Advertisement

ದತ್ತಪೀಠದ ರಸ್ತೆಯಲ್ಲಿ ಮೊಳೆ ಕೇಸ್; ಪೋಲೀಸರ ಕ್ರಮ ಸ್ವಾಗತಾರ್ಹ: ಸಿ.ಟಿ.ರವಿ

07:31 PM Dec 16, 2022 | Team Udayavani |

ಚಿಕ್ಕಮಗಳೂರು : ದತ್ತ ಜಯಂತಿ ಸಂದರ್ಭ ಪೀಠಕ್ಕೆ ಬರುವ ದತ್ತ ಭಕ್ತರ ವಾಹನ ಅಪಘಾತಕ್ಕೀಡಾಗಬೇಕೆನ್ನುವ ದುರುದ್ದೇಶದಿಂದ ಗಿರಿ ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕ್ರಮ ಅತ್ಯಂತ ಸ್ವಾಗತಾರ್ಹ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

Advertisement

ಹಿಂದೂಗಳ ಧಾರ್ಮಿಕ ಆಚರಣೆಯಾದ ದತ್ತ ಜಯಂತಿ ಸಂಧರ್ಭದಲ್ಲಿ ಇಂತಹ ಕೃತ್ಯವನ್ನು ನಡೆಸಿ ಹಿಂದೂ ಮತ್ತು ಮುಸ್ಲಿಮರ ನಡುವೆ ಇರುವ ಸಾಮರಸ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿದ್ದು, ಈ ಕೃತ್ಯದ ಹಿಂದೆ ಇನ್ನು ಕೆಲವು ಕಾಣದ ಕೈ ಗಳು ಕೆಲಸ ಮಾಡಿರುವ ಶಂಕೆಯಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕೆಂದು ಸಿ.ಟಿ. ರವಿ ಸೂಚಿಸಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ನಲ್ಲಿ 3 ದಿನಗಳ ಕಾಲ ನಡೆಯುವ ದತ್ತ ಜಯಂತಿ ಅತ್ಯಂತ ಯಶಸ್ವಿಯಾಗಿ ನಡೆಯುವುದರಿಂದ ಈ ಬಾರಿ ದತ್ತ ಜಯಂತಿ ನಡೆದಿದ್ದನ್ನು ಸಹಿಸದ ಕೆಲವು ಹಿಂದೂ ವಿರೋಧಿ ಶಕ್ತಿಗಳು ಈ ಕೃತ್ಯ ನಡೆಸಿರುವ ಅನುಮಾನವಿದ್ದು, ಈ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದತ್ತ ಜಯಂತಿ ಸಮಯದಲ್ಲಿ ಕೈಮರದಿಂದ ಪೀಠದ ವರೆಗೆ ತಿರುವುಗಳಲ್ಲಿ ಕೆಲವೆಡೆ ಮೊಳೆಗಳನ್ನು ಎಸೆದಿರುವುದು ಕಂಡುಬಂದಿದ್ದು, ಇದು ಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶವಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೃತ್ಯವೆಸೆಗಿದ ಆರೋಪಿ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದು ಈ ವರೆಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಿದ್ದಾರೆ. ಈ ಕೃತ್ಯದ ಹಿಂದೆ ಹಲವು ಕಿಡಿಗೇಡಿಗಳ ಹಾಗೂ ಸಮಾಜಘಾತುಕ ಶಕ್ತಿ ಕೆಲಸ ಮಾಡಿರುವ ಶಂಕೆಯಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಮಾಜದ ಸಾಮರಸ್ಯ ಹಾಳುಮಾಡಲು ಕಾರಣರಾದ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಟಿ ರವಿ ತಿಳಿಸಿದ್ದಾರೆ.

ಸಮಗ್ರ ತನಿಖೆ

Advertisement

ದತ್ತಪೀಠದ ರಸ್ತೆಯಲ್ಲಿ ಮೊಳೆ ಎಸೆದಿದ್ದ ಪ್ರಕರಣದ ಇಬ್ಬರು ಆರೋಪಿಗಳನ್ನ ಈಗಾಗಲೇ ಬಂಧಿಸಿದ್ದು, ಸಮಗ್ರ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ ಪಿ ಉಮಾ ಪ್ರಶಾಂತ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಆರೋಪಿಗಳು ಸಂಘಟನೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ, ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಇಬ್ಬರು ಆರೋಪಿಗಳು ಚಿಕ್ಕಮಗಳೂರು ನಗರ ನಿವಾಸಿಗಳು ಎಂದು ಎಸ್ ಪಿ ಸ್ಪಷ್ಟ ಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದ್ದ ವೇಳೆ, ದತ್ತಜಯಂತಿ ನಿಲ್ಲಿಸುವ ಬಗ್ಗೆ ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಸಂಭ್ರಮದಿಂದ ದತ್ತಜಯಂತಿ ನಡೆಯಬಾರದು ಎಂದು ಈ ರೀತಿ ಮಾಡಿದ್ದೇವೆ. ಹಾಗಾಗಿ ಏನಾದರು ತೊಂದರೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ ಪಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next