Advertisement

ಜೋಡುರಸ್ತೆಗೆ ಮೈಸೂರು ಮಾದರಿ ಸೊಬಗು!

11:07 AM Apr 25, 2022 | Team Udayavani |

ಕಾರ್ಕಳ: ಕಾರ್ಕಳ ನಗರ ಅಭಿವೃದ್ಧಿ ಜತೆಗೆ ಹೊರವಲಯದ ಜೋಡುರಸ್ತೆ ಪೇಟೆ ಉಪನಗರವಾಗಿ ಬೆಳೆಯುತ್ತಿದೆ. ಪೇಟೆಯನ್ನು 6.5 ಕೋ.ರೂ. ವೆಚ್ಚದಲ್ಲಿ ಮೈಸೂರು ಪೇಟೆ ಮಾದರಿಯಲ್ಲಿ ಆಧುನಿಕ ಸ್ಪರ್ಶ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ.

Advertisement

ಕಾರ್ಕಳ ನಗರ ಪ್ರವೇಶಿಸುವ ದ್ವಾರ ಜೋಡುರಸ್ತೆ ನಗರದ ಹೆಬ್ಟಾಗಿಲು ಕೂಡ ಆಗಿದೆ. ಉಡುಪಿ-ಕಾರ್ಕಳ- ಧರ್ಮಸ್ಥಳ ಹೆದ್ದಾರಿ ಹಾದು ಹೋಗಿದ್ದು, ವಿವಿಧ ನಗರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಹಾದು ಹೋಗಿರುವ ಜಂಕ್ಷನ್‌ ಇದಾಗಿದೆ. ಹೆಬ್ರಿ ಭಾಗದಿಂದ ಆಗಮಿಸುವ ಪ್ರಮುಖ ರಸ್ತೆ ಜೋಡುರಸ್ತೆ ಜಂಕ್ಷನ್‌ನಲ್ಲಿ ಸೇರುತ್ತಿದೆ. ಜನಸಂಚಾರ, ವಾಹನ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಿರುವ ಪೇಟೆಯಿದು.

ಜೋಡುರಸ್ತೆಯನ್ನು ಬೃಹತ್‌ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ತೊಡಲಾಗಿದ್ದು, ಅಭಿವೃದ್ಧಿ ಕಾಮಗಾರಿ ಗಳಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ 6.5 ಕೋ.ರೂ. ಅನುದಾನ ಬಿಡುಗಡೆಗೊಂಡಿದೆ. ಇದರ ಭೂಮಿ ಪೂಜೆ ಎ. 25ರಂದು ನಡೆಯಿದೆ. ಪೇಟೆ ಆಧುನಿಕ ಸ್ಪರ್ಶ ಪಡೆದುಕೊಳ್ಳಲಿದೆ.

ಇಂಟರ್‌ಲಾಕ್‌ ಅಳವಡಿಕೆ

ಪೇಟೆಗೆ ಮೈಸೂರಿನ ರಸ್ತೆಗಳ ಸ್ಪರ್ಶ ಸಿಗಲಿದೆ. 600 ಮೀ. ದೂರದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆ ಗೇರಿಸಲಾಗುತ್ತಿದೆ. ರಸ್ತೆಯ ಎರಡೂ ಬದಿ ಪಾದಚಾರಿ ಗಳಿಗೆ ತೆರಳಲು ಅನುಕೂಲವಾಗುವಂತೆ ಇಂಟರ್‌ಲಾಕ್‌ ಅಳವಡಿಸಿ, ಫ‌ುಟ್‌ಪಾತ್‌ ನಿರ್ಮಿಸಲಾಗುತ್ತಿದೆ.

Advertisement

ಶೀಘ್ರ ಟೆಂಡರ್‌ ಪ್ರಕ್ರಿಯೆ

ಜೋಡುರಸ್ತೆ ಪೇಟೆಯ ರಸ್ತೆ ಬದಿಗಳಲ್ಲಿ ಕಣ್ಮನ ಸೆಳೆ ಯುವ ವಿದ್ಯುತ್‌ ದೀಪ ಅಳವಡಿಸಲಾಗುತ್ತಿದೆ. ಮೈಸೂರಿನ ನಗರಗಳಲ್ಲಿ ಸಂಚರಿಸಿದಾಗ ಕಣ್ಣಿಗೆ ಗೋಚರಿಸುವಂತ ದೀಪ ಗಳು ಇಲ್ಲಿಯೂ ಸಾಲುದ್ದ ಇರಲಿದೆ. ಮೈಸೂರು ಪೇಟೆ ನೆನಪಿಸುವ ರೀತಿಯಲ್ಲಿ ವಿವಿಧ ಬಣ್ಣಗಳನ್ನು ಸೂಸುವ ದೀಪ ಗಳು ಹಗಲು ರಾತ್ರಿ ಇಲ್ಲಿ ಕಂಗೊಳಿಸಲಿವೆ. ದೀಪಗಳ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ಶೀಘ್ರ ನಡೆಯಲಿದೆ.

