Advertisement

ನಾಗಾರಾಧನೆಯೆಂದರೆ ಪ್ರಕೃತಿ ಪೂಜೆ

02:55 AM Jul 25, 2020 | Hari Prasad |

ನಾಗ-ಭೂಮಿ-ವೃಕ್ಷದ ನಡುವೆ ಅವಿನಾಭಾವ ಸಂಬಂಧವಿದೆ. ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಶಕ್ತಿ ನಾಗವಾಗಿದೆ.

Advertisement

ಪ್ರಾಚೀನ ಕಾಲದಿಂದಲೂ ನಾಗ ದೇವತೆಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದ್ದು, ನಾಗರ ಪಂಚಮಿಯಂದು ವಿಶೇಷವಾಗಿ ನಾಗ ದೇವರನ್ನು ಪೂಜಿಸಲಾಗುತ್ತದೆ.

ನಾಗನ ಆಚರಣೆಯೆಂದರೆ ಪ್ರಕೃತಿಯ ಆಚರಣೆಯೇ ಆಗಿದೆ.

ಸಮೃದ್ಧವಾದ ಬೆಟ್ಟ ಗುಡ್ಡಗಳಿಂದ ಆವೃತವಾದ ಭೂಭಾಗ ತುಳುನಾಡು. ಇದು ಉರಗ ಸಂತತಿಯ ಬೆಳವಣಿಗೆಗೆ ಸಹಜವಾಗಿ ಅನುಕೂಲಕರವಾಗಿದೆ. ನಿಸರ್ಗ ಶಕ್ತಿಗಳ ಮುಂದೆ ಭಯ ಭಕ್ತಿಯಿಂದ ನಾಗನನ್ನು ಆರಾಧಿಸಿಕೊಂಡು ಬರಲಾಗಿದೆ. ಪರಿಸರ -ಕಾಡು ಬಗೆಗಿನ ಒಂದು ರೀತಿಯ ಭಯ-ಭಕ್ತಿ ಪೂರ್ವಜರಿಂದಲೂ ಇತ್ತು.

ಕಾಡು ಪ್ರಾಣಿಗಳ ಸಂತತಿಯನ್ನು ಉಳಿಸಿಕೊಂಡು ಮಾನವ ತನ್ನ ಜೀವನವನ್ನು ಸಾಂಗವಾಗಿ ಸಾಗಿಸುವ ನಿಟ್ಟಿನಲ್ಲಿ ಹಲವಾರು ಆರಾಧನೆಗಳನ್ನು ನಡೆಸುತ್ತಾ ಬಂದಿದ್ದಾನೆ. ಆದರಲ್ಲಿ ಪ್ರಮುಖವಾದುದು ನಾಗಾರಾಧನೆ. ಹೀಗಾಗಿಯೆ ನಾಗ-ವೃಕ್ಷ ಸಂಬಂಧವನ್ನು ಆವಳಿ ಚೇತನಗಳೆಂದು ವ್ಯಾಖ್ಯಾನಿಸಬಹುದು.

Advertisement

ದುಃಖದ ನಡುವೆ ಭಕ್ತಿ ಪ್ರಧಾನ
ನಾಗರ ಪಂಚಮಿ ಅಂಗವಾಗಿ ದೇವಸ್ಥಾನ ಮತ್ತು ನಾಗಬನಗಳಲ್ಲಿ ನಾಗದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ವರ್ಷವೂ ನಾಗರ ಪಂಚಮಿ ಆಚರಣೆಯು ಶ್ರದ್ಧೆ, ಭಕ್ತಿ, ಭಾವದಿಂದ ಸಂಭ್ರಮದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಜಗತ್ತಿಗೆ ಆವರಿಸಿಕೊಂಡ ಕೋವಿಡ್‌-19 ಸೋಂಕು ನಾಡಿನ ಜನತೆಯಲ್ಲಿ ತಲ್ಲಣ ಸೃಷ್ಟಿಸಿದೆ. ಸಂಭ್ರಮದ ಬದಲಿಗೆ ಭಕ್ತಿ ಮಾತ್ರ ಉಳಿದುಕೊಂಡಿದೆ. ಭಕ್ತರಲ್ಲಿ ಸಂಭ್ರಮಕ್ಕಿಂತ ಆತಂಕದ ಕರಿಛಾಯೆ ಆವರಿಸಿರುವುದು ದುಃಖ ತಂದಿದೆ.

