ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ದೇಶವ್ಯಾಪಿ ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲೂ ಬ್ಯಾಂಕಿಂಗ್ ಸೇವೆ ಸ್ತಬ್ಧವಾಗಿತ್ತು.
ಬ್ಯಾಂಕ್ ನೌಕರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ನಗರದ ಅಶೋಕ ರಸ್ತೆಯಲ್ಲಿರುವ ಎಸ್‌ಬಿಎಂ ಪ್ರಧಾನ ಶಾಖೆ ಮುಂಭಾಗ ಸಮಾವೇಶಗೊಂಡ ಬ್ಯಾಂಕ್ ನೌಕರರು, ಎಸ್‌ಬಿಐ ಜೊತೆ ಸಹವರ್ತಿ ಬ್ಯಾಂಕ್‌ಗಳ ವಿಲೀನಕ್ಕೆ ವಿರೋಧ, ನೋಟು ಅಪನಗದೀಕರಣ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಗ್ರಾಚ್ಯುಟಿ ಮೇಲಿನ ತೆರಿಗೆ ವಾಪಸ್ ಪಡೆಯುವುದು, ಐಡಿಬಿಐ ಬ್ಯಾಂಕ್‌ಗಳ ವೇತನವನ್ನು ಪರಿಷ್ಕರಿಸುವುದು, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಜತೆ ಸಹವರ್ತಿ ಬ್ಯಾಂಕ್‌ಗಳನ್ನು ವಿಲೀನಗೊಳಿಸ ದಿರುವುದು, ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸದಿರುವುದು, ನೋಟು ಅಪನಗದೀ ಕರಣದ ವೇಳೆ ಮಾಡಿದ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆ ನೀಡುವುದು, ವಸೂಲಾಗದ ಸಾಲಕ್ಕೆ ಉನ್ನತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಹೊರಗುತ್ತಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ಮುಷ್ಕರದ ಹಿನ್ನೆಲೆಯಲ್ಲಿ ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಸಮೂಹ, ಕಾರ್ಪೊರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್‌ಬಿಐ, ಎಸ್‌ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಇನ್ನಿತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ಐಸಿಐಸಿಐ, ಎಚ್‌ಡಿಎಫ್ಸಿ, ಆ್ಯಕ್ಸಿಸ್, ಕೊಟಕ್ ಮಹೀಂದ್ರ ಸೇರಿದಂತೆ ಹೊಸ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.