ಆತ ಯಾರು, ಎಲ್ಲಿಂದ ಬಂದ, ಆತನ ಉದ್ದೇಶವಾದರೂ ಏನು, ಯಾತಕ್ಕಾಗಿ ಈ ತರಹ ಮಾಡುತ್ತಿದ್ದಾನೆ … ಈ ತರಹದ ಒಂದು ವಿಚಿತ್ರ ಸ್ವಭಾವದ ವ್ಯಕ್ತಿ ಇಡೀ ಬೆಂಗಳೂರು ಅಂಡರ್‌ವರ್ಲ್ಡ್ನಲ್ಲಿ ಸೌಂಡ್ ಮಾಡುತ್ತಾನೆ. ಮಾಲಿಕ್ ಅನ್ನೋ ಆ ಹೆಸರು ಅನೇಕ ಡಾನ್‌ಗಳ ನಿದ್ದೆಗೆಡಿಸುತ್ತದೆ. ಆತನೂ ರೌಡಿಸಂನಲ್ಲಿದ್ದಾನೆ, ಆದರೆ, ರೌಡಿಯಲ್ಲ! ಆತನ ಹಿನ್ನೆಲೆ, ಉದ್ದೇಶ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ನೀವು ಕೊನೆಯವರೆಗೆ ಕಾಯಲೇಬೇಕು. ಅಲ್ಲಿ ನಿಮಗೆ ಸಾಕಷ್ಟು ಕುತೂಹಲಕಾರಿ ಅಂಶಗಳು ಸಿಗುತ್ತವೆ.
ನಿರ್ದೇಶಕ ಪಿ.ಎನ್. ಸತ್ಯ ರೌಡಿಸಂ ಬ್ಯಾಕ್‌ಡ್ರಾಪ್‌ನ ಸಿನಿಮಾ ಮಾಡುವುದರಲ್ಲಿ ನಿಸ್ಸೀಮರು. ಗ್ಯಾಂಗ್‌ಸ್ಟಾರ್ ಸಿನಿಮಾಗಳನ್ನು ಹೇಗೆ ಕಟ್ಟಿಕೊಡಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. “ಬೆಂಗಳೂರು ಅಂಡರ್‌ವರ್ಲ್ಡ್’ ಕೂಡಾ ಒಂದು ಔಟ್ ಅಂಡ್ ಮಾಸ್ ಸಿನಿಮಾ. ಸಾಮಾನ್ಯವಾಗಿ ಮಾಸ್ ಸಿನಿಮಾ ಎಂದರೆ ಬರೀ ಹೊಡೆದಾಟ, ಬಡಿದಾಟವೇ ಇರುತ್ತದೆ. ಅಲ್ಲಿ ಕಥೆಗೆ ಹೆಚ್ಚು ಪ್ರಾಮುಖ್ಯತೆ ಇರೋದಿಲ್ಲ.
ಆದರೆ ಸತ್ಯ ಮಾತ್ರ ಈ ಬಾರಿ ಕಥೆಗೂ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಒನ್‌ಲೈನ್ ಕೊಂಚ ಭಿನ್ನವಾಗಿದೆ. ನಾಯಕನ ಆ ಅಟಿಟ್ಯೂಡ್‌ಗೆ ಕಾರಣ ಏನು ಎಂಬುದನ್ನು ಕೊನೆವರೆಗೂ ಊಹೆ ಮಾಡಲಾಗುವುದಿಲ್ಲ. ಆ ಮಟ್ಟಿಗೆ ಇದೊಂದು ವಿಭಿನ್ನ ಕಥೆ ಎನ್ನಬಹುದು. ಉಳಿದಂತೆ ಗ್ಯಾಂಗ್‌ವಾರ್ ಸಿನಿಮಾಗಳಲ್ಲಿ ಏನೇನು ನಡೆಯುತ್ತದೆ ಅದೆಲ್ಲವೂ ಈ ಸಿನಿಮಾದಲ್ಲೂ ನಡೆಯುತ್ತದೆ. ಹಾಗೆ ನೋಡಿದರೆ ಇದು ಕೂಡಾ ಒಂದು ರಿವೆಂಜ್ ಸ್ಟೋರಿ. ಆ ರಿವೆಂಜ್ ಹಿಂದಿನ ಕಾರಣ ಮಾತ್ರ ಭಿನ್ನ.
ಬಳ್ಳಾರಿಯಿಂದ ಬೆಂಗಳೂರಿಗೆ ಬರುವ ಮಾಲಿಕ್, ಬೆಂಗಳೂರು ಅಂಡರ್‌ವರ್ಲ್ಡ್ನಲ್ಲಿ ದೊಡ್ಡ ಹೆಸರು ಮಾಡುತ್ತಾನೆ. ಭಯ ಅನ್ನೋ ಪದವನ್ನೇ ಕಿತ್ತೆಸೆದಿರುವ ಮಾಲಿಕ್ ಏನು ಹೇಳುತ್ತಾನೋ ಅದನ್ನು ಮಾಡುತ್ತಾನೆ. ಪಾತಕ ಲೋಕದಲ್ಲಿ ಆತ ಮಾಡುವ ಕೊಲೆಗಳ ಹಿಂದೆ ಒಂದು ಉದ್ದೇಶವಿದೆ. ಇಡೀ ಸಿನಿಮಾದ ಹೈಲೈಟ್ ಕೂಡಾ ಅದೇ. ನಿರ್ದೇಶಕ ಸತ್ಯ ಏನು ಹೇಳಬೇಕೋ ಅದನ್ನು ನೀಟಾಗಿ ಹೇಳಿದ್ದಾರೆ.
