ನಟ ಧನಂಜಯ್ ನಿರ್ಮಾಣದ “ಟಗರು ಪಲ್ಯ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನಾಗಭೂಷಣ್ ಹಾಗೂ ಅಮೃತಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ.
ಚಿತ್ರದ ಬಿಡುಗಡೆ ಕುರಿತಂತೆ ಮಾತನಾಡಿದ ಕಾರ್ತಿಕ್ ಗೌಡ ಮಾತನಾಡಿ, “45 ದಿನ ಮೊದಲೇ ಸಿನಿಮಾ ತೋರಿಸಿದ್ದರು. ಬಡವ ರಾಸ್ಕಲ್ ಕೂಡ ರಿಲೀಸ್ ಗೂ ಮುನ್ನ ಎರಡು ಮೂರು ತಿಂಗಳು ಮೊದಲೇ ತೋರಿಸಿದ್ದರು. ವಾಸುಕಿ ಆಗ ಒಂದು ಮಾತು ಹೇಳಿದ್ದರು. ಒಟಿಟಿ ನೋಡಿ ನಮ್ಮಲ್ಲೇ ಈ ರೀತಿ ಸಿನಿಮಾ ಬರಲ್ಲ ಅಂತಾರೇ. ಇದು ಎಲ್ಲರ ಮೆಚ್ಚುಗೆಗೆ ಸೇರುವ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿದೆ. ಪ್ರತಿ ಪಾತ್ರವೂ ಅದ್ಭುತವಾಗಿ ನಟಿಸಿದ್ದಾರೆ. ಮನರಂಜನೆ ಜೊತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾವು ಈ ವರ್ಷದಲ್ಲಿ ವಿತರಣೆ ಮಾಡುತ್ತಿರುವ ಬೆಸ್ಟ್ ಸಿನಿಮಾ. 175 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ’ ಎಂದರು.
ನಿರ್ಮಾಪಕ ಧನಂಜಯ್ ಮಾತನಾಡಿ, ” ಸಿನಿಮಾಗೆ ಒಂದೊಳ್ಳೆ ಕಥೆಗೆ ಏನ್ ಬೇಕು ಅದೆಲ್ಲವನ್ನೂ ಟಗರು ಪಲ್ಯಗೆ ಒದಗಿಸಿದ್ದೇವೆ. ಈ ಚಿತ್ರವನ್ನು ಯಾಕೆ ನೋಡಲು ಬನ್ನಿ ಎಂದು ಕೇಳಿಕೊಳ್ಳುತ್ತೇನೆ ಎಂದರೆ, ನಮ್ಮ ಸಂಸ್ಥೆ ಕಡೆಯಿಂದ ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರಾಡೆಕ್ಟ್ ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ. ನಮ್ಮೆಲ್ಲರಿಗೂ ತುಂಬಾ ಕನೆಕ್ಟ್ ಆಗುವ ಕಥೆ ಇದೆ. ಬೇರೆ ಭಾಷೆ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ. ಆ ರೀತಿ ಕಥೆ ಇದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ ಎಂದು. ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಬಂದವರು ನಮ್ಮ ಪ್ರೊಡಕ್ಷನ್‌ನಿಂದ ಮೂವರು ಜನ ನಿರ್ದೇಶಕರು ಬಂದಿದ್ದಾರೆ ಅನ್ನೋದು ನಮ್ಮ ಹೆಮ್ಮೆ ಎಂದರು.
ನಟಿ ತಾರಾ ಅನುರಾಧಾ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. “ದಸರಾ ಹಬ್ಬ ಆದ ತಕ್ಷಣ ಸಖತ್ ಊಟ ಅಂದರೆ ಅದು ಟಗರು ಪಲ್ಯ. ನಿರ್ಮಾಪಕನಿಗೆ ವಯಸ್ಸು ಮುಖ್ಯ ಅಲ್ಲ. ಅವನ ಕೆಲಸ ಮುಖ್ಯ. ಡಾಲಿಗೆ ಇಡೀ ತಂಡದ ಪರವಾಗಿ ಧನ್ಯವಾದ. ಉಮೇಶ್ ಎಲ್ಲಿಯೂ ತಾನೊಬ್ಬ ಹೊಸ ನಿರ್ದೇಶಕ ಅನಿಸದೇ ಇರುವಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ. ಅಮೃತಾ ಹೊಸ ಹುಡುಗಿ ಅನಿಸುವುದಿಲ್ಲ. ತುಂಬಾ ಚೆನ್ನಾಗಿ ನಟಿಸಿದ್ದಾಳೆ. ನಾಗು ಒಳ್ಳೆ ಆಕ್ಟರ್. ನಮ್ಮ ಅದೃಷ್ಟ ಏನೋ ನಾನು ರಘು ಮಾಡಿದ ಎಲ್ಲಾ ಚಿತ್ರಗಳು ಚೆನ್ನಾಗಿ ಆಗುತ್ತಿವೆ’ ಎಂದು ಖುಷಿ ಹಂಚಿಕೊಂಡರು ತಾರಾ.
ನಿರ್ದೇಶಕ ಉಮೇಶ್ ಕೃಪಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ನವನಟಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.