ಗೀಲಾಂಗ್: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022 ಇಂದು ಆರಂಭವಾಗಿದೆ. ಗ್ರೂಪ್ ಹಂತದ ಪಂದ್ಯಗಳು ಈ ವಾರ ನಡೆಯುತ್ತಿದ್ದು, ಇಂದಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗಿದೆ. ಆದರೆ ಅಚ್ಚರಿಯೆಂಬಂತೆ ದ್ವೀಪ ರಾಷ್ಟ್ರ ಲಂಕಾ ವಿರುದ್ಧ ನಮೀಬಿಯಾ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದರೆ, ಉತ್ತರವಾಗಿ ಲಂಕಾ 19 ಓವರ್ ಗಳಲ್ಲಿ 108 ರನ್ ಗೆ ಆಲೌಟಾಯಿತು.
ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನಮೀಬಿಯಾಗೆ ಲಂಕಾ ಬೌಲರ್ ಗಳು ಕಾಡಿದರು. ಸತತ ವಿಕೆಟ್ ಕಳೆದುಕೊಂಡ ನಮೀಬಿಯಾ ರನ್ ಗಳಿಸಲು ಪರದಾಡಿತು. 14.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಂಡ 93 ರನ್ ಮಾತ್ರ ಮಾಡಿತ್ತು. ಆದರೆ ನಂತರ ಜೊತೆಯಾದ ಜಾನ್ ಫ್ರಯ್ಲಿನ್ಕ್ ಮತ್ತು ಜೆಜೆ ಸ್ಮಿತ್ 70 ರನ್ ಜೊತೆಯಾಟವಾಡಿದರು. ಜಾನ್ ಫ್ರಯ್ಲಿನ್ಕ್ 28 ಎಸೆತಗಳಲ್ಲಿ 44 ರನ್ ಮಾಡಿದರೆ, 16 ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ ಜೆಜೆ ಸ್ಮಿತ್ 31 ರನ್ ಚಚ್ಚಿದರು. ಲಂಕಾ ಪರ ಮಧುಶಾನ್ ಎರಡು ವಿಕೆಟ್ ಮತ್ತು, ತೀಕ್ಷಣ, ಚಮೀರಾ, ಕರುಣರತ್ಯೆ, ಹಸರಂಗ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿ ಲಂಕಾ 40 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಮೀಬಿಯಾ ಬೌಲಿಂಗ್ ದಾಳಿಗೆ ಲಂಕಾ ಬ್ಯಾಟರ್ ಗಳು ಉತ್ತರಿಸಲು ಪರದಾಡಿದರು. ನಾಯಕ ಶನಕಾ 29 ರನ್ ಗಳಿಸಿದರೆ, ರಾಜಪಕ್ಸಾ 20 ರನ್ ಮಾಡಿದರು. ನಮೀಬಿಯಾ ಪರ ವೀಸೆ, ಬರ್ನಾರ್ಡ್, ಶಿಕೊಂಗೋ ಮತ್ತು ಜಾನ್ ಫ್ರಯ್ಲಿನ್ಕ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಲಂಕಾ ತಂಡವು 108 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 55 ರನ್ ಅಂತರದ ಸೋಲನುಭವಿಸಿತು.