ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ನಗರದ ಅರಣ್ಯ ಭವನದ ಆವರಣದಲ್ಲಿ ಠಿಕಾಣಿ ಹೂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಇಂದು ಅರಮನೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಮಂಗಳವಾರ ಮಧ್ಯಾಹ್ನ ಅರಮನೆ ಮಂಡಳಿಯಿಂದ ಆನೆಗಳನ್ನು ಸಾಂಪ್ರದಾಯಿಕ ಪೂಜೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಧ್ಯಾಹ್ನ 12.01 ರಿಂದ 12.51 ರ ಅಭಿಜಿನ್ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅರಮನೆಗೆ ಅಗಮಿಸಿದ ಗಜಪಡೆಗೆ ಅರ್ಚಕ ಮೈಸೂರಿನ ಪ್ರಹ್ಲಾದ್ ರಾವ್ ವಿಶೇಷ ಪೂಜೆ ನೆರವೇರಿಸಿದರು. ಕ್ಯಾಪ್ಟನ್ ಅಭಿಮನ್ಯು, ಹೊಸ ಆನೆ ಕಂಜನ್, ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯ ಹಾಗೂ ಇತರೆ ಗಂಡಾನೆಗಳಾದ ಭೀಮ, ಗೋಪಿ, ಧನಂಜಯ, ಮಹೇಂದ್ರ ಆನೆಗಳಿಗೆ ಪಾದ ತೊಳೆದು, ಆನೆಗಳ ಪಾದದ ಬಳಿ ಕುಂಕುಮ, ಹರಿಸಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲ್ಲಿಸಿದರು. ಪೂಜೆಯ ನಂತರ ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ಕೆ. ಹರೀಶ್‌ಗೌಡ ಸೇರಿದಂತೆ ಜನಪ್ರತಿನಿಧಿಗಳು ಗಜಪಡೆಯ ಮೇಲೆ ಪುಷ್ಪವೃಷ್ಟಿಗೈಯ್ದರು.
ಕಲಾ ತಂಡಗಳ ಮೆರುಗು
ಗಜಪಡೆ ಅರಮನೆ ಪ್ರವೇಶ ಕಾರ್ಯಕ್ರಮಕ್ಕೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ದ್ವಾರದ ಬಳಿ ಸ್ವಾಗತಿಸಿದ ಬಳಿಕ ಪೂರ್ಣಕುಂಭ ಸ್ವಾಗತ, ಮಂಗಳವಾದ್ಯ, ನಾದಸ್ವರದೊಂದಿಗೆ ಅರಮನೆಯತ್ತ ಆನೆಗಳು ಹೆಜ್ಜೆ ಹಾಕಿದವು. ಗಜಪಡೆಗೆ ಅಶ್ವಾರೋಹಿ ಪಡೆ, ಪೊಲೀಸ್ ಬ್ಯಾಂಡ್, ಡೊಳ್ಳು ಕುಣಿತ, ಪಟ ಕುಣಿತ, ಗಾರುಡಿ ಗೊಂಬೆ ಸೇರಿದಂತೆ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಬಳಿಕ ಅರಮನೆ ಮುಂಭಾಗಕ್ಕೆ ತೆರಳಿದ ಆನೆಗಳಿಗೆ ಸಂಪ್ರದಾಯದಂತೆ ಅರಮನೆ ಮಂಡಳಿಯಿಂದ ಪೂಜೆ ಸಲ್ಲಿಸಲಾಯಿತು. ದಸರಾ ಮಹೋತ್ಸವದ ಚಟುವಟಿಕೆಯಲ್ಲಿ ತೊಡಗುವ ಅಧಿಕಾರಿಗಳಿಗೆ ತಾಂಬೂಲ ನೀಡಲಾಯಿತು. ಮಾವುತರು, ಕಾವಾಡಿಗಳಿಗೆ ದಿನನಿತ್ಯದ ಪದಾರ್ಥಗಳು ಸೇರಿ ಇನ್ನಿತರ ವಸ್ತುಗಳನ್ನು ಒಳಗೊಂಡ ಕಿಟ್‌ನ್ನು ಸಚಿವ ಎಚ್.ಸಿ.ಮಹದೇವಪ್ಪ ವಿತರಿಸಿದರು.
