Advertisement

ಹೆಸರೇ ಎಕ್ಸ್‌ಚೇಂಜ್‌ ಆಯ್ತು…

02:32 PM Jan 16, 2018 | |

“ರಾಜಕೀಯದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆ?’ ಎಂಬುದು ಚರ್ಚೆಯ ವಿಷಯವಾಗಿದ್ದು, ನಾನು ಪರವಾಗಿ ಹಾಗೂ ಶಶಾಂಕ ವಿರುದ್ಧವಾಗಿ ಮಾತನಾಡಬೇಕೆಂದು ನಿರ್ಧಾರವಾಗಿತ್ತು. ಅದರಂತೆ ನಾವು ನಮ್ಮ ಭಾಷಣಗಳನ್ನು ಸಿದ್ಧಪಡಿಸಿಕೊಂಡಿದ್ದೆವು. 

Advertisement

ಸವಿನೆನಪು ಎಂದಾಕ್ಷಣ ಮನಸ್ಸು ಮೂರು ದಶಕಗಳ ಹಿಂದಕ್ಕೆ ಓಡುತ್ತದೆ. ಕಾಲೇಜು ಜೀವನದ ಆ ದಿನಗಳಲ್ಲಿ ಗರಿಗೆದರಿದ ಕನಸೊಂದು ವಿಲಕ್ಷಣ ರೀತಿಯಲ್ಲಿ ನನಸಾದ ನೆನಪು ಹಸಿರಾಗುತ್ತದೆ… ಆಗ ನಾನು ಕೊಡಗಿನ ಕುಶಾಲನಗರದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದೆ. ಕಾಲೇಜು ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ನನಗೆ ಬಹುಮಾನ ಲಭಿಸುತ್ತಿತ್ತಾದರೂ, ಭಾಷಣ ಅಥವಾ ಚರ್ಚಾಸ್ಪರ್ಧೆಗಳಲ್ಲಿ ನನ್ನ ಪ್ರತಿಭಾ ಪ್ರದರ್ಶನಕ್ಕೆ ಸ್ಥಾನ ಸಿಗುತ್ತಿರಲಿಲ್ಲ.

ಅದೊಮ್ಮೆ ಕೊಡಗು ಜಿಲ್ಲಾ ಮಟ್ಟದ ಅಂತರ್‌ ಕಾಲೇಜು ಚರ್ಚಾ- ಭಾಷಣ ಸ್ಪರ್ಧೆ ಪಕ್ಕದ ಕೊಣನೂರಿನಲ್ಲಿ ನಡೆಯುತ್ತಿತ್ತು. ಅದರಲ್ಲಿ ಸ್ಪರ್ಧಿಸಲು ಆಯ್ಕೆಗಾಗಿ ನಮ್ಮ ಕಾಲೇಜಿನಲ್ಲಿ ಭಾಷಣ ಸ್ಪರ್ಧೆ ನಡೆಸಿದಾಗ ನಾನು ಮತ್ತು ಶಶಾಂಕ ಎಂಬ ಸಹಪಾಠಿ ಆಯ್ಕೆಯಾದೆವು. ಭಾಷಣದಲ್ಲಿ ಶಶಾಂಕ ನನಗಿಂತ ಹೆಚ್ಚು ನುರಿತವನಾದರೂ, ಈ ಬಾರಿ ಚೆನ್ನಾಗಿ ಅಭ್ಯಾಸ ಮಾಡಿ ಬಹುಮಾನ ಪಡೆಯಲೇಬೇಕು ಎಂದು ಯೋಚಿಸಿದ್ದೆ. ನನ್ನ ಮನಸ್ಸು ಆಗಲೇ ಗರಿಗೆದರಿದ ನವಿಲಾಗಿತ್ತು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ನಾನು ವಿಜೇತನಾದರೆ? ನನ್ನ ಹೆಸರೂ ಪತ್ರಿಕೆಯಲ್ಲಿ ಅಚ್ಚಾದರೆ..? ಎನ್ನುವ ಕನಸಿನ “ರೆ’ ಸಾಮ್ರಾಜ್ಯದಲ್ಲಿ ವಿಹರಿಸಲಾರಂಭಿಸಿದೆ ನಾನು.

ನಿರೀಕ್ಷೆಯಂತೆ ಆ ದಿನ ಬಂದೇ ಬಿಟ್ಟಿತು.”ರಾಜಕೀಯದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆ?’ ಎಂಬುದು ಚರ್ಚೆಯ ವಿಷಯವಾಗಿದ್ದು, ನಾನು ಪರವಾಗಿ ಹಾಗೂ ಶಶಾಂಕ ವಿರುದ್ಧವಾಗಿ ಮಾತನಾಡಬೇಕೆಂದು ನಿರ್ಧಾರವಾಗಿತ್ತು. ಅದರಂತೆ ನಾವು ನಮ್ಮ ಭಾಷಣಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಅಂದು ಕೊಣನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧೆ ಆರಂಭವಾಗಿ, ನಿರೂಪಕರು ಒಬ್ಬೊಬ್ಬ ಸ್ಪರ್ಧಿಯ ಹೆಸರನ್ನೂ ಉಲ್ಲೇಖೀಸುತ್ತಾ, ಅವರು ಪರವಾಗಿ ಅಥವಾ ವಿರುದ್ಧವಾಗಿ ಮಾತಾಡಬೇಕು ಎಂದು ಸೂಚಿಸುತ್ತಿದ್ದರು. 

