ಚಿತ್ರದುರ್ಗ: ಮೈಸೂರು ಸಿಲ್ಕ್ ಸೀರೆಗಳೆಂದರೆ ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಗುಣಮಟ್ಟ, ಆಕರ್ಷಣೆಗೆ ಹೆಸರುವಾಸಿಯಾಗಿವೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ° ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಗುರುವಾರದಿಂದ ಆರಂಭಗೊಂಡ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು. ಮಹಿಳೆಯರು ಅತ್ಯಂತ ಇಷ್ಟ ಪಡುವ ಆಧುನಿಕ ವಿನ್ಯಾಸಗಳಿವೆ. ಸಾಂಪ್ರದಾಯಕವಾಗಿದ್ದು ನವೀನ ವಿನ್ಯಾಸಗಳಿಂದ ಗ್ರಾಹಕರನ್ನು ಅದರಲ್ಲೂ ಮಹಿಳಾ ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದರು. ಮೈಸೂರು ರೇಷ್ಮೆ ಸೀರೆಗಳು ಕೇವಲ ನೋಡಲು ಇಷ್ಟವಾಗುವುದಷ್ಟೇ ಅಲ್ಲ, ರೈತರು ಮತ್ತು ಕಾರ್ಮಿಕರ ಶ್ರಮ ಸಂಸ್ಕೃತಿ ಈ ಸೀರೆಗಳಲ್ಲಿ ಸೇರಿಕೊಂಡಿದೆ. ಕೆಎಸ್‌ಐಸಿ ಲಾಭ-ನಷ್ಟಗಳ ನಡುವೆ ಹೆಸರನ್ನು ಉಳಿಸಿಕೊಂಡಿದೆ. ಸರ್ಕಾರದ ಈ ಉದ್ಯಮವನ್ನು ಮೈಸೂರು ಮಹಾರಾಜರು ಆರಂಭಿಸಿದ್ದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.
ಫೆ. 8ರಿಂದ 13ರವರೆಗೆ ಅಂದರೆ ಆರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಕ್ರೇಪ್ ಡಿಸೈನ್ ಜಾರ್ಜೆಟ್, ಸಾದಾ ಮುದ್ರಿತ, ಟೈ ಹಾಗೂ ಸ್ಕಾರ್ಫ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಎಲ್ಲ ಉತ್ಪನ್ನಗಳ ಮೇಲೆ ಶೇ. 25ರವರೆಗೆ ರಿಯಾಯತಿ ನೀಡಲಾಗುತ್ತಿದೆ. ಸರ್ಕಾರಿ ನೌಕರರು ಹಾಗೂ ಸಿಬ್ಬಂದಿಗೆ ಸಾಲ ಸೌಲಭ್ಯವಿದ್ದು ಕಂತುಗಳ ರೂಪದಲ್ಲಿ ಸಾಲ ತೀರುವಳಿ ಮಾಡುವ ಅವಕಾಶವಿದೆ ಎಂದರು.
ಕೆಎಸ್‌ಐಸಿ ಮಾರುಕಟ್ಟೆ ಅಧಿಕಾರಿ ಎಸ್. ಭಾನುಪ್ರಕಾಶ್ ಮಾತನಾಡಿ, ಮೈಸೂರ್ ಸಿಲ್ಕ್ ಸೀರೆಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ. ಗುಣಮಟ್ಟ, ವಿನ್ಯಾಸ, ಆಧುನಿಕ ಮಾದರಿಗಳಿಗೆ ಈ ಐಡೆಂಟಿಟಿ ದೊರೆತಿದೆ. ಭಾರತದಲ್ಲಿ ದೊರೆಯುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ಪ್ರಾಕೃತಿಕ ರೇಷ್ಮೆ ಗೂಡಿನಿಂದ ಹೊರಹೊಮ್ಮಿದೆ. ಸೀರೆಗಳ ಉತ್ಪಾದನೆಗೆ ಉಪಯೋಗಿಸುವ ಜರಿ ಪರಿಶುದ್ಧ ಚಿನ್ನವಾಗಿದೆ. ಶೇ. 0.65 ಚಿನ್ನ ಮತ್ತು ಶೇ. 65ರಷ್ಟು ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿ ಕಾರಿಯವರು ಹೊಸ ವಿನ್ಯಾಸದ ರೇಷ್ಮೆ ಸೀರೆ ಬಿಡುಗಡೆ ಮಾಡಿದರು ಮತ್ತು ನೀರು ಹೀರಿಕೊಳ್ಳದ ರೇಷ್ಮೆ ಸೀರೆಗಳನ್ನು ಪರಿಶೀಲಿಸಿದರು.