ಅನಾವಶ್ಯಕ ಅಂಶಗಳು, ರೌಡಿಸಂ ಮಧ್ಯೆ ಕಾಮಿಡಿ, ಅತಿಯಾದ ಲವ್‌ಟ್ರ್ಯಾಕ್‌ಗಳಿಂದ “ಬೆಂಗಳೂರು ಅಂಡರ್‌ವರ್ಲ್ಡ್’ ಅನ್ನು ಮುಕ್ತವಾಗಿಸಿದ್ದಾರೆ. ಹಾಗಾಗಿ ಇಲ್ಲಿ ಡೀಲು, ಸ್ಕೆಚು, ಮಚ್ಚು, ಸ್ಪಾಟ್‌ಗಳದ್ದೇ ಹವಾ ಜೋರಾಗಿದೆ. ಸಾಮಾನ್ಯವಾಗಿ ಆ್ಯಕ್ಷನ್ ಸಿನಿಮಾ ಎಂದರೆ ಅಬ್ಬರದ ರೀರೆಕಾರ್ಡಿಂಗ್‌ನಲ್ಲೇ ಇಡೀ ಸಿನಿಮಾ ಕಳೆದು ಹೋಗುತ್ತದೆ. ಆದರೆ, ಇಲ್ಲಿ ಅನೂಪ್ ಸೀಳೀನ್ ಅವರ ರೀರೆಕಾರ್ಡಿಂಗ್ ಕೂಡಾ ಸಿನಿಮಾಕ್ಕೊಂದು ಹೊಸ ಫೀಲ್ ಕೊಟ್ಟಿದೆ.
ತಣ್ಣನೆಯ ಕ್ರೌರ್ಯವನ್ನು ಸತ್ಯ ಹೇಗೆ ಕಟ್ಟಿಕೊಟ್ಟಿದ್ದಾರೋ, ಅನೂಪ್ ಸೀಳೀನ್ ತಮ್ಮ ಹಿನ್ನೆಲೆ ಸಂಗೀತದ ಮೂಲಕ ಅದರ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಚಿತ್ರದಲ್ಲಿ ಹೆಚ್ಚು ಮಾತಿಲ್ಲ. ಅಲ್ಲೊಂದು ಇಲ್ಲೊಂದು ಪಂಚ್ ಡೈಲಾಗ್‌ಗಳ ಮೂಲಕ ಖದರ್ ಹೆಚ್ಚಿಸುತ್ತಾ ಹೋಗಿದ್ದಾರೆ ಸತ್ಯ. ಚಿತ್ರದಲ್ಲೊಂದು ಫ್ಲ್ಯಾಶ್‌ಬ್ಯಾಕ್ ಸ್ಟೋರಿ ಇದೆ. ಹೀಗೆ ಬಂದು ಹಾಗೆ ಹೋಗುವ ಆ ಸ್ಟೋರಿ ಮಾಲಿಕ್‌ನ ಇಡೀ ಜೀವನಚರಿತ್ರೆಯನ್ನು ತೆರೆದಿಡುತ್ತದೆ.
ಮಾಲಿಕ್ ಆಗಿ, ಮನಸ್ಸಿನಲ್ಲಿ ಮಡುಗಟ್ಟಿದ ನೋವಿನ ಸೇಡನ್ನು ತೀರಿಸಿಕೊಳ್ಳೋ ಖಡಕ್ ಹುಡುಗನಾಗಿ ಆದಿತ್ಯ ಇಷ್ಟವಾಗುತ್ತಾರೆ. ಮಾತಿಗಿಂತ ಕಣ್ಣಲ್ಲೇ ಗುರಿ ಇಡೋ ಪಂಟನಾಗಿ ಆದಿತ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಪಾಯಲ್‌ಗೆ ಇಲ್ಲಿ ಹೆಚ್ಚು ಅವಕಾಶವಿಲ್ಲ. ಉಳಿದಂತೆ ಶೋಭರಾಜ್, ಭಾವನಾ, ಕೋಟೆ ಪ್ರಭಾಕರ್, ಹರೀಶ್ ರಾಯ್, ಉದಯ್, ಡೇನಿಯಲ್ ಬಾಲಾಜಿ, ಪೆಟ್ರೋಲ್ ಪ್ರಸನ್ನ, ರಮೇಶ್ ಭಟ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಬೆಂಗಳೂರು ಅಂಡರ್‌ವರ್ಲ್ಡ್
ನಿರ್ಮಾಣ: ಆನಂದ್
ನಿರ್ದೇಶನ: ಪಿ.ಎನ್.ಸತ್ಯ
ತಾರಾಗಣ: ಆದಿತ್ಯ, ಪಾಯಲ್, ಶೋಭರಾಜ್, ಭಾವನಾ, ಕೋಟೆ ಪ್ರಭಾಕರ್, ಹರೀಶ್ ರಾಯ್, ಉದಯ್, ಡೇನಿಯಲ್ ಬಾಲಾಜಿ, ಪೆಟ್ರೋಲ್ ಪ್ರಸನ್ನ ಮತ್ತಿತರರು.
* ರವಿಪ್ರಕಾಶ್ ರೈ