ಅರ್ಜುನ ಗೈರು: ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಅರಮನೆ ಪ್ರವೇಶ ಕಾರ್ಯಕ್ರಮದಲ್ಲಿ ಗೈರಾಗಿದ್ದು ಕಂಡುಬಂದಿತು. ಎಚ್.ಡಿ. ಕೋಟೆ ತಾಲೂಕಿನಲ್ಲಿ ಸೋಮವಾರ ಬಾಲಕನ ಮೇಲೆ ಹುಲಿ ದಾಳಿ ನಡೆಸಿ ಬಲಿಪಡೆದಿದ್ದು, ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆಗೆ ಇಳಿದಿದೆ. ಈ ಹಿನ್ನೆಲೆ ಕಾರ್ಯಾಚರಣೆಗೆ ಅರ್ಜುನ ಆನೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅರಮನೆ ಪ್ರವೇಶ ಕಾರ್ಯಕ್ರಮದಲ್ಲಿ ಗೈರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿ.ಪಂ ಸಿಇಒ ಗಾಯಿತ್ರಿ, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರ್, ನಗರ ಪೊಲೀಸ್ ಆಯುಕ್ತ ರಮೇಶ್.ಬಿ, ಎಸ್‌ಪಿ ಸೀಮಾ ಲಾಟ್ಕರ್, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ, ಡಿಸಿಪಿ ಸೌರಭ್ ಕುಮಾರ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅರಣ್ಯ ಇಲಾಖೆಯಿಂದ ಬೀಳ್ಕೊಡುಗೆ
ಅರಮನೆ ಪ್ರವೇಶ ಕಾರ್ಯಕ್ರಮಕ್ಕೂ ಮುನ್ನಾ ಎಲ್ಲಾ 08 ಆನೆಗಳಿಗೂ ಅರಣ್ಯ ಭವನದಲ್ಲಿ ಬೆಳಗ್ಗೆ 10 ರಿಂದ 10.30 ರ ನಡುವೆ ಅರಣ್ಯ ಭವನದಲ್ಲಿ ವಿಶೇಷ ಪೂಜೆ ನಡೆಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಮಂಗಳಾರತಿ ಮಾಡಿ ಆನೆಗಳನ್ನು ಬೀಳ್ಕೊಟ್ಟರು. ಬಳಿಕ ಆನೆಗಳು ಕಾಲ್ನಡಿಗೆಯಲ್ಲಿ ಅಶೋಕಪುರಂ ರಸ್ತೆ, ಬಲ್ಲಾಳ್ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ತಲುಪಿದವು.
ಆನೆ ನೋಡಿ ಸಂಭ್ರಮಿಸಿದ ಜನ: ಗಜಪಡೆ ಸಾಗುವ ಮಾರ್ಗದುದ್ದಕ್ಕೂ ಜನಜಂಗುಳಿ ಕಂಡುಬಂದಿದ್ದಲ್ಲದೇ ದೈತ್ಯಾಕಾರದ ಆನೆಗಳನ್ನು ಕಂಡು ಸಂಭ್ರಮಿಸಿದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆಗಿನ ಎಲ್ಲಾ ವಯೋಮಾನದವರು ಗಜಪಡೆಯನ್ನು ಕಣ್ತುಂಬಿಕೊಂಡರು. ಈ ವೇಳೆ ಆನೆಗಳಿಗೆ ಕಿರಿಕಿರಿಯಾಗದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಜತೆಗೆ ಆನೆಗಳು ಸಾಗುವ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ನೀಡಲಾಗಿತ್ತು.