Advertisement

UV Fusion: ಇಟ್ಟಿಗೆಯ ನಾಮಕರಣ

03:05 PM Feb 26, 2024 | Team Udayavani |

ಪ್ರತಿದಿನ ಸಂಜೆ ಅಜ್ಜನ ಕೈಹಿಡಿದು ಮನೆ ಸುತ್ತ ನಡೆದು ಬರುವುದು ರೂಢಿ. ಪುಟ್ಟ ಕಾಲುಗಳು ಸುಮ್ಮನಿರುವುದಿಲ್ಲ ಎಲ್ಲಾದರೂ ಓಡಾಡಲೇಬೇಕು ಆದರೆ ಅಜ್ಜನಿಗೆ ಸುಸ್ತಾಗಿತ್ತು, ನನ್ನ ಚಂಚಲತೆಯನ್ನು ತಡೆ ಹಿಡಿಯಲು ಇಲ್ಲಿ ಬಾ ಒಂದು ಹೊಸ ಆಟ ಹೇಳಿಕೊಡುತ್ತೇನೆ ಎಂದರು.

Advertisement

ಓಡಿ ಹೋಗಿ ಬಳಿ ಕೂತೆ. ಅಲ್ಲೇ ಪಕ್ಕದಲ್ಲಿ ಒಂದು ಹೊಸ ಮನೆ ಕಟ್ಟುತ್ತಿದ್ದರು. ಇಟ್ಟಿಗೆಗಳನ್ನು ಒಂದರ ಮೇಲೆ ಒಂದು ಇಡುವುದನ್ನು ಕಂಡು ಕೇಳಿದೆ ಒಂದು ಮನೆ ಕಟ್ಟಬೇಕಾದರೆ ಎಷ್ಟು ಇಟ್ಟಿಗೆ ಬೇಕು ಅಜ್ಜಾ? ಮನೆ ಎಷ್ಟು ದೊಡ್ಡದು ಅದರ ಮೇಲೆ ಇಟ್ಟಿಗೆಯ ಲೆಕ್ಕ ಎಂದರು.

ನಿನ್ನ ಆಟ ಏನೆಂದರೆ ಕೆಲಸಗಾರರು ಇಡುವ ಪ್ರತೀ ಇಟ್ಟಿಗೆಗೆ ಒಂದು ಹೆಸರು ಇಡು. ಮುಂದೆ ನಿನ್ನ ಮನೆಯಲ್ಲಿ ಯಾರೆಲ್ಲ ಇರಬೇಕು ಎಂದು ಬಯಸುತ್ತೀರೋ ಅವರ ಹೆಸರು ಮಾತ್ರ ಹೇಳಬೇಕು ಹೆಸರು ಹೇಳುತ್ತಾ ಹೋದೆ, ಅಪ್ಪನ ಕುಟುಂಬ, ಅಮ್ಮನ ಕುಟುಂಬ, ದೂರದ ಸಂಬಂಧಿ ಎಂದು ಒಂದು ಪುಸ್ತಕ ಬರೆಯುವಷ್ಟು ಹೆಸರು  ಹೇಳುತ್ತಾ ಕುಳಿತೆ. ಕತ್ತಲಾಗುತ್ತ ಬಂತು, ಅಜ್ಜ ನನ್ನನ್ನು ಕಾರ್ಯನಿರತವಾಗಿರಿಸುವುದರಲ್ಲಿ ಯಶಸ್ವಿಯಾಗಿದ್ದರು.

ಮನೆಗೆ ಕುಣಿದು ಕುಣಿದು ಬಂದೆ. ಹೊಸ ಆಟವಲ್ಲವೇ ಎಲ್ಲರಿಗೂ ಹೇಳಿಕೊಡಬೇಕು ಎಂಬ ಹುರುಪು. ಹೇಳಿದೆ. ಅಜ್ಜ ಕೊಟ್ಟ ಆ ಚಟುವಟಿಕೆಗೆ ನನ್ನ ಉತ್ತರದ ಬಗ್ಗೆಯೇ ಕುತೂಹಲ. ನಾನು ಹೇಳಿದ್ದನ್ನು ಕೇಳಿ ಎಲ್ಲರ ಮುಖದಲ್ಲಿ ಒಂಥರದ ಕಹಿ ಸಿಹಿ ಅಭಿವ್ಯಕ್ತಿ, ನನಗೆ ಅಂದು ಗೊತ್ತಾಗಲಿಲ್ಲ. ಬಹುಶ‌ಃ ನಿಷ್ಕಳಂಕ ಮನಸ್ಸಿನ ಉದಾಹರಣೆ ಇರಬಹುದು.

