ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಆದರ್ಶ ಗ್ರಾಮದ ಅಭಿವೃದ್ಧಿ ಕಾಮಗಾರಿಗಳನ್ನು ಮೈಸೂರು ವಿಶ್ವವಿದ್ಯಾಲಯದ ತಂಡ ಪರಿಶೀಲಿಸಿ ವರದಿ ಸಂಗ್ರಹಿಸಿತು. ಆದರ್ಶ ಗ್ರಾಮದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಸೋನಲ್ ಅವರು ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರೊಂದಿಗೆ ಅಭಿವೃದ್ಧಿ ಕುರಿತು ಸುಧೀರ್ಘ ಚರ್ಚೆ ನಡೆಸಿದರು.
ಗ್ರಾಮದ ಶೈಕ್ಷಣಿಕ ಪ್ರಗತಿ, ಸ್ಮಾಟ್‌ಕ್ಲಾಸ್, ಶಾಲೆ ಬಿಟ್ಟವರ ಸಂಖ್ಯೆ, ಶಾಲೆ ಬಿಡಲು ಕಾರಣಗಳು ಯಾವವು ಎಂಬುದರ ಕುರಿತು ಮಾಹಿತಿ ಪಡೆದರು. ಅಂಗನವಾಡಿ ಮಕ್ಕಳ ದೈಹಿಕ ಕ್ಷಮತೆ, ಪೌಷ್ಟಿಕಾಂಶ, ಹೆರಿಗೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಪೂರಕವಾಗಿದೆಯೇ ಎಂದು ಪ್ರಶ್ನಿಸಿದರು.
ಗ್ರಾಪಂ ಸದಸ್ಯ ಗೌರಜ್ಜನವರ ಗಿರೀಶ್ ಪ್ರತಿಕ್ರಿಯಿಸಿ, ಅಂಗನವಾಡಿ ಮಕ್ಕಳು ಉತ್ತಮ ಆರೋಗ್ಯ ಹೊಂದಿದ್ದಾರೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಕೇವಲ 12 ಇದ್ದು, ಪುನಃ ಶಾಲೆಗೆ ಕರೆತರಲು ಶಿಕ್ಷಕರು ಹಾಗೂ ಸಮುದಾಯದೊಂದಿಗೆ ಪ್ರಯತ್ನಿಸುತ್ತಿದ್ದೇವೆ. 7ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು 8ನೇ ತರಗತಿಗೆ ದಾಖಲಾತಿ ಹೊಂದಿಲ್ಲ. ಮೂಲ ಕಾರಣ ಗುರುತಿಸಿ ಪೋಷಕರ ಮನವೊಲಿಸಿ ಶಾಲೆಗೆ ಕರೆತರಲಾಗುವುದು ಎಂದರು.
ಆದರ್ಶ ಗ್ರಾಮದ ಅಭಿವೃದ್ಧಿ ಅಷ್ಟಕ್ಕಷ್ಟೇ. 131 ಕಾಮಗಾರಿಗಳ ಪಟ್ಟಿಯಲ್ಲಿ 89 ಕಾಮಗಾರಿಗಳಿಗೆ ಈವರೆಗೂ ಅನುದಾನವಿಲ್ಲ. ಆದರ್ಶ ಗ್ರಾಮ ಯೋಜನೆಯಡಿ 7 ಪರಿವರ್ತಕ, 38 ಕಂಬ, ಗ್ರಂಥಾಲಯಕ್ಕೆ ಜೆರಾಕ್ಸ್ ಮಿಷನ್ ಕೊಟ್ಟಿದ್ದು ಬಿಟ್ರೆ ಪ್ರಮುಖವಾಗಿ ಏನೂ ನೀಡಿಲ್ಲ ಎಂದು ತಿಳಿಸಿದರು.
