ಕೋಲ್ಕತಾ: ಶಿಕ್ಷಣದ ಪ್ರಮುಖ ಘಟ್ಟವಾದ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಸರ್ವ ತಯಾರಿ ನಡೆಸಿ, ಕೊನೇ ಗಳಿಗೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ವಿದ್ಯಾರ್ಥಿಯ ಪರಿಸ್ಥಿತಿ ಹೇಗಿರುತ್ತದೆ ಊಹಿಸಿ!
ಅಂಥದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯೊಬ್ಬಳ ಪಾಲಿಗೆ ಟ್ರಾಫಿಕ್ ಪೊಲೀಸರೊಬ್ಬರು ಆಪದ್ಬಾಂಧವರಾಗಿ, ಗ್ರೀನ್ ಕಾರಿಡಾರ್ ಮೂಲಕ ಆಕೆ ಪರೀಕ್ಷೆ ಬರೆಯಲು ನೆರವಾಗಿದ್ದಾರೆ.
ಹೌದು, 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ಪಶ್ಚಿಮ ಬಂಗಾಲದ ವಿದ್ಯಾರ್ಥಿನಿಯೊಬ್ಬಳು ಶ್ಯಾಮ ಬಜಾರ್‌ನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತಲುಪುವ ಬದಲು ಗೊಂದಲಕ್ಕೊಳಗಾಗಿ ಹೌರಾ ಬ್ರಿಡ್ಜ್ ಪ್ರದೇಶದ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾಳೆ.
ಪರೀಕ್ಷೆ ಆರಂಭವಾಗಲು 10 ನಿಮಿಷ ಮಾತ್ರ ಬಾಕಿ ಇದ್ದು, ಈ ವೇಳೆ ಆಕೆಗೆ ದಿಕ್ಕು ತೋಚದಂತಾಗಿ ಅಳತೊಡಗಿದ್ದಾಳೆ. ಅದೇ ಪ್ರದೇಶದಲ್ಲಿ ಗಸ್ತು ಡ್ನೂಟಿಯಲ್ಲಿದ್ದ ಟ್ರಾಫಿಕ್ ಪೊಲೀಸ್ ಸೋವಿಕ್ ಚಕ್ರವರ್ತಿ, ವಿದ್ಯಾರ್ಥಿನಿಯನ್ನು ಗಮನಿಸಿ, ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿ, ಗ್ರೀನ್ ಕಾರಿಡಾರ್‌ನ ಮೂಲಕ ತಮ್ಮ ಕಾರಿನಲ್ಲಿಯೇ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ.