Advertisement
ಇತ್ತೀಚೆಗೆ ಮದುವೆಗೆ ಸಂಬಂಧಿಸಿದ ಅನೇಕ ಸುದ್ದಿಗಳನ್ನೋದಿದೆ. ನಿಶ್ಚಿತಾರ್ಥವಾಗಿದ್ದು ಮದುವೆಗೆ ಎರಡು ವಾರ ಇದೆ ಎನ್ನುವಾಗ ವರ ಭಾವಿ ಸಂಬಂಧವನ್ನು ಮುರಿದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ! (ಆಕೆಯ ವಯಸ್ಸು ಮೂವತ್ತೆರಡು ಆಗಿದ್ದು ಬಹುಶಃ ಮುಂದೆ ಮದುವೆ ಆಗುವ ಅವಕಾಶಗಳು ಕಡಿಮೆಯಾಗಿದ್ದವು). ಇನ್ನೊಬ್ಬ ಗಂಡ ತನ್ನ ಗರ್ಭಿಣಿ ಹೆಂಡತಿಯನ್ನು ಆಕೆ ವರದಕ್ಷಿಣೆ ವಿಷಯದಲ್ಲಿ ಜಗಳವಾಡಿದ್ದಕ್ಕೆ ಆಕೆ ಮಲಗಿದ್ದಾಗ ಉಸಿರುಗಟ್ಟಿಸಿ ಕೊಂದನಂತೆ. ಮದುವೆ, ಮದುವೆಗೆ ಸಂಬಂಧಿಸಿದ ಕಲಹಗಳು… ಹೀಗೆ ಅದೊಂದು ದಾಂಪತ್ಯ ಗೀತೆಯೋ ವಿಷಾದ ಯೋಗವೋ ಎನ್ನುವವರೆಗೆ, ಮದುವೆ ಎನ್ನುವ ಸಾಮಾಜಿಕ ವ್ಯವಸ್ಥೆ ಅತಿ ಸಂಕೀರ್ಣವಾಗಿದೆ.
“ಮದುವೆ’ ಯಾಕೆ ಹೀಗೆ ಮಾನವರ ಜೀವನವನ್ನು ಹಿಂಡಿ ಹಿಪ್ಪೆಮಾಡಬೇಕು? ಮದುವೆಯೊಂದೇ ಜೀವನದ ಗುರಿಯೇ? ಮದುವೆಯಾಗದೆ ಜೊತೆಗಿರುವ “ಲಿವ್ ಇನ್ ರಿಲೇಶನ್ ಶಿಪ್’ಗಳು ಪರವಾಗಿಲ್ಲವೇ? ಅಸಲಿಗೆ ಮದುವೆಯಾಗದಿದ್ದರೆ ಏನಂತೆ?- ಹೀಗೆ ಅನೇಕ ಪ್ರಶ್ನೆಗಳನ್ನು ಜನರು ತಮಾಷೆಯಾಗಿಯೂ ಗಂಭೀರವಾಗಿಯೂ ಕೇಳುತ್ತಲೇ ಇರುತ್ತಾರೆ. ಹಾಗೆ ನೋಡುವುದಿದ್ದರೆ “ಮದುವೆ’ ಎನ್ನುವ ಸಾಮಾಜಿಕ ಪದ್ಧತಿಯ ಜೊತೆ ಜೊತೆಗೇ ಅದರಲ್ಲಿನ ನ್ಯೂನತೆಗಳೂ ಬೆಳೆಯುತ್ತ ಬಂದಿರಬೇಕು. ನಮ್ಮ ಮಂತ್ರಗಳನ್ನು ಕೇಳಿದರೆ, “ಗೃಹಿಣೀ ಗೃಹಮುಚ್ಯತೇ’, “ಕಾಯೇನ ವಾಚಾ ಮನಸಾ ನಾತಿ ಚರಾಮಿ’ ಎಂದೆಲ್ಲ ಮದುವೆಯ ನಂತರದ ಜೀವನದ ಬದಲಾವಣೆಗಳ ಬಗ್ಗೆ, ಕರ್ತವ್ಯಗಳನ್ನು ನಿಭಾಯಿಸಬೇಕಾದ ಬಗ್ಗೆ, ಮದುವೆಯಾಚೆಗಿನ ಆಕರ್ಷಣೆಗಳ ಬಗ್ಗೆ, ಋಷಿ ಮುನಿಗಳು ಸಹಿತ ಯೋಚಿಸಿದ್ದರು ಎನ್ನುವುದು ಸತ್ಯ. ವಿವಾಹ ವ್ಯವಸ್ಥೆ ಎನ್ನುವುದು ತಲೆಮಾರುಗಳ ನಂತರವೂ, ಶತಮಾನಗಳ ನಂತರವೂ ಜಗತ್ತಿನಲ್ಲಿ ಉಳಿದಿರುವುದು ಅದರ ಶಕ್ತಿಗೆ, ನಿರಂತರತೆಗೆ ಪೂರಕವಾದ ಅಂಶಗಳಿಗೆ ಸಾಕ್ಷಿ. ಅದೇ ರೀತಿ ಹೆಣ್ಣು ಗಂಡಿನ ನಿರೀಕ್ಷೆಗಳಲ್ಲೂ ಅನೇಕ ಬದಲಾವಣೆಗಳಾಗುತ್ತಿವೆ. ಒಂದು ಕಾಲದಲ್ಲಿ “ಹುಡುಗಿ ನೋಡುವ ‘ ಶಾಸ್ತ್ರದ ಹೆಸರಿನಲ್ಲಿ ಒಂದು ಹೆಣ್ಣಿನ ಆತ್ಮಸ್ಥೈರ್ಯವನ್ನೇ ಉಡುಗಿಸುವ ಘಟನೆಗಳು ನಡೆಯುತ್ತಿದ್ದವು. ಧಂಡಿಯಾಗಿ ಬಂದ ಜನ ಉಪ್ಪಿಟ್ಟು ಫಲಾಹಾರ ಎಂದೆಲ್ಲ ಸ್ವೀಕರಿಸಿ ಆಕೆಯನ್ನು ಬಣ್ಣ ಕಪ್ಪು$ಎಂದೋ, ಚೆನ್ನಾಗಿಲ್ಲ ಎಂದೋ ನಿರಾಕರಿಸಿ ಹೋಗುವುದು, ಹೆತ್ತವರು ಹೇಗಾದರೂ ತಮ್ಮ ಮಗಳ ಮದುವೆಯಾಗಲೆಂದು ಹಂಬಲಿಸುವುದು ಸಾಮಾನ್ಯವಾಗಿತ್ತು. ಈಗಲೂ ಕೆಲವು ಕಡೆ ಹಾಗೆಯೇ ಇದೆ. ಒಂದೇ ಕುಟುಂಬದಲ್ಲಿ ಸಾಲಾಗಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಮದುವೆಯಾಗದಿದ್ದರೆ ಆ ತಂದೆ-ತಾಯಿಯರ ಅಳಲು ಹೇಳತೀರದು. ಇಷ್ಟಕ್ಕೂ ಮದುವೆಯಾಗದಿದ್ದರೆ, ಮದುವೆ ಆಗಿಯೂ ಯಾವುದಾದರೂ ಕಾರಣಕ್ಕೆ ಜೊತೆ ಇರದಿದ್ದರೆ ಅದೇನೂ ಮಹಾಪರಾಧ ಅಲ್ಲ. ಆದರೆ ನಮ್ಮ ಸಮಾಜ ಇನ್ನೂ “ಪರ್ಸನಲ್ ಸ್ಪೇಸ್’ ಕೊಡುವ ಬಗ್ಗೆ ಉದಾರವಾಗಿ ಇಲ್ಲ. ಯಾರೋ ಮದುವೆಯಾದರೂ ಆಗದೇ ಇದ್ದರೂ ನಮಗೆ ಅದರಿಂದ ವೈಯಕ್ತಿಕ ನಷ್ಟ ಏನೂ ಇಲ್ಲದಿದ್ದರೂ ಅವರಿವರ ಜೀವನದ ಬಗ್ಗೆ, ಅವರ ಬಾಳಿನಲ್ಲಿ ಇರಬಹುದಾದ ರಹಸ್ಯಗಳ ಬಗ್ಗೆ ಅದೇನೋ ಕುತೂಹಲ.
