Advertisement

ಹ್ಯಾಟ್ರಿಕ್‌ ತಪ್ಪಿಸಿಕೊಂಡ ಮೈಸೂರಿಗೆ ಈ ಬಾರಿ ಸಿಗುತ್ತಾ ಸ್ವಚ್ಛ ನಗರ

12:52 PM Mar 14, 2019 | |

ಮೈಸೂರು: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಸತತ ಎರಡು ಬಾರಿ ದೇಶದ ನಂಬರ್‌ ಒನ್‌ ಸ್ವಚ್ಛ ನಗರಿ ಎಂಬ ಕೀರ್ತಿಗೆ ಭಾಜನವಾಗಿ ಹ್ಯಾಟ್ರಿಕ್‌ ತಪ್ಪಿಸಿಕೊಂಡಿದ್ದ ಮೈಸೂರು, ಈ ಬಾರಿ ಮೊದಲ ಮೂರು ಸ್ಥಾನದೊಳಗೆ ನಾಮ ನಿರ್ದೇಶನಗೊಂಡಿರುವುದು ಪ್ರಶಸ್ತಿ ಆಸೆಯ ಗರಿಗೆದರಿಸಿದೆ.

Advertisement

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2018-19ನೇ ಸಾಲಿನಲ್ಲಿ ದೇಶದ 4041 ನಗರಗಳಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳಲ್ಲಿ ಮೈಸೂರು ನಗರವು ಪ್ರಥಮ ಮಧ್ಯಮ ಸ್ವಚ್ಛತಾ ನಗರವೆಂಬ ಗರಿಮೆ ಪಡೆದುಕೊಂಡಿತ್ತು. ಅದಕ್ಕೂ ಹಿಂದೆ 2015-16 ಮತ್ತು 2016-17ನೇ ಸಾಲಿನಲ್ಲಿ ದೇಶದ ಪ್ರಥಮ ಸ್ವಚ್ಛ ನಗರವೆಂಬ ಕೀರ್ತಿ ಸಂಪಾದಿಸಿದ್ದ ಮೈಸೂರು 2017-18ರಲ್ಲಿ ಹ್ಯಾಟ್ರಿಕ್‌ ಸಾಧಿಸುವಲ್ಲಿ ಎಡವಿ, ದೇಶದ ಐದನೇ ಸ್ವಚ್ಛ ನಗರ ಎಂಬ ಕೀರ್ತಿ ಸಂಪಾದಿಸಿತ್ತು. 

ಮೈಸೂರು ನಗರವು ಬಯಲು ಶೌಚಮುಕ್ತ ನಗರವೆಂದು ಘೋಷಣೆಯಾಗಿದ್ದು, ಸ್ಟಾರ್‌ ರೇಟಿಂಗ್‌ಗಾಗಿ ಒಂದು ಸಾವಿರ ಅಂಕಗಳಿಗೆ ಓಡಿಎಫ್ ಮಾಹಿತಿ ಸಿದ್ಧಪಡಿಸಿ ಅಪ್‌ಲೋಡ್‌ ಮಾಡಲಾಗಿತ್ತು. ಇದರ ಜೊತೆಗೆ ಸಾರ್ವಜನಿಕರ ಅಭಿಪ್ರಾಯಕ್ಕೆ 1250 ಅಂಕಗಳನ್ನು ನಿಗದಿಪಡಿಸಿದ್ದು, ಸಾರ್ವಜನಿಕರು ಸ್ವಚ್ಛತಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ 850 ಅಂಕ ಪಡೆದುಕೊಳ್ಳಬಹುದು.

ಇನ್ನುಳಿದ 400 ಅಂಕಗಳನ್ನು ಟೋಲ್‌ಫ್ರೀ ಸಂಖ್ಯೆ 1969ಗೆ ಕರೆ ಮಾಡುವ ಮೂಲಕ ಸ್ವಚ್ಛ ಸರ್ವೇಕ್ಷಣ್‌ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಪಡೆದುಕೊಳ್ಳಬೇಕಿತ್ತು. ಇದಕ್ಕಾಗಿ ಮಹಾ ನಗರಪಾಲಿಕೆ ವತಿಯಿಂದ ಶಾಲಾ-ಕಾಲೇಜು, ಸಂಘಸಂಸ್ಥೆಗಳ ಸಹಕಾರದಿಂದ ವಿಶೇಷ ಅಭಿಯಾನ ನಡೆಸಿ ಪೂರ್ಣ ಪ್ರಮಾಣದ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. 