ಮನೆಗಳಲ್ಲಿ ಸರಳವಾಗಿ ಆಚರಿಸಿ
ಜೀವಸಂಕುಲಗಳು ಹರಿದಾಡುವ ನಾಗನ ನೆಲೆ, ನಾಗ ಸನ್ನಿಧಿ ಕುಕ್ಕೆಯಲ್ಲಿ ನಾಗರ ಪಂಚಮಿಯಂದು ವಿಶೇಷ ಪ್ರಾರ್ಥನೆ, ಆರಾಧನೆಗಳು ಪೂರ್ವದಿಂದಲೂ ನಡೆಯುತ್ತ ಬರುತ್ತಿದೆ. ಪೂರ್ವ ಸಂಪ್ರದಾಯದಂತೆ ಈ ಬಾರಿಯೂ ನಾಗ ಸನ್ನಿಧಿಯಲ್ಲಿ ದೇವರಿಗೆ ಪೂಜೆ, ತನು, ಸೀಯಾಳ ಸಮರ್ಪಣೆ ಶಿಷ್ಟಾಚಾರದಂತೆ ನಡೆಯಲಿದೆ. ನಾಗರ ಪಂಚಮಿ ದಿನ ದೇವಸ್ಥಾನಗಳಲ್ಲಿ ಸಾಮೂಹಿಕ ಆರಾಧನೆಗೆ ಅಸಾಧ್ಯವಾದ ಸ್ಥಿತಿಯಲ್ಲಿ ಎಲ್ಲರೂ ತಮ್ಮ ಮನೆಗಳಲ್ಲಿ ಸರಳ ಆಚರಣೆಯಲ್ಲಿ ತೊಡಗುವುದು ಉತ್ತಮ.

ಪಂಚಮಿ ತರುವಾಯವೂ ಆರಾಧನೆಗೆ ಯೋಗ್ಯ
ತುಳುನಾಡು ಸಹಿತ ನಾಡಿನ ಬಹುತೇಕ ಕಡೆಗಳಲ್ಲಿ ಭಕ್ತರ ಮನೆಗಳಲ್ಲಿ ನಾಗನ ಮೂರ್ತಿ, ನಾಗಬನಗಳಿವೆ. ಅಂಥವರು ಸಂಪ್ರದಾಯ ಬದ್ಧವಾಗಿ ತಮ್ಮ ಮನೆಗಳಲ್ಲಿ ಸರಳ ಆರಾಧನೆಯಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ಸಂಕಷ್ಟ ಹರಣ, ಸರ್ವದೋಷ ನಿವಾರಕ ಶ್ರೀ ನಾಗ ದೇವರಿಗೆ ಮೊರೆಯಿಡುವುದು ಉತ್ತಮ. ನಾಗಾರಾಧನೆಗೆ ನಾಗರ ಪಂಚಮಿ ದಿನ ವಿಶೇಷವಾಗಿದ್ದರೂ ತರುವಾಯದ ದಿನಗಳಲ್ಲಿ ಕೂಡ ನಾಗ ಸಂಬಂಧಿ ಪೂಜೆ, ವಿಧಿ ವಿಧಾನಗಳಲ್ಲಿ ತೊಡಗಿಸಿಕೊಳ್ಳಬಹುದು.

ಭಕ್ತರಲ್ಲಿ ಆತಂಕ ಬೇಡ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ದಿನ ಪೂರ್ವಶಿಷ್ಟ ಸಂಪ್ರದಾಯದಂತೆ ನಾಗಾರಾಧನೆ ನಡೆಯುತ್ತದೆ. ಭಕ್ತರಿಗೆ ಸಾಮೂಹಿಕ ಪೂಜೆಯಲ್ಲಿ ತೊಡಗಲು ಅವಕಾಶವಿಲ್ಲ ಎಂದು ಯಾರೂ ಆತಂಕ ಪಡಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಪೂಜೆ, ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ದುರಿತ ದೂರವಾಗಲು ಪ್ರಾರ್ಥನೆ
ನಾಗರ ಪಂಚಮಿ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಉಪಯುಕ್ತವಾಗಿದೆ. ಶ್ರಾವಣ ತಿಂಗಳ ಶುಕ್ಲ ಪಕ್ಷದ ಪಂಚಮಿ ದಿನ ನಡೆಯುವ ನಾಗರ ಪಂಚಮಿ ದಿನ ಶ್ರೀನಾಗ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳಲಾಗುವುದು.

ಲೋಕ ಕಂಟಕವಾಗಿರುವ ಕೋವಿಡ್‌-19 ದೂರವಾಗಿ, ಪ್ರಾಣಿ-ಪಕ್ಷಿ ಮನುಕುಲದ ದುರಿತಗಳು ದೂರವಾಗಲಿ ಎಂದು ಲೋಕಕಲ್ಯಾಣಾರ್ಥ ಪ್ರಾರ್ಥಿಸಲಾಗುವುದು. ನಾಡಿನ ಸರ್ವರಿಗೂ ಆರೋಗ್ಯಭಾಗ್ಯ ವೃದ್ಧಿಸಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಗುವುದು.

– ವೇ|ಮೂ| ಸೀತಾರಾಮ ಎಡಪಡಿತ್ತಾಯ, ಪ್ರಧಾನ ಅರ್ಚಕರು, ತಂತ್ರಿಗಳು, ಕುಕ್ಕೆ ಶ್ರೀ ಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next