ಎಚ್.ಡಿ.ಕೋಟೆ: ರೈತರು ನಾಡ ಕಚೇರಿಯಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗಿದ್ದ ವಿವಿಧ ಶುಲ್ಕಗಳ ಬಾಬ್ತು 6.26 ಲಕ್ಷ ರೂ.ಗಳನ್ನು ಇಲ್ಲಿನ ಅಧಿಕಾರಿಗಳೇ ದುರುಪಯೋಗ ಪಡಿಸಿಕೊಂಡಿರುವುದು ಲೆಕ್ಕಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ. ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರಿಂದ ನೋಟಿಸ್ ಜಾರಿ ಮಾಡಲಾಗಿದೆ.
ತಾಲೂಕಿನ ಹಂಪಾಪುರ ಹೋಬಳಿ ನಾಡಕಚೇರಿಯ ಉಪತಹಶೀಲ್ದಾರ್ ಎಲ್.ಎಸ್.ಮಾದೇಶ್ ಹಾಗೂ ಗ್ರಾಮ ಲೆಕ್ಕಿಗ ರಾಜಕುಮಾರ್ ಎಂಬುವವರೇ ರೈತರು ಮತ್ತು ಸಾರ್ವಜನಿಕರು ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸರ್ಕಾರಕ್ಕೆ ಕಟ್ಟಿದ್ದ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಅಡಿಟ್ (ಲೆಕ್ಕ ಪರಿಶೋಧನೆ) ವೇಳೆ ಸಿಕ್ಕಿ ಬಿದ್ದಿದ್ದಾರೆ.
ನಾಡ ಕಚೇರಿಯಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸ್ವೀಕೃತವಾಗುವ ಮೋಜಿಣಿ ಅರ್ಜಿಗಳು, ಆರ್‌ಟಿಸಿ ವಿತರಣೆ ಶುಲ್ಕ, ಆರ್‌ಡಿಎಸ್ ಶುಲ್ಕ, ಇ-ಜನ್ಮ ಹಾಗೂ 94ಸಿ ಅರ್ಜಿ ಶುಲ್ಕ, ಪಹಣಿ ಮತ್ತು ಮ್ಯುಟೇಷನ್ ಶುಲ್ಕ ಸೇರಿದಂತೆ ಇನ್ನಿತರ ಬಾಬ್ತುಗಳ ಶುಲ್ಕಗಳನ್ನು ಸ್ವೀಕರಿಸಲಾಗುತ್ತದೆ. ಹೀಗೆ ಸಾರ್ವಜನಿಕರಿಂದ ಸ್ವೀಕೃತವಾಗುವ ಶುಲ್ಕಗಳನ್ನು ಅಂದಿನ ದಿನವೇ ನಿಗದಿತ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಗೆ ಜಮಾ ಮಾಡಬೇಕು.
ಅದರೆ, ಇಲ್ಲಿನ ಅಧಿಕಾರಿಗಳು ಆರ್‌ಟಿಸಿ ವಿತರಣೆ ಮತ್ತು ಆರ್‌ಡಿಎಸ್ ಶುಲ್ಕ ಹಾಗೂ ಮೋಜಿಣಿ ಅರ್ಜಿಗಳ ಶುಲ್ಕ ಸೇರಿ ಒಟ್ಟು 6.26 ಲಕ್ಷ ರೂ.ಗಳನ್ನು ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಸರ್ಕಾರದ ನಿಗದಿತ ಖಾತೆಗಳಿಗೆ ಜಮಾ ಮಾಡಿಲ್ಲ. ರೈತರು, ಸಾರ್ವಜನಿಕರು ಸರ್ಕಾರಕ್ಕೆ ಸಲ್ಲಿಸಿದ್ದ ಸರ್ಕಾರಿ ಹಣವನ್ನು ಉಪತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಿಗರು ಸ್ವಂತಕ್ಕೆ ಬಳಸಿಕೊಂಡಿರುವುದು ಕಂಡು ಬಂದಿದೆ.
ಕರ್ತವ್ಯ ಲೋಪ: ಜೊತೆಗೆ ಶಾಸನ ಬದ್ಧ ಶುಲ್ಕಗಳ ಸ್ವೀಕೃತಿಗೆ ಸಂಬಂಧಪಟ್ಟ ಇರಸಾಲು ವಹಿಗಳನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡದೇ ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿದೆ. ಹೀಗಾಗಿ ಸರ್ಕಾರಿ ಹಣ ದುರುಪಯೋಗದ ಮತ್ತು ಕರ್ತವ್ಯ ಲೋಪವೆಸಗಿರುವ ಕುರಿತು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ನೋಟಿಸ್ ಜಾರಿ ಮಾಡಿ ಒಂದು ವಾರದೊಳಗೆ ಲಿಖೀತ ಸಮಜಾಯಿಸಿ ನೀಡಬೇಕು, ತಪ್ಪಿದಲ್ಲಿ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪವೆಸಗಿರುವ ನಿಮ್ಮ ವಿರುದ್ಧ ನಿಯಮಾನುಸಾರ ಶೀಘ್ರದಲ್ಲೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ಪ್ರದೇಶಿಕ ಆಯುಕ್ತರ ಕಚೇರಿಯಿಂದ ನೋಟಿಸ್ ಬಂದಿದೆ. ಆ ರೀತಿ ಏನೂ ಆಗಿಲ್ಲ. ರಶೀದಿ ನಿರ್ವಹಣೆ ಕೊರತೆಯಿಂದಾಗಿ ತಪ್ಪಾಗಿದೆ. ನನಗೆ ದರಖಾಸ್ತು ಮತ್ತು ಚುನಾವಣೆ ಶಿರಸ್ತೇದಾರ್ ಆಗಿ ಎರಡು ಜವಾಬ್ದಾರಿ ನೀಡಿರುವುದರಿಂದ ಅಲ್ಲಿ ಹೋಗಿ ಗಮನಿಸಲು ಆಗಿಲ್ಲ. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗೆ ಸ್ಟೇಟ್‌ಮೆಂಟ್ ಕೇಳಿ ಪತ್ರ ಬರೆದಿದ್ದೇನೆ.
-ಎಲ್.ಎಸ್.ಮಾದೇಶ್, ಉಪತಹಶೀಲ್ದಾರ್