Advertisement

ಮೈಸೂರಿಗೆ ಪ್ರಧಾನಿ ಮೋದಿಯಿಂದ ಹೆಚ್ಚಿನ ಅನುದಾನ

01:14 PM Feb 18, 2018 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಹಿಂದಿನ ಯಾವ ಪ್ರಧಾನಿಯೂ ನೀಡಿರದಷ್ಟು ಅನುದಾನವನ್ನು ನೀಡಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು. ಸೋಮವಾರ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಬಿಜೆಪಿ ಸಮಾವೇಶ ಯಶಸ್ವಿಯಾಗಲಿ ಎಂದು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ವತಿಯಿಂದ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಮೈಸೂರಿಗೆ ಬರುತ್ತಿರುವ ನರೇಂದ್ರ ಮೋದಿ ಅವರು, ಮೈಸೂರು-ಬೆಂಗಳೂರು ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಏಳು ಸಾವಿರ ಕೋಟಿ ಕೊಟ್ಟಿದ್ದು, ಅದರ ಶಂಕುಸ್ಥಾಪನೆ ಮಾಡಲಿದ್ದಾರೆ. ನಾಗನಹಳ್ಳಿ ಬಳಿ 789 ಕೋಟಿ ರೂ.ವೆಚ್ಚದಲ್ಲಿ ರೈಲ್ವೇ ಟರ್ಮಿನಲ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ, ಮೇಲ್ದರ್ಜೆಗೇರಿಸಿರುವ ಇಎಸ್‌ಐ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಮೈಸೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸಾಕಷ್ಟು ಹಣ ನೀಡಿರುವುದು ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ಪ್ಯಾರೀಸ್‌ ಮಾಡುತ್ತೇನೆ ಎಂದು ಹೇಳಿಲ್ಲ: ಮೋದಿ ಅವರು ಮೈಸೂರನ್ನು ಪ್ಯಾರೀಸ್‌ ಮಾಡುತ್ತೇನೆ ಎಂದು ಹೇಳಿಲ್ಲ. ವಿಶ್ವದಲ್ಲಿ ಪ್ಯಾರೀಸ್‌ಗೆ ಹೆಚ್ಚು ಮಂದಿ ಪ್ರವಾಸಿಗರು ಹೋಗುತ್ತಾರೆ. ಅದೇ ರೀತಿ ಮೈಸೂರಿಗೂ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ. ಹೀಗಾಗಿ ಪ್ಯಾರೀಸ್‌ ಮಟ್ಟಕ್ಕೆ ಮೈಸೂರನ್ನು ಬೆಳೆಸಬೇಕು ಎಂದಿದ್ದರು ಎಂದು ಹೇಳಿದರು.

ಶಿಷ್ಟಾಚಾರ ಉಲ್ಲಂ ಸುವಲ್ಲಿ ಸಿಎಂ ಅನುಭವಿ: ಶಿಷ್ಟಾಚಾರ ಉಲ್ಲಂಘನೆ ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಅನುಭವಿ ಬೇರೆ ಯಾರೂ ಇಲ್ಲ. ನಗರದ 41.5 ಕಿ.ಮೀ ವರ್ತುಲ ರಸ್ತೆಗೆ ಕೇಂದ್ರ ಸರ್ಕಾರ ಶೇ.80ರಷ್ಟು ಅನುದಾನ ನೀಡಿದ್ದರೂ ಲೋಕಸಭಾ ಸದಸ್ಯನಾದ ನನ್ನನ್ನಾಗಲಿ ಅಥವಾ ಕೇಂದ್ರ ಸಚಿವರನ್ನಾಗಲಿ ಆಹ್ವಾನಿಸದೆ, ಕದ್ದುಮುಚ್ಚಿ ಕಾರ್ಯಕ್ರಮ ಮಾಡಿಕೊಂಡರು.

