Advertisement

ನಾನಾ ನಿರೀಕ್ಷೆಗಳ ನಾಗ್ಪುರ ಟೆಸ್ಟ್‌

06:20 AM Nov 24, 2017 | Team Udayavani |

ನಾಗ್ಪುರ: ಕೋಲ್ಕತಾದಲ್ಲಿ ಕೈತಪ್ಪಿದ “ಅಚ್ಚರಿಯ ಜಯ’ವನ್ನು ನಾಗ್ಪುರದಲ್ಲಿ ಒಲಿಸಿಕೊಳ್ಳುವ ವಿಶ್ವಾಸದೊಂದಿಗೆ ಭಾರತ ತಂಡ ಶುಕ್ರವಾರದಿಂದ “ವಿಸಿಎ’ ಅಂಗಳದಲ್ಲಿ ಶ್ರೀಲಂಕಾವನ್ನು ಎದುರಿಸಲು ಇಳಿಯಲಿದೆ. ಇಲ್ಲಿ ಕೂಡ ಹಸಿರು ಹುಲ್ಲಿನಿಂದ ಕೂಡಿದ ವೇಗದ ಬೌಲಿಂಗ್‌ ಟ್ರ್ಯಾಕ್‌ ಇತ್ತಂಡಗಳಿಗೆ ಕಾದು ಕುಳಿತಿದೆ. ಹೆಚ್ಚು ಖುಷಿಯ ಸಂಗತಿಯೆಂದರೆ, ಹವಾಮಾನ ತಿಳಿಯಾಗಿದೆ!

Advertisement

“ಈಡನ್‌ ಗಾರ್ಡನ್ಸ್‌’ನಲ್ಲಿ ಮೊದಲ ಎಸೆತದಲ್ಲೇ ಮೇಲುಗೈ ಸಾಧಿಸುತ್ತ ಬಂದ ಶ್ರೀಲಂಕಾ, ಇನ್ನಿಂಗ್ಸ್‌ ಮುನ್ನಡೆಯ ತನಕ ಹಿಡಿತವನ್ನು ಉಳಿಸಿಕೊಂಡಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ ವೇಳೆ ಪಂದ್ಯದ ಚಿತ್ರಣ ನಿಧಾನವಾಗಿ ಬದಲಾಗತೊಡಗಿತು. ಟೀಮ್‌ ಇಂಡಿಯಾ ತನ್ನ ಪಟ್ಟನ್ನು ಬಿಗಿಗೊಳಿಸಿತು. ಕ್ಯಾಪ್ಟನ್‌ ಕೊಹ್ಲಿಯ ಶತಕ ಹಾಗೂ ಭುವನೇಶ್ವರ್‌ ಕುಮಾರ್‌ ಅವರ ಸೀಮ್‌ ಬೌಲಿಂಗ್‌ ದಾಳಿಯಿಂದಾಗಿ ಭಾರತ ರೋಚಕ ಗೆಲುವಿನ ಹೊಸ್ತಿಲಿನ ತನಕ ಬಂತು. ಆದರೆ ಇದಕ್ಕೆ ಮಂದ ಬೆಳಕು ಅಡ್ಡಿಯಾಯಿತು. ಶ್ರೀಲಂಕಾ ಬಚಾವಾಯಿತು!