ರಸ್ತೆ ಮಧ್ಯೆ ಗಾರ್ಡನ್‌ ನಿರ್ಮಾಣ

ನಗರದ ಅಂದ ಹೆಚ್ಚಿಸಲು ರಸ್ತೆ ಮಧ್ಯೆ ಹಸುರಿನ ಗಾರ್ಡನ್‌ ನಿರ್ಮಿಸಲಾಗುತ್ತಿದೆ. ಅಲ್ಲಿ ಕಿರು ಕಾರಂಜಿ, ವಿವಿಧ ಸಣ್ಣ ಗಾತ್ರದ ಕಲಾಕೃತಿಗಳು, ಫ‌ಲಪುಷ್ಪ, ಸಸ್ಯರಾಶಿ ಹೋಲುವ ಪಾರಂಪರಿಕ, ಅಲಂಕಾರಿಕ ಗಿಡಗಳನ್ನು ಬೆಳೆಸಲಾಗುತ್ತಿದೆ. ಹಚ್ಚ ಹಸುರಿನ ಗಾರ್ಡನ್‌ ಪ್ರಯಾಣಿಕರನ್ನು ಪೇಟೆಗೆ ಆಗಮಿಸುವ ಸಾರ್ವಜನಿಕರನ್ನು, ಪ್ರಯಾಣಿಕರನ್ನು ತಮ್ಮ ಕಡೆಗೆ ಸೆಳೆಯಲಿದೆ. ಸುಸಜ್ಜಿತ ಕಾಂಕ್ರಿಟ್‌ ಚರಂಡಿಯೂ ನಿರ್ಮಾಣಗೊಳ್ಳಲಿದೆ.

ಮಲೆನಾಡು ಭಾಗದಿಂದ ಕರಾವಳಿ ಪ್ರವೇಶಿಸಿ, ಅನೇಕ ಪ್ರೇಕ್ಷಣಿಯ ಸ್ಥಳ, ಪ್ರವಾಸಿ ಮಂದಿರಗಳನ್ನು ಸಂದರ್ಶಿಸುವವರು ಈ ಮಾರ್ಗವಾಗಿ ತೆರಳುತ್ತಾರೆ. ಉಡುಪಿ, ಹೆಬ್ರಿ ಭಾಗಕ್ಕೆ ರಸ್ತೆ ವಿಭಜಿಸುವಲ್ಲಿ ಪೇಟೆ ಇದ್ದು, ಅವಿಭಜಿತ ಉಭಯ ಜಿಲ್ಲೆಗೆ ಪ್ರಯಾಣ ಬೆಳೆಸುವ ದಾರಿ ಮಧ್ಯೆ ಪರಿಸರ ಪ್ರಯಾಣಿಕರಿಗೆ ಹಿತವನ್ನು ನೀಡಲಿದೆ.

ಜೋಡುರಸ್ತೆಯ ಚಿತ್ರಣ ಈಗ ಬದಲಾಗಿದೆ. ಸಣ್ಣಪುಟ್ಟ ಅಂಗಡಿ, ಹೊಟೇಲುಗಳಷ್ಟೆ ಇದ್ದ ಪರಿಸರದಲ್ಲಿ ಗಗನಚುಂಬಿ ಕಟ್ಟಡಗಳು ಒಂದೊಂದಾಗಿ ತಲೆಎತ್ತಿವೆ.ಎತ್ತುತ್ತಿವೆ. ಪ್ರೈಮ್‌ ಮಾಲ್‌, ಪೂರ್ಣಿಮಾ ಸಿಲ್ಕ್ಸ್ ವಿಸ್ತರಿತ ಮಳಿಗೆ ಸಹಿತ ಅನೇಕವು ಇತ್ತೀಚಿನ ದಿನಗಳಲ್ಲಿ ಕಾರ್ಯಾರಂಭಿಸಿವೆ. ಇನ್ನಷ್ಟು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.

ಹಂತ ಹಂತವಾಗಿ ಅಭಿವೃದ್ಧಿ

ಕಾರ್ಕಳ ತಾಲೂಕು ಐತಿಹಾಸಿಕ, ಪ್ರೇಕ್ಷಣಿಯ ಸ್ಥಳವಾಗಿ ಗುರುತಿಸಿಕೊಂಡಿದೆ. ತಾ| ಅನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸಿ ಪ್ರವಾಸಿ ಕ್ಷೇತ್ರವಾಗಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ತಾಲೂಕಿನೊಳಗಿನ ಆಸುಪಾಸಿನ ಸ್ಥಳಗಳು ಕೂಡ ಪೂರಕವಾಗಿ ಅಭಿವೃದ್ಧಿಗೊಂಡು ಮೇಲ್ದರ್ಜೆಗೇರುತ್ತಿವೆ. ಜೋಡುರಸ್ತೆ ಈಗ ಮೊದಲ ಆದ್ಯತೆಯಾಗಿ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ.

ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ

ಕಾರ್ಕಳ ತನ್ನ ಗರ್ಭದಲ್ಲಿ ಬಹಳಷ್ಟು ಇತಿಹಾಸ ಇರಿಸಿಕೊಂಡಿದೆ. ಹಲವು ಪ್ರೇಕ್ಷಣೀಯ ಸ್ಥಳಗಳು ತಾಲೂಕಿನಲ್ಲಿವೆ. ಇದನ್ನು ಹಲವು ಆಯಾಮಗಳಲ್ಲಿ ಯೋಚನೆ, ಯೋಜನೆಗಳಿಂದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇತಿಹಾಸದ ಪ್ರಜ್ಞೆ ಬೆಳೆಸುವುದು, ಸಾಂಪ್ರಾದಾಯಿಕತೆ, ಆರ್ಥಿಕತೆ ಬಲ ಪಡಿಸುವುದು ಎಲ್ಲವನ್ನು ಒಳಗೊಂಡ ಅಭಿವೃದ್ಧಿಯ ಇಚ್ಛೆಯ ಅನುಸಾರ ದೂರದೃಷ್ಟಿತ್ವದ ಅಭಿವೃದ್ಧಿಯಿಂದ ಇದನ್ನೆಲ್ಲ ಮಾಡಲಾಗುತ್ತಿದೆ. -ವಿ. ಸುನಿಲ್‌ ಕುಮಾರ್‌, ಇಂಧನ ಸಚಿವರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next