Related Articles
ಇದೀಗ ಗ್ಲೋಬಲೈಸ್ಡ್ ಯುಗ. ಹಾಗೆಂದು ಹಳೆಯ ತಲೆಮಾರಿನ ಪ್ರಭಾವ ಗಾಢವಾಗಿಯೇ ಇದೆ. ಹಾಗೆ ನೋಡಿದರೆ ಹಳೆಯ ಕಂದಾಚಾರಗಳು, ಕಟ್ಟಳೆಗಳು ಹೊಸ ರೂಪದಲ್ಲಿ ಡಿಜಿಟಲೈಸ್ಡ್ ರೂಪದಲ್ಲಿ ಕಾಣ ಸಿಗುತ್ತವೆ. ಜಾತಿಸಂಘಗಳು, ವಾಟ್ಸಾಪ್ ಗ್ರೂಪ್‌ಗ್ಳು, ಫೇಸ್‌ಬುಕ್ ನಲ್ಲಿನ ಕಲಹಗಳು… ಹೀಗೆ.
Advertisement
ಮದುವೆ, ಮನೆ, ಫ್ಯಾಮಿಲಿ ಒಂದೇ ಯುನಿಟ್ ಆಗಿರುವುದರಿಂದ ಇಲ್ಲಿ ಹೆಚ್ಚು ಕಡಿಮೆ ಮೂರು ತಲೆಮಾರುಗಳು ಪರಸ್ಪರ ಸಂವಹನದಲ್ಲಿರುತ್ತವೆ. ಹೀಗಾಗಿಯೇ ಇದೊಂದು ತಲೆಮಾರುಗಳ ಸಂಘರ್ಷ ಕೂಡ. ಮದುವೆಯಂತಹ ವಿಚಾರದಲ್ಲಿ ತಂದೆ-ತಾಯಿಯರ ಪಾತ್ರವೇ ಭಾರತೀಯ ಕೌಟುಂಬಿಕ ಪದ್ಧತಿಯಲ್ಲಿ ಹಿರಿದು. ಪ್ರೀತಿಯನ್ನು ಕೊಂದುಕೊಂಡು ತಂದೆತಾಯಿಗೋಸ್ಕರ ಬೇರೆ ಮದುವೆಯಾಗುವವರು, ಪ್ರೀತಿಸಿ ಮದುವೆಯಾಗಿ ಆ ಮೇಲೆ ಸರಿ ಬಾರದೆ ದೂರವಾಗುವವರು, ಮದುವೆಯೆಂಬ ವ್ಯೂಹದಲ್ಲಿ ಸಿಲುಕಿ ಸಂಕಟವೇ ಸಂಭ್ರಮವೇ ಎಂದರಿಯದೆ ಗೊಂದಲದಲ್ಲಿರುವವರು… ಹೀಗೆ ಅದರ ಆಯಾಮಗಳು ಹಲವಾರು.
