ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ-275 ಅಗಲೀಕರಣ ಕಾಮಗಾರಿಗೆ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಭೂ ಮಾಲಿಕರು ಸಹಕಾರ ನೀಡಬೇಕು ಎಂದು ಕೋರಿದರು.
ಬೆಂಗಳೂರು-ಮಡಿಕೇರಿ ವಿಚಲಿತ (ಬೈಪಾಸ್) ರಸ್ತೆ ನಿರ್ಮಾಣಕ್ಕೆ ಸರ್ವೆ ನಡೆಸಲಾಗಿದ್ದು, ಯೋಜನೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯ ಸಾಧಕ-ಬಾಧಕದ ನಂತರ ಅಂದಾಜು ವೆಚ್ಚ ತಿಳಿಯಲಿದೆ. ಈ ಯೋಜನೆಯಿಂದ ಮೈಸೂರು-ಬಂಟ್ವಾಳ ಹೆದ್ದಾರಿ ಮೇಲಿನ ಒತ್ತಡ ತಗ್ಗಲಿದ್ದು, ಬೆಂಗಳೂರಿನಿಂದ ಪರ್ಯಾಯ ಮಾರ್ಗವಾಗಿ ಮಡಿಕೇರಿಗೆ ತೆರಳಲು ಸಹಕಾರಿಯಾಗಲಿದೆ ಎಂದರು.
ನರೇಗಾ ಯೋಜನೆಯಡಿ ಒಟ್ಟು 21 ಕಾಮಗಾರಿಗಳನ್ನು ಸೇರಿಸಿ ಹಳ್ಳಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಸ್ಥಳೀಯರು ಅನುದಾನ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಕಾರ್ಡ್‌ದಾರರಿಗೆ ಕಾಯಂ ಪರವಾನಗಿ ಕೊಡಿಸುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ದಲ್ಲಾಳಿಗಳ ಹಾವಳಿ ತಪ್ಪಿಸುವ ದಿಕ್ಕಿನಲ್ಲಿ ಈ ಪ್ರಯತ್ನ ನಡೆಸಿದ್ದು, ಕೆಲ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದಾಗಿ ಸಮಸ್ಯೆ ಉದ್ಬವವಾಗಿತ್ತು.
ಎಲ್ಲವನ್ನೂ ಪರಿಹರಿಸಿ ಕಾರ್ಡ್‌ದಾರರಿಗೆ ನೆರವಾಗುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕ ಎಚ್.ವಿಶ್ವನಾಥ್, ಎಪಿಎಂಸಿ ಉಪಾಧ್ಯಕ್ಷ ಪ್ರಸನ್ನಕುಮಾರ್, ತಂಬಾಕು ಮಂಡಳಿ ಸದಸ್ಯ ಕಿರಣ್ ಕುಮಾರ್, ತಾಪಂ ಸದಸ್ಯ ಕೆಂಗಯ್ಯ ಇತರರಿದ್ದರು.