“ಇವತ್ತು ಸುತ್ತಮುತ್ತಲು ಕ್ರೌರ್ಯ ವಿಕೃತಿ ನೋಡುತ್ತಿರುವ ಮಕ್ಕಳಿಗೆ ತಾಳ್ಮೆ, ಸಹನೆ, ಛಲದ ಬಗ್ಗೆ ಹೇಳುವ ಸಿನಿಮಾವಿದು…’ – ಹೀಗೆಂದರು ನಾಗಿಣಿ ಭರಣ.
ಅವರು ಹೇಳಿದ್ದು “ಜೀನಿಯಸ್ ಮುತ್ತ’ ಸಿನಿಮಾ ಬಗ್ಗೆ. ಇದು ನಾಗಿಣಿ ಭರಣ ನಿರ್ದೇಶನದ ಚೊಚ್ಚಲ ಸಿನಿಮಾ. ಅವರ ಪತಿ ಟಿ.ಎಸ್ .ನಾಗಭರಣ ನಿರ್ದೇಶನದ “ಚಿನ್ನಾರಿ ಮುತ್ತ’ ಚಿತ್ರಕ್ಕೆ 31 ವರ್ಷ ಆಗುವ ಹೊತ್ತಿಗೆ ಇವರು “ಜೀನಿಯಸ್’ ಮುತ್ತ’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಆಗಸ್ಟ್ 9 ರಂದು ತೆರೆಕಾಣುತ್ತಿದೆ.
ಈ ಸಿನಿಮಾವನ್ನು ಪ್ರೇಕ್ಷಕ ಯಾಕಾಗಿ ನೋಡಬೇಕು, ಐದು ಕಾರಣ ಕೊಡಿ ಎಂಬ ಪ್ರಶ್ನೆಗೆ ಉತ್ತರಿಸುವ ನಾಗಿಣಿ ಭರಣ, ಇವತ್ತು ಸುತ್ತಮುತ್ತಲು ಕ್ರೌರ್ಯ ವಿಕೃತಿ ನೋಡುತ್ತಿರುವ ಮಕ್ಕಳಿಗೆ ತಾಳ್ಮೆ, ಸಹನೆ, ಛಲದ ಬಗ್ಗೆ ಹೇಳುವ ಸಿನಿಮಾವಿದು ಎನ್ನುತ್ತಾರೆ. ಜೊತೆಗೆ ತಾಯಿ ಮಕ್ಕಳ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೆ ಈ ಚಿತ್ರ ನೋಡಬೇಕು, ಎಷ್ಟೇ ಕಷ್ಟ ಬಂದರೂ ಸಕಾರಾತ್ಮಕವಾಗಿ ಎದುರಿಸಬೇಕು ಎಂಬುದನ್ನು ಈ ಚಿತ್ರ ಹೇಳುತ್ತದೆ. ಈ ಸಿನಿಮಾದಲ್ಲಿದೆ. ಪ್ರತಿ ಒಬ್ಬರಲ್ಲೂ ಪ್ರತಿಭೆ ಇರುತ್ತದೆ. ಆ ಸದಾವಾಕಾಶವನ್ನು ಬಳಸಿಕೊಳ್ಳಬೇಕು ಎಂಬ ಸಂದೇಶವಿದೆ. ಜೊತೆಗೆ ಮನರಂಜನೆಗೆ ಒಂದು ಹೊಸ ವ್ಯಾಖ್ಯಾನ ಕೊಡುವ ಸಿನಿಮಾ “ಜೀನಿಯಸ್ ಮುತ್ತ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.
ಈ ಚಿತ್ರವನ್ನು ಜಿ.ಎಸ್ ಲತಾ ಜೈಪ್ರಕಾಶ್ ನಿರ್ಮಾಣ ಮಾಡಿದ್ದು, ಈ ಚಿತ್ರದಲ್ಲಿ ಜೀನಿಯಸ್ ಮುತ್ತನಾಗಿ ಮಾಸ್ಟರ್ ಶ್ರೇಯಸ್ ಜೈ ಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕಿ ನಾಗಿಣಿ ಭರಣ, “ಆ ಚಿತ್ರವನ್ನು ನೀವೇ ನಿರ್ದೇಶಿಸಬೇಕೆಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಸೇರಿ ಈ ಚಿತ್ರದ ಕಥೆ ಸಿದ್ಧ ಮಾಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ.
ಮಾಸ್ಟರ್ ಶ್ರೇಯಸ್, ವಿಜಯ ರಾಘವೇಂದ್ರ, ಟಿ.ಎಸ್ .ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ’ ಎನ್ನುತ್ತಾರೆ.