ಜೊತೆಗೆ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಣೆಗಾಗಿ ಪ್ರತ್ಯೇಕ ಬುಟ್ಟಿ ಇರಿಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಮನೆ ಮನೆಗಳಿಗೆ ಬರುವ ಪೌರ ಕಾರ್ಮಿಕರಿಗೆ ನೇರವಾಗಿ ಬೇರ್ಪಡಿಸಿದ ಕಸವನ್ನು ಕೊಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲೂ ಪಾಲಿಕೆ ಕೊಂಚಮಟ್ಟಿನ ಯಶಸ್ಸು ಕಂಡಿದೆ. ಇದರ ಫ‌ಲವಾಗಿ 2019ರ ಜನವರಿ 1 ರಿಂದ 31ವರೆಗೆ ನಡೆದ ಈ ಸಾಲಿನ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಕರ್ನಾಟಕಕ್ಕೆ ದೊರೆತ ಆರು ಪ್ರಶಸ್ತಿಗಳಲ್ಲಿ 5 ಮೈಸೂರು ಜಿಲ್ಲೆಗೇ ಸಂದಿರುವುದು ವಿಶೇಷ.

Advertisement

ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳನ್ನು ಎರಡು ವಿಭಾಗ ಮಾಡಿ ಸಮೀಕ್ಷೆ ನಡೆಯುತ್ತದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹದಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದದ್ದು ಮೈಸೂರು ನಗರಪಾಲಿಕೆಯ ಹ್ಯಾಟ್ರಿಕ್‌ ಕನಸು ಭಗ್ನಗೊಳಿಸಿತ್ತು. ಈ ಬಾರಿ ಕೇವಲ ಹತ್ತು ದಿನಗಳಲ್ಲಿ ಮೈಸೂರಿನ ಒಂದು ಲಕ್ಷ ಜನತೆ ಸ್ವಚ್ಛತಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸ್ವಚ್ಛ ಸರ್ವೇಕ್ಷಣ್‌ ಅಭಿಯಾನಕ್ಕೆ ಪ್ರತಿಕ್ರಿಯಿಸಿರುವುದು ಪ್ರಶಸ್ತಿಯ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಇಂದು ಪ್ರಶಸ್ತಿ ಪ್ರದಾನ: ಸ್ವಚ್ಛ ಸರ್ವೇಕ್ಷಣ್‌ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದ್ದು, ಮೊದಲ ಮೂರು ಸ್ಥಾನದೊಳಗೆ ಮೈಸೂರು ಮಹಾ ನಗರಪಾಲಿಕೆ ಇದೆ ಎಂಬ ಮಾಹಿತಿ ನೀಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆಯೇ ಫ‌ಲಿತಾಂಶ ಪ್ರಕಟವಾಗಲಿದೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ಐವರಿಗೆ ಮಾತ್ರ ಅವಕಾಶ ಇರುವುದರಿಂದ ಮಂಗಳವಾರ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಉಪ ಮೇಯರ್‌ ಶಫೀ ಅಹಮದ್‌, ಆಯುಕ್ತರಾದ ಶಿಲ್ಪಾ ನಾಗ್‌, ಹಿಂದಿನ ಆಯುಕ್ತರು, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ದೆಹಲಿಗೆ ತೆರಳಿದರು.

ದೇಶದ ಸ್ವಚ್ಛ ನಗರಿ ಪ್ರಶಸ್ತಿಗೆ ಮೊದಲ ಮೂರು ಸ್ಥಾನಗಳ ಪೈಕಿ ಮೈಸೂರು ಮಹಾ ನಗರಪಾಲಿಕೆಯ ಹೆಸರೂ ನಾಮ ನಿರ್ದೇಶನ ಆಗಿರುವುದು ಖುಷಿ ತಂದಿದೆ. ಕೇಂದ್ರ ಸರ್ಕಾರದ ಆಹ್ವಾನದ ಮೇರೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದೇವೆ.
-ಪುಷ್ಪಲತಾ ಜಗನ್ನಾಥ್‌, ಮೇಯರ್‌

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next