ಏಕಲವ್ಯ ನಗರದ 1400 ಮನೆ ಮತ್ತು ಕೆ.ಆರ್‌.ಕ್ಷೇತ್ರ ವ್ಯಾಪ್ತಿಯಲ್ಲಿ 1300 ಮನೆ ನಿರ್ಮಾಣದ ಗುದ್ದಲಿ ಪೂಜೆಗೂ ನಮಗೆ ಆಹ್ವಾನ ನೀಡಲಿಲ್ಲ. ಕೇಂದ್ರದ ಯೋಜನೆ ಹೈಜಾಕ್‌ ಮಾಡಿದ ಅವರಿಗೆ ಶಿಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.

Advertisement

ಸಿಎಂ ಮನೆ ಮುಂದೆ ಪ್ರತಿಭಟಿಸಲಿ: ಕೊಡಗು ಮೂಲಕ ಹಾದುಹೋಗುವ ಮೈಸೂರು-ತಲಚೇರಿ ರೈಲ್ವೇ ಯೋಜನೆ ವಿರೋಧಿಸುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಂ ಅವರ ಮನೆಯ ಮುಂದೆ ಪ್ರತಿಭಟಿಸಬೇಕು. ಈ ರೈಲ್ವೇ ಯೋಜನೆಗೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಿ ಒಪ್ಪಿಗೆ ನೀಡಿರುವುದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ.

ಹೀಗಾಗಿ ರೈಲ್ವೇ ಯೋಜನೆ ವಿರೋಧಿಸಿ ಸಿದ್ದರಾಮಯ್ಯ ಅವರ ಮನೆ ಎದುರು ಪ್ರತಿಭಟಿಸಲಿ ಎಂದು ಹೇಳಿದರು. ಮಾಜಿ ಸಚಿವ ವಿ.ಸೋಮಣ್ಣ, ಬಿಜೆಪಿ ಮುಖಂಡರಾದ ಶ್ರೀವತ್ಸ, ಎಸ್‌.ಎಂ.ಶಿವಪ್ರಕಾಶ್‌, ನಗರ ಯುವ ಮೋರ್ಚಾ ಅಧ್ಯಕ್ಷ ಗೋಕುಲ್‌ ಗೋವರ್ಧನ್‌ ಮುಂತಾದವರು ಹಾಜರಿದ್ದರು.

ಪ್ರಧಾನಿ ನರೇಂದ್ರಮೋದಿ ಅವರು ವಿದೇಶಕ್ಕೆ ಹೋದರೂ ರಾತ್ರಿ ಇಡೀ ವಿಮಾನದಲ್ಲಿ ಒಂದು ದೇಶದಿಂದ ಮತ್ತೂಂದು ದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಸಾಮಾನ್ಯವಾಗಿ ಎಲ್ಲಿಯೂ ಉಳಿಯುವುದಿಲ್ಲ. ಆದರೆ, ಮೈಸೂರಿನಲ್ಲಿ ಎರಡನೇ ಬಾರಿಗೆ ಉಳಿಯುತ್ತಿರುವುದು ಮೈಸೂರಿನ ಬಗೆಗೆ ಅವರಿಗಿರುವ ವಿಶೇಷ ಪ್ರೀತಿಯನ್ನು ತೋರಿಸುತ್ತದೆ.
-ಪ್ರತಾಪ್‌ ಸಿಂಹ, ಸಂಸದ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ವಿಷಯದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಇಷ್ಟಕ್ಕೂ ಆಹ್ವಾನ ಪತ್ರಿಕೆಯೇ ನಮಗೆ ದೊರಕಿಲ್ಲ. ಇತ್ತೀಚೆಗೆ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ ಸಿದ್ದರಾಮಯ್ಯ ಅವರು ಪ್ರಧಾನಿ ಅವರನ್ನು ಸ್ವಾಗತಿಸಲು ಯಾರನ್ನು ಕಳುಹಿಸಿದ್ದರು ಎಂಬುದು ಗೊತ್ತಿದೆ.
-ವಿ.ಸೋಮಣ್ಣ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next