ಒಮಿಕ್ರಾನ್ ಆತಂಕ, ಶೇಕಡ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಪ್ರವೇಶಾವಕಾಶ, ವೀಕೆಂಡ್ ಕರ್ಫ್ಯೂದಿಂದಾಗಿ ಬಿಡುಗಡೆಗೆ ಸಿದ್ಧವಾಗಿದ್ದ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳು ಸೇರಿದಂತೆ, ಬಹುತೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿವೆ. ಹೀಗಾಗಿ ಕಳೆದ ಎರಡು ವಾರಗಳಿಂದ ಯಾವುದೇ ಹೊಸ ಸಿನಿಮಾಗಳ ಬಿಡುಗಡೆ ಯಿಲ್ಲದೇ, ಬಹುತೇಕ ಥಿಯೇಟರ್‌ಗಳು ಬಿಕೋ ಎನ್ನುತ್ತಿವೆ. ಇವೆಲ್ಲದರ ನಡುವೆಯೇ ಈ ವಾರ “ನಮ್ಮ ಭಾರತ’ ಎಂಬ ಮಕ್ಕಳ ಸಿನಿಮಾವೊಂದು ತೆರೆಗೆ ಬರಲು ತಯಾರಾಗಿದೆ.
“ನೀಲಾ ನೀಲಕಂಠ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ನಮ್ಮ ಭಾರತ’ ಚಿತ್ರಕ್ಕೆ ಕುಮಾರ ಸ್ವಾಮಿ (ಕೆ.ಆರ್ ನಗರ) ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರವಿಶಂಕರ್ ಮಿರ್ಲೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಕುಮಾರ್ ಈಶ್ವರ್ ಸಂಗೀತವಿದ್ದು, ಸಂಜೀವ್ ರೆಡ್ಡಿ ಸಂಕಲನವಿದೆ.
ಇನ್ನು “ನಮ್ಮ ಭಾರತ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕುಮಾರಸ್ವಾಮಿ, “ಇದು ಮಕ್ಕಳಿಂದ, ಹಿರಿಯರವರೆಗೆ ಎಲ್ಲರೂ ನೋಡಬೇಕಾದ ಸಿನಿಮಾ. ದೇಶವನ್ನು ಹೇಗೆ ಪ್ರೀತಿಸಬೇಕು, ನಮ್ಮ ಜಬಾಬ್ದಾರಿ ಏನು ಅನ್ನೋದನ್ನ ಸಿನಿಮಾದಲ್ಲಿ ಹೇಳಿದ್ದೇವೆ. ಒಬ್ಬ ಹುಡುಗ, ಒಬ್ಬ ಸ್ವತಂತ್ರ ಯೋಧ ಮತ್ತು ಒಂದು ರಾಷ್ಟ್ರ ಧ್ವಜದ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಒಂದಷ್ಟು ಆದರ್ಶ, ಮೌಲ್ಯ ಎಲ್ಲವನ್ನೂ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ’ ಎಂದು ಚಿತ್ರದ ಕಥಾಹಂದರದ ವಿವರಣೆ ಕೊಡುತ್ತಾರೆ.
“ನಮ್ಮ ಭಾರತ’ ಚಿತ್ರದಲ್ಲಿ ವಾಗೀಶ್, ಮಾ. ಪ್ರಜ್ವಲ್, ಶ್ಯಾವಂದಪ್ಪ, ಅಮಲ, ತಿಮ್ಮ ಶೆಟ್ಟಿ, ಗೋಪಿನಾಥ್, ಕ್ರಿಶಾ ಪ್ರಕಾಶ್, ಅಂಬುಜಾಕ್ಷಿ ಬಾಯಿ ಎನ್. ಈಶ್ವರ ರಾವ್ ಮಾನೆ, ವಡ್ಡ ನಾಗರಾಜ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೈಸೂರು, ಪಿರಿಯಾಪಟ್ಟಣ, ಕೊಡಗು, ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ ಮತ್ತಿತರ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ “ನಮ್ಮ ಭಾರತ’ ಚಿತ್ರವನ್ನು ಇದೇ ಜ. 14ರಂದು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.