿದೆ ಎಂದು ಕೊಂಡರೂ, 30 ಸಾವಿರ ಕೋಟಿ ವೆಚ್ಚದ “ನಮ್ಮ ಮೆಟ್ರೋ’ ಯೋಜನೆಗೆ ಹೋಲಿಸಿದರೆ, ಈ ಮೊತ್ತ ನಗಣ್ಯ. ಅಷ್ಟಕ್ಕೂ ಸೋಂಕು ಹಾವಳಿಯಿಂದ ಅಲ್ಪಾವಧಿಯಲ್ಲೇ ಯೋಜನಾ ವೆಚ್ಚ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಸಿಬ್ಬಂದಿ ಭತ್ಯೆ ಮತ್ತಿತರ ಸೌಲಭ್ಯ ಕಡಿತಕ್ಕೆ ಸಂ ಬಂಧಿಸಿದಂತೆ ಈಗಲೇ ಏನೂ ಹೇಳಲು ಆಗಲ್ಲ. ಇದುವರೆಗೆ ಯಾವುದೂ ನಿರ್ಧಾರ ಆಗಿಲ್ಲ’.
– ಅಜಯ್ ಸೇಠ್ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ
–ವಿಜಯಕುಮಾರ್ ಚಂದರಗಿ