ನಿರೀಕ್ಷೆಯಂತೆ ನಮ್ಮ ಸರದಿಯೂ ಬಂದೇ ಬಿಟ್ಟಿತು. ನಿರೂಪಕರು, “ಈಗ ಕುಶಾಲನಗರ ಸರಕಾರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ರಮಣ್‌ ಶೆಟ್ಟಿ ವಿಷಯದ ವಿರುದ್ಧವಾಗಿ ಮಾತಾಡಲಿದ್ದಾರೆ’ ಎಂದು ಘೋಷಿಸಿಬಿಟ್ಟರು! ನಾವಿಬ್ಬರೂ ಒಂದು ಕ್ಷಣ ಗಲಿಬಿಲಿಗೊಂಡೆವು. ಕೂಡಲೇ ಸಮಯೋಚಿತವಾಗಿ ಸಂದರ್ಭವನ್ನು ವಿಶ್ಲೇಷಿಸಿದ ನಾನು ಶಶಾಂಕನಿಗೆ, “ವಿಷಯದ ವಿರುದ್ಧವಾಗಿ ಮಾತಾಡಲು ಅಣಿಯಾಗಿರುವವನು ನೀನಾದ್ದರಿಂದ ನನ್ನ ಹೆಸರಲ್ಲಿ ನೀನು ವೇದಿಕೆಗೆ ಹೋಗಿ ನಿನ್ನ ಚರ್ಚೆಯನ್ನು ಮಂಡಿಸು. ನಂತರ ನಿನ್ನ ಹೆಸರಿನಲ್ಲಿ ವಿಷಯದ ಪರವಾಗಿ ನಾನು ಮಾತಾಡುತ್ತೇನೆ’  ಎಂದೆ. ಅದರಂತೆ ಪರಸ್ಪರ ಹೆಸರು ಬದಲಿಸಿಕೊಂಡು, ನಾವು ಪೂರ್ವಭಾವಿಯಾಗಿ ತಯಾರಿ ಮಾಡಿಕೊಂಡಿರುವಂತೆ ನಮ್ಮ ವಾದಗಳನ್ನು ಮಂಡಿಸಿದೆವು. (ಈಗಿನಂತೆ ಆಗ ಗುರುತುಚೀಟಿಗಳ ಅವಶ್ಯಕತೆಯಿರದಿದ್ದುದು ವರವಾಗಿ ನಮಗೆ ಪರಿಣಮಿಸಿತ್ತು).

Advertisement

ಸ್ಪರ್ಧೆ ಮುಕ್ತಾಯವಾದ ಬಳಿಕ ಫ‌ಲಿತಾಂಶ ಪ್ರಕಟವಾಗಿ, ವಿಜೇತರ ಹೆಸರನ್ನು ಘೋಷಿಸಲಾಯಿತು. ಪ್ರಥಮ ಬಹುಮಾನ ರಮಣ್‌ ಶೆಟ್ಟಿ ಎಂದಾಗ, ನನ್ನ ಹೆಸರಲ್ಲಿ ಭಾಷಣ ಮಾಡಿದ್ದ ಶಶಾಂಕ ವೇದಿಕೆಗೆ ಹೋಗಿ ಬಹುಮಾನ ಸ್ವೀಕರಿಸಿದ. ಶಶಾಂಕ ತನ್ನ ಪ್ರತಿಭೆಯಿಂದ ಬಹುಮಾನ ಗಿಟ್ಟಿಸಿದ್ದನಾದರೂ ತದನಂತರ ಆತ ಸ್ವಯಂ ಕೊಡುಗೆಯೊಂದನ್ನು ಖರೀದಿಸಿ ನನಗೆ ನೀಡುತ್ತಾ, ಇದು ನಿನ್ನ ಸಮಯ ಪ್ರಜ್ಞೆ ಮತ್ತು ಕ್ರೀಡಾ ಮನೋಭಾವಕ್ಕಾಗಿ ಕೃತಜ್ಞತಾಪೂರ್ವಕವಾಗಿ ನೀಡುತ್ತಿರುವ ಕಾಣಿಕೆ ಎಂದ.
ನಾನು ಸೋತು ಗೆದ್ದಿದ್ದೆ! ಮರುದಿನ ಸ್ಥಳೀಯ ದೈನಿಕದಲ್ಲಿ ಸ್ಪರ್ಧಾ ಫ‌ಲಿತಾಂಶ ಪ್ರಕಟವಾದಾಗ, “ಪ್ರಥಮ ಬಹುಮಾನ ರಮಣ್‌ ಶೆಟ್ಟಿ’ ಎಂದು ಉಲ್ಲೇಖವಾಗಿ, ಪೇಪರಿನಲ್ಲಿ ಹೆಸರು ಅಚ್ಚಾಗುವ ಕನಸೊಂದು ಅನೂಚಾನವಾಗಿ ನನಸಾಗಿತ್ತು. ಆನಂತರ ನಡೆದ ಎಲ್ಲಾ ವಿವರಗಳನ್ನೂ ನಮ್ಮ ಪ್ರಾಧ್ಯಾಪಕರಲ್ಲಿ ನಿವೇದಿಸಿ, ಪ್ರಮಾಣ ಪತ್ರದಲ್ಲಿ ವ್ಯವಸ್ಥಾಪಕರ ಸಹಿ ಮತ್ತು ಮುದ್ರೆಯೊಂದಿಗೆ ಹೆಸರಿನ ತಿದ್ದುಪಡಿ ಮಾಡಿಸಿಕೊಂಡೆವು.

ರಮಣ್‌ ಶೆಟ್ಟಿ ರೆಂಜಾಳ್‌, ಮುಂಬೈ

Advertisement

Udayavani is now on Telegram. Click here to join our channel and stay updated with the latest news.

Next