ಮತ್ತೆ ಊರಿಗೆ ಹೋದಾಗ, ತಂಪು ಗಾಳಿ ಬೀಸುತಿತ್ತು ಅಜ್ಜ ಅಲ್ಲಿ ಮತ್ತೂಂದು ಮನೆ ಕಟ್ಟುತ್ತಿದ್ದಾರೆ ಹೋಗೋಣ ಬರುತ್ತೀರಾ? ಎಂದೆ ಆದರೆ ಅಜ್ಜನಿಗೆ ತಂಪು ಆಗುವುದಿಲ್ಲ ಬೇಗ ಶೀತ ಆಗುತ್ತದೆ ಆದ್ದರಿಂದ ಈ ಬಾರಿ ನನ್ನ ತಂಗಿಯನ್ನು ಕರೆದುಕೊಂಡು ಹೋದೆ, ಬೇರೆ ಜಾಗ ಆದರೆ ಅದೇ, ಅಜ್ಜನ ಚಟುವಟಿಕೆ.

Advertisement

ತಂಗಿ ವಿಧೇಯತೆಯಿಂದ ಉತ್ತರಿಸಿದಳು. ನನ್ನ ಹಾಗೆ ಹೆಸರಿನ ದೊಡ್ಡ ಪಟ್ಟಿ ಕೊಡಲಿಲ್ಲ, ತನ್ನ ಸುತ್ತ ಮುತ್ತ ಮನೆಯಲ್ಲಿ ಇರುವ ಜನರ ಹೆಸರನ್ನಷ್ಟೇ ಹೇಳಿದಳು. ಇವಳ ಉತ್ತರ ಕೇಳಿ ನನಗೆ ನನ್ನ ಬಗ್ಗೆ ಪ್ರಶ್ನಿಸುವ ಹಾಗೆ ಮಾಡಿತು, ಇವಳಷ್ಟು ಚಾತುರ್ಯತೆ ನನಗಿರಲಿಲ್ಲವೇ? ಅಥವಾ ಇವಳ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿದ್ದಾಳೆಯೇ? ಯಾಕೆಂದರೆ ಇಂದು ನನ್ನ ಮನೆಯಲ್ಲಿ ಯಾರೆಲ್ಲ ಇರಬೇಕು ಎಂದು ಯಾರಾದರೂ ಪ್ರಶ್ನಿಸಿದರೆ ನಾನು ಒಂದು ಪುಸ್ತಕವಲ್ಲ, ಒಂದು ಹಾಳೆ ತುಂಬುವಷ್ಟು ಹೆಸರು ಹೇಳಲು ಆಗುವುದಿಲ್ಲ. ಅಂದು ಈ ಆಟದಲ್ಲಿ ಇದ್ದ ಚೈತನ್ಯ ಇಂದು ಇದೆಂಥ ಪ್ರಶ್ನೆ, ಪ್ರತಿಯೊಂದು ಇಟ್ಟಿಗೆಗೆ ಯಾರು ಹೆಸರು ಹೇಳುತ್ತಾರೆ ? ಎಂಬ ಭಾವನೆ.

ನನಗೆ ಗೊತ್ತಿರುವ ಜನರೆಲ್ಲಾ ಕೂಡಿದರೆ ಜಗತ್ತು. ಆದರೆ ನನ್ನ ತಂಗಿಗೆ, ಅವಳ ಜತೆ ಇರುವವರಷ್ಟೇ ಜಗತ್ತು. ಇಂದು ನನ್ನ ಜಗತ್ತನ್ನು ವರ್ಣಿಸುವ ರೀತಿಯೇ ಬೇರೆ, ದೊಡ್ಡವರಾಗುತ್ತಾ ಹೇಗೆ ನಮ್ಮ ಆಸೆ, ಇಷ್ಟ – ಕಷ್ಟಗಳು ಬೇರೆ ಆಗುತ್ತೋ ಹಾಗೆ ಜಗತ್ತಿನಂಥಹ ಪುಟ್ಟ ಪದಗಳ ಅರ್ಥಗಳೂ ಬದಲಾಗುತ್ತ ಹೋಗುತ್ತವೆ ಅಲ್ಲವೇ? ಅಜ್ಜನಿಗೆ ಅವತ್ತು ನನ್ನನ್ನು ಸುಮ್ಮನೆ ಕೂರಿಸಲು ಉಪಾಯವಾದದ್ದು ಇಂದು ಒಂದು ವಿಶ್ಲೇಷಣೆಯ ಕಥೆಯಾಗುತ್ತದೆ ಎಂದು ಯಾರಿಗೆ ಗೊತ್ತಿತ್ತು?

ಚೈತ್ರ ಕೆ.

ಮಾಹೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next