Advertisement
ನಾಗಮಂಗಲದ ಗಲಭೆ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವ್ಯವಸ್ಥಿತವಾಗಿ ಗಲಭೆಗಳ ಸೃಷ್ಟಿಸುವುದು ಕಾಂಗ್ರೆಸ್ ಗೆ ಕರಗತವಾಗಿದೆ. ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪ್ಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ ಇಟ್ಟುಕೊಂಡು ಗಲಭೆ ಸೃಷ್ಟಿ ಮಾಡಲಾಗಿದೆಯೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಅನುಮಾನ ವ್ಯಕ್ತಪಡಿಸಿದರು.
Related Articles
ಗಲಭೆಯ ಎಫ್‌ಐಆರ್ ಪ್ರತಿ ಸಂಪೂರ್ಣ ಲೋಪದಿಂದ ಕೂಡಿದ್ದು, ಪೊಲೀಸರ ವರ್ತನೆ ಸಂಶಯಾಸ್ಪದವಾಗಿದೆ. ಕೇವಲ 100- 150 ಜನ ಇದ್ದ ಮೆರವಣಿಗೆಗೆ ಸ್ಥಳೀಯ ಪೊಲೀಸರಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ. ಮೆರವಣಿಗೆಗೆ ಅನುಮತಿ ಕೊಟ್ಟಿರುವುದೇ ನೀವು. ಮೆರವಣಿಗೆಗೆ ಭದ್ರತೆ ಕೊಡಬೇಕಾದ ಹೊಣೆಯೂ ನಿಮ್ಮದೇ. ಘಟನೆ ಸ್ಥಳದಲ್ಲಿ ಆಗ ಎಷ್ಟು ಜನ ಪೊಲೀಸರನ್ನು ನಿಯೋಜನೆ ಮಾಡಿದ್ದಿರಿ? ನಿಮ್ಮ ಇನ್‌ಸ್ಪೆಕ್ಟರ್ ಎಲ್ಲಿ ಇದ್ದರು? ಘಟನೆಗೂ ಮುನ್ನ ಇಲ್ಲಿದ್ದ ಮೀಸಲು ಪಡೆ ವಾಹನ ವಾಪಸ್ ಕರೆಸಿಕೊಂಡಿದ್ದಾರೆ. ಮಸೀದಿ ಬಳಿ 10 ನಿಮಿಷ ಡಾನ್ಸ್ ಮಾಡಲು ಬಿಟ್ಟವರು ಯಾರು? ಆಗ ಪೊಲೀಸರು ಏನು ಮಾಡುತ್ತಿದ್ದರು? ಹೆಚ್ಚುವರಿ ಪೊಲೀಸರಿದ್ದರೆ ಪರಿಸ್ಥಿತಿ ನಿಯಂತ್ರಿಸಬಹುದಿತ್ತು. ಮೆರವಣಿಗೆ ವೇಳೆ ಇನ್‌ಸ್ಪೆಕ್ಟರ್, ಡಿವೈಎಸ್ಪಿ ಯಾರೂ ಇರಲಿಲ್ಲ. ಆದರೆ ಎಫ್‌ಐಆರ್‌ನಲ್ಲಿ ಅವರೆಲ್ಲ ಇದ್ದರು ಎಂದು ಬರೆಯಲಾಗಿದೆ. ಇದು ಯಾವ ಜಾದು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Advertisement
ಮೆರವಣಿಗೆ ಹೊರಟಿದ್ದವರ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿದೆ. ಕೇವಲ ಹತ್ತು ನಿಮಿಷದಲ್ಲಿ ಅಷ್ಟು ಪ್ರಮಾಣದ ಕಲ್ಲು, ಚಪ್ಪಲಿ, ಕಬ್ಬಿಣದ ಪೈಪ್ ಗಳು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು? ಹತ್ತೇ ನಿಮಿಷದಲ್ಲಿ ಇವನ್ನೆಲ್ಲಾ ಸಂಗ್ರಹ ಮಾಡಿಕೊಳ್ಳಲು ಸಾಧ್ಯವೇ? ಎಂದು ಕೇಂದ್ರ ಸಚಿವ ಪ್ರಶ್ನಿಸಿದರು.
ನಾಗಮಂಗಲ ಗಲಭೆ ಸಣ್ಣ, ಆಕಸ್ಮಿಕ ಘಟನೆ ಎಂದು ಕರೆದಿರುವ ಗೃಹ ಸಚಿವ ಜಿ.ಪರಮೇಶ್ವರ್ ರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವರು; ಇಷ್ಟೊಂದು ದೊಡ್ಡ ಗಲಭೆಯಾಗಿದೆ. ಯೋಜಿತವಾಗಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೂ ಇವರೂ ಸಣ್ಣ, ಆಕಸ್ಮಿಕ ಘಟನೆ ಎನ್ನುತ್ತಾರೆ, ಇವರನ್ನು ಗೃಹ ಸಚಿವರು ಎಂದು ಕರೆಯಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳ ಪರಿಶೀಲನೆ, ಪರಿಹಾರ ವಿತರಿಸಿದ ಕೇಂದ್ರ ಸಚಿವ
ಗಲಭೆ ನಡೆದಿದ್ದ ಜಾಗಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುಟ್ಟು ಹೋಗಿರುವ ಅಂಗಡಿಗಳ ಬಳಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರ ಜೊತೆ ಚರ್ಚಿಸಿ ಮಾಹಿತಿ ಪಡೆದ ಬಳಿಕ ಪರಿಹಾರದ ಮೊತ್ತ ವಿತರಿಸಿದರು. ಆಸ್ತಿ, ಅಂಗಡಿ ಹಾನಿಗೊಳದವರಿಗೆ ನಷ್ಟ ಆಧರಿಸಿ ತಲಾ 25 ಸಾವಿರ ರೂ. 2 ಲಕ್ಷ ರೂ. ವರೆಗೂ ಪರಿಹಾರ ವಿತರಿಸಿದರು.