ಭುವಿ ಬದಲಿಗೆ ಯಾರು?
ನಾಗ್ಪುರದಲ್ಲಿ ಇದರ ಮುಂದುವರಿದ ಭಾಗವನ್ನು ನಿರೀಕ್ಷಿಸಲಡ್ಡಿಯಿಲ್ಲ. ಕಾರಣ, ಭಾರತದ ಸಾಂಪ್ರದಾಯಿಕ ಟರ್ನಿಂಗ್‌ ಟ್ರ್ಯಾಕ್‌ಗಳಿಗೆ ಬದಲಾಗಿ ಇಲ್ಲಿಯೂ ಸೀಮರ್‌ಗಳಿಗೆ ನೆರವಾಗುವ ಪಿಚ್‌ ನಿರ್ಮಾಣಗೊಂಡಿದೆ. ದಕ್ಷಿಣ ಆಫ್ರಿಕಾದ ಕಠಿನ ಸರಣಿ ಮುಂದಿರುವುದರಿಂದ ಫಾಸ್ಟ್‌ ಟ್ರ್ಯಾಕ್‌ಗಳಲ್ಲಿ ಸಾಕಷ್ಟು ಅಭ್ಯಾಸ ನಡೆಸುವುದು ಭಾರತದ ಯೋಜನೆ. ಇದೊಂದು ಉತ್ತಮ ಹಾಗೂ ಸ್ವಾಗತಾರ್ಹ ಬೆಳವಣಿಗೆ. ಆದರೆ ಇಂಥ ಪಿಚ್‌ಗಳಲ್ಲಿ ಘಾತಕವಾಗಿ ಪರಿಣಮಿಸುವ, ಕೋಲ್ಕತಾದಲ್ಲಿ 8 ವಿಕೆಟ್‌ ಉಡಾಯಿಸಿ ಲಂಕೆಗೆ ಭೀತಿಯೊಡ್ಡಿದ ಭುವನೇಶ್ವರ್‌ ಕುಮಾರ್‌ ಗೈರು ಭಾರತವನ್ನು ಕಾಡದೇ ಇರದು.

ಭುವಿ ಜಾಗವನ್ನು ಯಾರು ತುಂಬುತ್ತಾರೆ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಮುಂದಿರುವ ಪ್ರಶ್ನೆ. ಇಲ್ಲಿರುವುದು ಎರಡೇ ಆಯ್ಕೆ. ಅನುಭವಿ ಇಶಾಂತ್‌ ಶರ್ಮ ಮತ್ತು ಇನ್ನಷ್ಟೇ ಟೆಸ್ಟ್‌ಕ್ಯಾಪ್‌ ಧರಿಸಬೇಕಿರುವ ವಿಜಯ್‌ ಶಂಕರ್‌. ಇವರಲ್ಲಿ 77 ಟೆಸ್ಟ್‌ ಆಡಿರುವ ಇಶಾಂತ್‌ ಭಾರತ ತಂಡದಲ್ಲೇ ಅತ್ಯಂತ ಅನುಭವಿಯಾಗಿದ್ದಾರೆ. ಪ್ರಸಕ್ತ ರಣಜಿ ಋತುವಿನಲ್ಲಿ 116 ಓವರ್‌ ಎಸೆದು 20 ವಿಕೆಟ್‌ ಉಡಾಯಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಇಶಾಂತ್‌ ಅವರೇ ಮೊದಲ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.

ತಮಿಳುನಾಡಿನ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಬಹಳ ಬೇಗ ಕ್ರಿಕೆಟ್‌ ಎತ್ತರವನ್ನು ತಲಪುತ್ತಿರುವ ಭರವಸೆಯ ಆಟಗಾರ. ಅವರೇ ಹೇಳಿದಂತೆ ಇದೊಂದು ಅಚ್ಚರಿಯ ಕರೆ. ಈ “ಅಚ್ಚರಿಯ ಅಸ್ತ್ರ’ವನ್ನು ಶ್ರೀಲಂಕಾ ಮೇಲೆ ಪ್ರಯೋಗಿಸಿ ಯಶಸ್ಸು ಕಾಣುವುದು ಭಾರತದ ಗುರಿ ಆಗಿರಲೂಬಹುದು. ಗಂಟೆಗೆ 120-130 ಕಿ.ಮೀ. ವೇಗದಲ್ಲಿ ಎಸೆತಗಳನ್ನಿಕ್ಕುವ ವಿಜಯ್‌ ಶಂಕರ್‌, 32 ಪ್ರಥಮ ದರ್ಜೆ ಪಂದ್ಯಗಳಿಂದ 27 ವಿಕೆಟ್‌ ಹಾರಿಸಿದ್ದಾರೆ. ಬ್ಯಾಟಿಂಗ್‌ ಕೂಡ ಬೊಂಬಾಟ್‌ ಆಗಿದೆ. 49.43ರ ಸರಾಸರಿಯಲ್ಲಿ, 5 ಶತಕಗಳ ಸಹಿತ 1,671 ರನ್‌ ಬಾರಿಸಿದ್ದಾರೆ. ವಿಶ್ರಾಂತಿಯಲ್ಲಿರುವ ಹಾರ್ದಿಕ್‌ ಪಾಂಡ್ಯ ಜಾಗಕ್ಕೆ ವಿಜಯ್‌ ಶಂಕರ್‌ ಯೋಗ್ಯ ಆಯ್ಕೆ ಎಂಬುದು ಅನೇಕರ ಅನಿಸಿಕೆ. ಅಂತಿಮ ಗಳಿಗೆಯಲ್ಲಿ ರೋಹಿತ್‌ ಅವಕಾಶ ಪಡೆದರೂ ಅಚ್ಚರಿ ಇಲ್ಲ.