ವೀಕ್ಷಣೆ: ತಂಡ ನಿಗದಿತ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಜನಪ್ರತಿನಿಧಿಗಳು, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಧೂಮಪಾನ, ಮಧ್ಯಪಾನ, ಶಿಕ್ಷಣದ ಸ್ಥಿತಿಗತಿ ಕುರಿತು ಚರ್ಚಿಸಿದರು. ತಂಡ ಟೆಂಡರ್ ಹಂತದಲ್ಲಿರುವ ಕಾಮಗಾರಿಗಳನ್ನು ಕೂಡಲೇ ಅನುಷ್ಠಾನಗೊಳಿಸಿ ಎಂದು ಇಒ ಅವರಿಗೆ ಸೂಚಿಸಿತು. ವಸತಿ ಫಲಾನುಭವಿಗಳ ಮನೆ, ನರೇಗಾ ಯೋಜನೆಯ ಕಾಮಗಾರಿಗಳು, ಸಿಸಿರಸ್ತೆ, ಚರಂಡಿ, ದೋಬಿಘಾಟ್, ಗ್ರಂಥಾಲಯ, ಹಾಲು ಶಿಥೀಲಿಕರಣ ಘಟಕ ವೀಕ್ಷಿಸಿದರು.
ತಂಡದ ಸಹ ಪ್ರಾಧ್ಯಾಪಕ ನಿತಿನ್ ಅರಾತ್ ಮಾತನಾಡಿ, ತಂಬ್ರಹಳ್ಳಿ ಆದರ್ಶ ಗ್ರಾಮದ ಸಂಪೂರ್ಣ ಮಾಹಿತಿಯನ್ನು
ಯಥಾವತ್ತಾಗಿ ಕೇಂದ್ರಕ್ಕೆ ಸಲ್ಲಿಸಲಾಗುವುದು. ರಾಜ್ಯ ಸರಕಾರ ಎರಡು ಆದರ್ಶ ಗ್ರಾಮಗಳ ವರದಿ ನೀಡುವಂತೆ ಸೂಚಿಸಿದನ್ವಯ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಇದೇವೇಳೆ ತಂಡ ಬಾಚಿಗೊಂಡನಹಳ್ಳಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಅಲ್ಲಿಯ ಜನರನ್ನು ತಂಬ್ರಹಳ್ಳಿ ಆದರ್ಶ ಗ್ರಾಮವಾಗಿದೆಯೇ ಎಂದು ಪ್ರಶ್ನಿಸಿದಾಗ, ಬಾಚಿಗೊಂಡನಹಳ್ಳಿ ಗ್ರಾಮಸ್ಥರು ಆ ಗ್ರಾಮಕ್ಕಿಂತ ನಮ್ಮ ಗ್ರಾಮದಲ್ಲಿಯೇ ಹೆಚ್ಚು ಅಭಿವೃದ್ಧಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಪನಿರ್ದೇಶಕ ಮುಕ್ಕಣ್ಣ ಕರಿಗಾರ್, ಇಒ ಬಿ. ಮಲ್ಲಾನಾಯ್ಕ, ಪಿಡಿಒ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ಗಂಗಾವತಿ ಗೌಸಿಯಾಬೇಗಂ, ಉಪಾಧ್ಯಕ್ಷೆ ಬಾಳಿಹಳ್ಳಿ ರತ್ನಮ್ಮ ಚನ್ನಪ್ಪ, ಗ್ರಾಪಂ ಸದಸ್ಯರಾದ ಮಡಿವಾಳ ಕೊಟ್ರೇಶ, ಸುಕುರ್‌ಸಾಬ್, ಶ್ರೀನಿವಾಸ, ತಳವಾರ ಹನುಮಂತಮ್ಮ, ಸೊಬಟಿ ಹರೀಶ್, ಕೊರವರ ಯಮನೂರಪ್ಪ, ಕೆ. ದೇವಮ್ಮ, ಕಾರ್ಯದರ್ಶಿ ಶರಣಪ್ಪ, ಕಂಪ್ಯೂಟರ್ ಅಪರೇಟರ್ ಕೊಟ್ರೇಶ ಕಾಶಿನಾಯ್ಕರ ಇತರರು ಉಪಸ್ಥಿತರಿದ್ದರು.