ಹೊಸದಿಲ್ಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ ನಡ್ಡಾ) ಅವರು ಪ್ರಧಾನಿ ಮೋದಿ ನೇತೃತ್ವದ 3ನೇ ಅವಧಿಯ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಹೀಗಾಗಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕಾಗಿದೆ. ಒಂದು ಹಂತದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹಲವು ಸುದ್ದಿ ವಾಹಿನಿ
ಗಳು ಪ್ರಕಟಿಸಿದ್ದವು. ಆದರೆ ಅದನ್ನು ಪಕ್ಷ ಇನ್ನೂ ದೃಢಪಡಿಸಿಲ್ಲ.
ಮೂಲಗಳ ಪ್ರಕಾರ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವವರೆಗೆ ಅವರೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ನಡ್ಡಾ ಅವರು ಮೊದಲ ಅವಧಿಯ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.
2020ರಲ್ಲಿ ಅಮಿತ್ ಶಾ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯದ ಅನಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರು. 2022ರ ಸೆಪ್ಟಂಬರ್‌ನಲ್ಲೇ ನಡ್ಡಾ ಅವರ ಅವಧಿ ಮುಕ್ತಾಯವಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರ ಕಾರ್ಯಾವಧಿಯನ್ನು ವಿಸ್ತರಿಸಲಾಗಿತ್ತು. ನಡ್ಡಾ ಅವರಿಂದ ತೆರವುಗೊಳ್ಳಲಿರುವ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
16 ರಾಜ್ಯಗಳಲ್ಲಿ ಬಿಜೆಪಿ
ಜೆ.ಪಿ. ನಡ್ಡಾ ಅಧಿಕಾರಾವಧಿಯಲ್ಲಿ ದೇಶದ 29 ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. ಇದರಲ್ಲಿ 16 ರಾಜ್ಯಗಳಲ್ಲಿ ಬಿಜೆಪಿ ಏಕಾಂಗಿಯಾಗಿ, ಮಿತ್ರ ಪಕ್ಷಗಳ ನೆರವಿನಿಂದ ಅಧಿಕಾರಕ್ಕೆ ಏರಿದೆ.