Advertisement

ಅವಳಿ ಸ್ಪಿನ್‌ ಅನುಮಾನ
ನಾಗ್ಪುರ ಪಂದ್ಯಕ್ಕೆ ಭಾರತ ಅವಳಿ ಸ್ಪಿನ್‌ ದಾಳಿ ಸಂಘಟಿಸುವುದು ಅನುಮಾನ. ಅಶ್ವಿ‌ನ್‌-ಜಡೇಜ ಜೋಡಿಗೆ ಕೋಲ್ಕತಾದಲ್ಲಿ ಒಂದೂ ವಿಕೆಟ್‌ ಸಿಕ್ಕಿರಲಿಲ್ಲ. ಅಲ್ಲಿ ಇವರಿಬ್ಬರು ಸೇರಿ ಎಸೆದದ್ದು 10 ಓವರ್‌ ಮಾತ್ರ. ನಾಗ್ಪುರದಲ್ಲೂ ಸ್ಪಿನ್‌ ನಡೆಯುವುದು ಅನುಮಾನವಾದ್ದರಿಂದ ಅವಳಿ ಸ್ಪಿನ್‌ ಅಗತ್ಯ ಕಂಡುಬರದು. ಇವರಿಬ್ಬರಲ್ಲಿ ಒಬ್ಬರಷ್ಟೇ ಉಳಿದುಕೊಳ್ಳಬಹುದು. ಅಥವಾ ಚೈನಾಮನ್‌ ಕುಲದೀಪ್‌ ಯಾದವ್‌ ಬರಲೂಬಹುದು. 

ಶಿಖರ್‌ ಧವನ್‌ ಗೈರಲ್ಲಿ ಮುರಳಿ ವಿಜಯ್‌ ಮತ್ತೆ ಇನ್ನಿಂಗ್ಸ್‌ ಆರಂಭಿಸಲು ಇಳಿಯಲಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಧರ್ಮಶಾಲಾ ಟೆಸ್ಟ್‌ ಬಳಿಕ ವಿಜಯ್‌ ಗಾಯಾಳಾಗಿ ಹೊರಗುಳಿದಿದ್ದರು.

ಬೌಲಿಂಗ್‌ ಮೇಲೆ ಲಂಕಾ ಗಮನ
ಶ್ರೀಲಂಕಾ ಈ ಪಂದ್ಯದಲ್ಲಿ ತನ್ನ ಬೌಲಿಂಗ್‌ ವಿಭಾಗವನ್ನು ಇನ್ನಷ್ಟು ಪ್ರಬಲಗೊಳಿಸುವ ಯೋಜನೆಯಲ್ಲಿದೆ. ಲಕ್ಮಲ್‌, ಗಾಮಗೆ, ಶಣಕ ಜತೆಗೆ ಎಡಗೈ ಪೇಸರ್‌ ವಿಶ್ವ ಫೆರ್ನಾಂಡೊ ಅವರನ್ನೂ ಆಡಿಸಬಹುದು. ಚೈನಾಮನ್‌ ಲಕ್ಷಣ ಸಂದಕನ್‌ ಕೂಡ ರೇಸ್‌ನಲ್ಲಿದ್ದಾರೆ. ಇವರಿಗಾಗಿ ದಿಲುÅವಾನ್‌ ಪೆರೆರ, ರಂಗನ ಹೆರಾತ್‌ ಹೊರಗುಳಿದರೂ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next