ಬೆಂಗಳೂರಿನಲ್ಲಿ ಶನಿವಾರ ರಾತ್ರಿಯೂ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡವು. ವೃಷಭಾವತಿ, ಕೋರಮಂಗಲ ರಾಜಕಾಲುವೆಗಳು ತುಂಬಿ ಹರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಜನರು ಸಮಸ್ಯೆಗೆ ಒಳಗಾದರು. ಕೆಂಗೇರಿ ಸಮೀಪದ ದುಬಾಸಿಪಾಳ್ಯ ಹಾಗೂ ಕೊಮ್ಮಘಟ್ಟ ಕೆರೆಗಳ ಕೋಡಿ ಒಡೆದು ನೀರು ಹೊರ ಬಂದ ಹಿನ್ನೆಲೆಯಲ್ಲಿ ಆ ಭಾಗದ ರಸ್ತೆಗಳೆಲ್ಲ ಕೆರೆಗಳಂತಾಗಿದ್ದವು.
ಮೈಸೂರು ಕಡೆಯಿಂದ ನಗರಕ್ಕೆ ಬರುತ್ತಿದ್ದ ಬಸ್ ಅರ್ಧ ಮುಳುಗಿದ್ದರಿಂದ 36ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿ ಸಾವು-ಬದುಕಿನ ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ ಭಾರೀ ವರ್ಷಧಾರೆಯಾಗಿದ್ದು, ಒಂದೇ ರಾತ್ರಿ 300 ಮಿ.ಮೀ.ಮಳೆಯಾದ ವರದಿಯಾಗಿದೆ. ಇದರಿಂದಾಗಿ ಶಿಂಷಾ ನದಿ ತುಂಬಿ ಹರಿಯುತ್ತಿದೆ. ಇದೇ ವೇಳೆ, ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 104 ಅಡಿಗೆ ಏರಿದೆ.
ಜಲಾಶಯಕ್ಕೆ 12,751 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 6,179 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ಶನಿವಾರ ರಾತ್ರಿ ಬಿದ್ದ ಧಾರಾಕಾರ ಮಳೆಗೆ ಹಲವು ಮನೆಗಳು ಕುಸಿದಿವೆ. 18 ವರ್ಷಗಳ ಬಳಿಕ ದೀಪಾಂಬುದಿ ಹಾಗೂ ಮುತ್ತುರಾಯನ ಕೆರೆಗಳು ತುಂಬಿವೆ.
ಭಾರೀ ಮಳೆಯಾಗುವ ಸಾಧ್ಯತೆ
ಇದೇ ವೇಳೆ, ಶಿರಸಿ, ಚಿಕ್ಕಮಗಳೂರು, ಉಡುಪಿ ಸೇರಿ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಹಲವೆಡೆಯೂ ಮಳೆಯಾಗಿದೆ. ಈ ಮಧ್ಯೆ, ಇನ್ನೆರಡು ದಿನ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲೆಡೆ, ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಐದು ಮಕ್ಕಳು ಸೇರಿ 8 ಮಂದಿ ನೀರು ಪಾಲು
ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಜಲಸಂಬಂಧಿ ದುರ್ಘಟನೆಗಳಲ್ಲಿ 8 ಮಂದಿ ನೀರು ಪಾಲಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಣನಕೆರೆ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನೀರಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
Advertisement
ಗ್ರಾಮದ ರಾಹುಲ್ (16) ಮತ್ತು ದರ್ಶನ್ (15) ನೀರು ಪಾಲಾದವರು. ಭಾನುವಾರ ಬೆಳಗ್ಗೆ 11.30ರ ವೇಳೆ ಗಣೇಶ ವಿಸರ್ಜನೆ ಪೂರೈಸಿ, ಕೆರೆಯಲ್ಲಿ ಈಜಿಕೊಂಡು ಹಿಂದಿರುಗುವಾಗ ಆಯತಪ್ಪಿ ನೀರಿನಲ್ಲಿ ಮುಳುಗಿದರು. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬಿಗಿನೇಹಳ್ಳಿಯಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ಬಾಲಕರಿಬ್ಬರು ನೀರು ಪಾಲಾಗಿದ್ದಾರೆ.
10ನೇ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಬೀದರ ಹೊರವಲಯದ ಚಿಕಪೇಟ ಹತ್ತಿರದ ಬಾವಿಯೊಂದರಲ್ಲಿ ಭಾನುವಾರ ಈಜಾಡಲು ಹೋದ ಮಾಮನಕೇರಿ ಗ್ರಾಮದ ಸಂಗಮೇಶ ರವಿ ಶಿರನ್ನವರ (20) ಎಂಬುವರು ನೀರಿಗೆ ಬಿದ್ದು ಅಸುನೀಗಿದ್ದಾರೆ. ಘಟನೆ ವೀಕ್ಷಿಸಲು ಹೋದ ಚಿಕಪೇಟದ ಜಾನ್ಸನ್ ಮೇತ್ರೆ (35) ಎಂಬುವರು ಕೂಡ ಕಾಲು ಜಾರಿ ಬಾವಿಗೆ ಬಿದ್ದು ಕೊನೆಯುಸಿರೆಳೆದರು. ಈ ಮಧ್ಯೆ, ಮಂಡ್ಯ ಜಿಲ್ಲೆ ಕಿಕ್ಕೇರಿಯ ಅಮಾನಿಕೆರೆಯಲ್ಲಿ ಈಜಲು ಹೋದ ಸೊಳ್ಳೇಪುರ ಗ್ರಾಮದ ಚೇತನ್ (17) ಎಂಬಾತ ನೀರು ಪಾಲಾಗಿದ್ದಾನೆ. ಸ್ನೇಹಿತರ ಜೊತೆ ಈಜಾಡಲು ಕೆರೆಗೆ ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
Related Articles
Advertisement
ಸಿಡಿಲು ಬಡಿದು ವ್ಯಕ್ತಿ ಸಾವುಮೂಡಲಗಿ: ಬೆಳಗಾವಿ ಜಿಲ್ಲೆ ಮೂಡಲಗಿ ಸಮೀಪದ ವಡೇರಟ್ಟಿಯಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು
ನಾರಾಯಣ ಈರಪ್ಪ ಬಡಿಗೇರ (32) ಎಂಬುವರು ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ಹೊಲಕ್ಕೆ ಜಾನುವಾರುಗಳಿಗೆ ಮೇವು ತರಲು ಹೋಗಿದ್ದಾಗ ಅವಘಡ ಸಂಭವಿಸಿದೆ.