Advertisement
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮ ಅವರ ಅಬ್ಬರದಿಂದ ಭಾರತ ಒಂದೇ ವಿಕೆಟಿಗೆ 283 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಭಾರೀ ಆಘಾತ ಅನುಭವಿಸಿತು. 10 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. 18.2 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟಾಯಿತು. ಭಾರತದ ಪರ ಬಿಗಿ ದಾಳಿ ನಡೆಸಿದ ಅರ್ಶದೀಪ್ ಸಿಂಗ್ 3 ವಿಕೆಟ್ ಕಿತ್ತರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2, ಹಾರ್ದಿಕ್ ಪಾಂಡ್ಯಾ, ರಮಣ್ ದೀಪ್ ಸಿಂಗ್ ಮತ್ತು ರವಿ ಬಿಷ್ನೋಯಿ ತಲಾ 1 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ಇದೇ ಮೊದಲಬಾರಿಗೆ ( 135ರನ್ಗಳಿಂದ) ದೊಡ್ಡ T20 ಸೋಲು ಅನುಭವಿಸಿತು.
Related Articles
Advertisement
ಸಂಜು ಈ ಸರಣಿಯಲ್ಲಿ 2ನೇ ಸೆಂಚುರಿ ಬಾರಿಸಿದರೆ, ತಿಲಕ್ ಸತತ ಎರಡನೇ ಶತಕದ ಪುಳಕದಲ್ಲಿ ಮಿಂದೆದ್ದರು. ಸಂಜು ಕ್ಯಾಲೆಂಡರ್ ವರ್ಷದಲ್ಲಿ 3 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನಾಗಿದ್ದಾರೆ. ತಿಲಕ್ ಸತತ 2 ಶತಕ ಬಾರಿಸಿದ ವಿಶ್ವದ 5ನೇ ಹಾಗೂ ಭಾರತದ 2ನೇ ಕ್ರಿಕೆಟಿಗನೆನಿಸಿದರು.
ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರವನ್ನು ಸಂಜು ಸ್ಯಾಮ್ಸನ್-ಅಭಿಷೇಕ್ ಶರ್ಮ ಸೇರಿಕೊಂಡು ಭರ್ಜರಿಯಾಗಿ ಸಮರ್ಥಿಸುತ್ತ ಹೋದರು. ಪವರ್ ಪ್ಲೇಯಲ್ಲಿ 73 ರನ್ ಹರಿದು ಬಂತು. ಅಭಿಷೇಕ್ 18 ಎಸೆತಗಳಿಂದ 36 ರನ್ ಹೊಡೆದರು. ಸಿಡಿಸಿದ್ದು 2 ಬೌಂಡರಿ ಹಾಗೂ 4 ಸಿಕ್ಸರ್. ದಕ್ಷಿಣ ಆಫ್ರಿಕಾಕ್ಕೆ ಲಭಿಸಿದ್ದು ಅಭಿಷೇಕ್ ವಿಕೆಟ್ ಮಾತ್ರ.
ಮೊದಲ ಪಂದ್ಯದ ಶತಕದ ಬಳಿಕ 2 ಸೊನ್ನೆ ಸುತ್ತಿದ ಸಂಜು ಸ್ಯಾಮ್ಸನ್ ಮತ್ತೆ ಬಿರುಸಿನ ಆಟಕ್ಕೆ ಮುಂದಾದರು. ಕಳೆದ ಪಂದ್ಯದ ಶತಕವೀರ ತಿಲಕ್ ವರ್ಮ ಇಲ್ಲಿಯೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತ ಹೋದರು. 10 ಓವರ್ ಅಂತ್ಯಕ್ಕೆ 129 ರನ್ ಒಟ್ಟುಗೂಡಿತು. ಇದು 10 ಓವರ್ ಅಂತ್ಯಕ್ಕೆ ಭಾರತ ಒಟ್ಟುಗೂಡಿಸಿದ 2ನೇ ಅತ್ಯಧಿಕ ಗಳಿಕೆ.
ತಿಲಕ್ ವರ್ಮ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.