ಇನ್ನು ಮದುವೆಯೆನ್ನುವುದು ಕುಟುಂಬಗಳ ನಡುವೆ ಆಗಿರುವುದರಿಂದ ಅದೊಂದು ಸಾಮಾಜಿಕ ಒಳಗೊಳ್ಳುವಿಕೆ ಕೂಡ. ದೂರದೂರುಗಳಲ್ಲಿ ಕೆಲಸ ಮಾಡುವ ದಂಪತಿಗಳ ವೀಕೆಂಡ್ ಮ್ಯಾರೇಜ್‌ಗಳು, ವಿದೇಶದಲ್ಲಿರುವ ಗಂಡನಿಗೋಸ್ಕರ ಹಂಬಲಿಸುತ್ತ ಊರಿನಲ್ಲಿ ಕಾಯುವವರು, ಕೂಡು ಕುಟುಂಬಗಳಲ್ಲಿ ಅರ್ಥವಾಗದ ಚಡಪಡಿಕೆಗಳಲ್ಲಿ ನರಳುವವರು, ಮದುವೆ ಮುರಿದ ನೋವಿನಿಂದ ರೆಕ್ಕೆ ಮುರಿದ ಹಕ್ಕಿಯಂತಿರುವವರು, ಮೋಸದ ಮದುವೆಗಳಲ್ಲಿ ಬಲಿಪಶುವಾಗಿರುವವರು, ಅನುಕೂಲಕ್ಕೋಸ್ಕರ ಮದುವೆಯಾಗಿ ಆ ಮೇಲೆ ಪರಿತಪಿಸುವವರು, ಒಂದೇ ಸೂರಿನಡಿಯಲ್ಲಿದ್ದರೂ ಮನಸು ಒಂದಾಗದವರು… ಹೀಗೆ ಅದೊಂದು ಹಾಡು ಪಾಡು. (ಎಲ್ಲ ದಾಂಪತ್ಯಗಳು ಕೆ. ಎಸ್. ನ. ಅವರ “ಮೈಸೂರು ಮಲ್ಲಿಗೆ’ಯಂತೆ ಸುಮಧುರವೇನಲ್ಲ) .ಮನೆಯ ಒಳ ಹೊರಗೆ ದುಡಿಯುವ ಹೆಣ್ಣು , ಅವಳು ಮದುವೆ ಆಗಿರಲಿ ಇಲ್ಲದಿರಲಿ ಅಡುಗೆಯ ಜವಾಬ್ದಾರಿ ವಹಿಸುತ್ತಿರಬೇಕು. ಅದು ಒಂದು ರೀತಿಯ ಡಬಲ್ ಶಿಫ‚…r. ಇನ್ನು ಮದುವೆಯಾದ ಕೆಲ ಕಾಲದ ನಂತರದಲ್ಲಿ ಶುರುವಾಗುವ ತಾಯ್ತನದ ನಿರೀಕ್ಷೆ. ತಾಯಿಯಾಗುವ ಹಂಬಲ ಸ್ವತಹ ಆಕೆಗೆ ಇಲ್ಲದಿದ್ದಲ್ಲಿ ಒಂದು ಎಳೆ ಬೊಮ್ಮಟೆ ಕೂಡ ತನ್ನ ತಾಯಿಯ ಕೆರೀರ್‌ನ ಹತ್ತು ವರ್ಷಗಳನ್ನು ನಿರಾಯಾಸವಾಗಿ ಮಂಕಾಗಿಸಬಹುದು.
ತಾಯ್ತನ, ಮನೆವಾರ್ತೆಗಳು ಎಷ್ಟು ಸುಂದರವೋ ಅಷ್ಟೇ ಮಿತಿಯುಳ್ಳವುಗಳೂ ಆಗಿವೆ. ಈ ಕಾರಣಕ್ಕಾಗಿಯೇ ಸಫಲ ದಾಂಪತ್ಯಕ್ಕೆ ಪರಸ್ಪರ ಸಹಕಾರ, ಅನ್ಯೋನ್ಯ ಮುಖ್ಯ. ಮಹಿಳೆಯರ ಸಬಲೀಕರಣ ಎಂದರೆ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ಅಂತೆಯೇ ಭಾವನಾತ್ಮಕವಾಗಿಯೂ ಸದೃಢರಾಗುವಲ್ಲಿ, ಹಾಗೆಯೇ ಒಂದು ಸಮತೋಲನದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುವುದು.ಅಲ್ಲವೇ? – ಜಯಶ್ರೀ ಬಿ.