ಮಂಗಳೂರು: ರಾಜ್ಯದ ಮಾಜೀ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ನಿಗೂಢ ನಾಪತ್ತೆಗೆ ಸಂಬಂಧಿಸಿದಂತೆ ಉದಯವಾಣಿಗೆ ಎಕ್ಸ್ ಕ್ಲೂಸಿವ್ ಮಾಹಿತಿಯೊಂದು ಲಭಿಸಿದೆ.
ಈ ಭಾಗದ ಮೀನುಗಾರರೊಬ್ಬರು
‘ಉದಯವಾಣಿ’ ಪ್ರತಿನಿಧಿಗೆ ನೀಡಿರುವ ಈ ಎಕ್ಸ್ ಕ್ಲೂಸಿವ್ ವಿಡಿಯೋ ಮಾಹಿತಿಗೂ ಸಿದ್ದಾರ್ಥ್ ಅವರ ನಿಗೂಢ ನಾಪತ್ತೆಗೂ ಏನಾದರೂ ಸಂಬಂಧವಿದೆಯೇ..? ಹಾಗಾದರೆ ಬನ್ನಿ ಆ ಮೀನುಗಾರರು ಹೆಳಿದ ಆ ನಿಗೂಢ ವಿಷಯವಾದ್ರೂ ಏನು? ಇಲ್ಲಿದೆ ಮಾಹಿತಿ…
ಅವರ ಹೆಸರು ಸೈಮನ್ ಡಿಸೋಜಾ, ಉಲ್ಲಾಳ ಭಾಗದ ನಿವಾಸಿ. ಮೀನುಗಾರಿಕೆ ಇವರ ವೃತ್ತಿ. ಸೈಮನ್ ಅವರು ಎಂದಿನಂತೆ ಸೋಮವಾರ ಸಾಯಂಕಾಲ ಮೀನು ಹಿಡಿಯಲೆಂದು ನೇತ್ರಾವತಿ ನದಿಯಲ್ಲಿ ಬಲೆ ಹಾಕುತ್ತಿದ್ದ ಸಂದರ್ಭದಲ್ಲಿ ಸುಮಾರು 7 ಗಂಟೆಯ ಹೊತ್ತಿಗೆ ಏನೋ ಒಂದು ಸೇತುವೆ ಮೇಲಿನಿಂದ ಬಿದ್ದ ಹಾಗೆ ಸೈಮನ್ ಅವರಿಗೆ ಕಾಣಿಸುತ್ತದೆ.
ಅವರೇ ಹೆಳುವಂತೆ ಸೇತುವೆಯ ಆರನೇ ನಂಬರ್ ಪಿಲ್ಲರ್ ಹತ್ತಿರ ಇವರು ಮೀನು ಹಿಡಿಯುತ್ತಿದ್ದರು. ಮೇಲಿನಿಂದ ಬೀಳುವುದು ಇವರಿಗೆ ಕಾಣಿಸಿದ್ದು ಎಂಟನೇ ಕಂಬದ ಹತ್ತಿರ. ಸೇತುವೆ ಮೇಲಿನಿಂದ ಯಾರೋ ನದಿಗೆ ಹಾರಿದ್ದಾರೆ ಎಂದು ಸೈಮನ್ ಅವರಿಗೆ ತಕ್ಷಣವೇ ತಿಳಿಯುತ್ತದೆ. ಕೂಡಲೇ ತಮ್ಮ ದೋಣಿಯನ್ನು ಸೈಮನ್ ಅವರು ಎಂಟನೇ ಪಿಲ್ಲರ್ ಕಡೆಗೆ ಚಲಾಯಿಸುತ್ತಾರೆ. ಆದರೆ ಅಷ್ಟು ಹೊತ್ತಿಗಾಗಲೇ ನೀರಿಗೆ ಹಾರಿದ್ದ ಆ ವ್ಯಕ್ತಿ ಮುಳುಗಲಾರಂಭಿಸಿದ್ದರು. ಮತ್ತು ಸೈಮನ್ ಅವರು ಅಲ್ಲಿಗೆ ತಲುಪುವಷ್ಟರಲ್ಲಿ ಆ ಆಕೃತಿ ನೀರಿನ ಆಳಕ್ಕೆ ಮುಳುಗಿಯಾಗಿತ್ತು, ಹಾಗಾಗಿ ನಾನು ಅಸಹಾಯಕನಾದೆ ಎಂದು ಸೈಮನ್ ಅವರು ಬೇಸರದಿಂದ ನುಡಿಯುತ್ತಾರೆ.
ಆದರೂ ಸೈಮನ್ ಅವರು ಆ ವ್ಯಕ್ತಿಯನ್ನು ರಕ್ಷಿಸಲೇಬೇಕೆಂಬ ಹಠದಿಂದ ಆ ಭಾಗದಲ್ಲಿ ಹುಡುಕಾಡಲಾರಂಭಿಸುತ್ತಾರೆ ಮತ್ತು ಅದೇ ಸಂದರ್ಭದಲ್ಲಿ ಆ ಕಡೆಗೆ ಬರುತ್ತಿದ್ದ ಇನ್ನೊಂದು ದೋಣಿಯಲ್ಲಿದ್ದವರೂ ಸಹ ಸೈಮನ್ ಅವರೊಂದಿಗೆ ಹುಡುಕಾಟದಲ್ಲಿ ಜೊತೆಯಾಗುತ್ತಾರೆ. ಆದರೆ ಈ ಭಾಗದಲ್ಲಿ ನದಿ ಬಹಳಷ್ಟು ಆಳವಾಗಿರುವುದರಿಂದ ಸೇತುವೆ ಮೇಲಿನಿಂದ ಹಾರಿದ ‘ಆ’ ವ್ಯಕ್ತಿ ನದಿಯ ಆಳಕ್ಕೆ ಮುಳುಗಿಯಾಗಿತ್ತು.
ಈ ಹಿಂದೆಯೂ ಸಹ ಸೈಮನ್ ಅವರು ನದಿಗೆ ಹಾರಿದ ಹಲವರನ್ನು ರಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಪೊಲೀಸ್ ಅಧಿಕಾರಿ ಮತ್ತು ಒಬ್ಬಾಕೆ ಯುವತಿಯೂ ಸೇರಿದ್ದಾರೆ. ಆದರೆ ಈ ಪ್ರಕರಣದಲ್ಲಿ ತಾನು ಅಸಹಾಯಕನಾದೆ ಎಂದು ಸೈಮನ್ ಹೆಳುವಾಗ ಅವರಲ್ಲಿ ಖೇದವಿತ್ತು.
ಹಾಗಾದರೆ ಸೋಮವಾರ ರಾತ್ರಿ 7 ಗಂಟೆಯ ಸುಮಾರಿಗೆ ಸೇತುವೆ ಮೇಲಿನಿಂದ ನದಿಗೆ ಜಿಗಿದ ‘ಆ’ ವ್ಯಕ್ತಿ ಯಾರು? ಹಾಗಾದರೆ ಸೇತುವೆಯಿಂದ ಜಿಗಿದ ಆ ವ್ಯಕ್ತಿ ಸಿದ್ದಾರ್ಥ್ ಅವರೇನಾ? ಎಂಬ ಸಂಶಯ ಇದೀಗ ಬಲವಾಗಿ ವ್ಯಕ್ತವಾಗುತ್ತಿದೆ.