Advertisement

“ವಿಶ್ವಾಸ’ಶಿಲ್ಪ

02:47 PM Aug 04, 2018 | Team Udayavani |

 ಭಾರತೀಯ ಸಂಸ್ಕೃತಿಯನ್ನು ಅತಿ ಎತ್ತರದಲ್ಲಿ ನಿಲ್ಲಿಸಿದ ಅನೇಕ ಅಂಶಗಳಲ್ಲಿ ದೇಶದ ಶಿಲ್ಪ ಕಲೆಯೂ ಒಂದು. ಹತ್ತಾರು ಶೈಲಿಯ ಶಿಲ್ಪಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಶಿಲ್ಪಿಗಳು ರಚಿಸಿರುವುದಕ್ಕೆ ದೇಶದಲ್ಲಿ ಸಾವಿರಾರು ಸಾಕ್ಷ್ಯಗಳು ಲಭ್ಯ.

Advertisement

 ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ “ಶಿಲ್ಪ’ಗಳೂ ಇಂದು ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ಕಂಡುಕೊಂಡಿವೆ. ಉಳಿದ ಲಲಿತಕಲೆಗಳ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಕಾರಿ ಬದಲಾವಣೆಗಳು ಶಿಲ್ಪಗಳಲ್ಲಿಯೂ ಆಗಿರುವುದನ್ನು, ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ಶಿಲ್ಪಗಳ ರಚನೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ವಿರಳ ಎನ್ನುವಂತಾಗಿದೆ. ಅಂಥದ್ದರಲ್ಲಿ ಮೈಸೂರಿನ ಕಲಾವಿದ ವಿಶ್ವಾಸ್‌ ಸಿ.ಎಂ. ಅಚ್ಚರಿ ಎನ್ನುವಂತಹ ಕಲಾಕೃತಿಗಳನ್ನು ರಚಿಸಿದ್ದಾರೆ.

ವಿಶ್ವಾಸ್‌, ಓದಿದ್ದು ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ಡಿಪ್ಲೊಮಾ. ಬಾಲ್ಯದಲ್ಲಿಯೇ ಚಿತ್ರಕಲೆ, ಶಿಲ್ಪಕಲೆಯ ಕಡೆ ವಿಶೇಷ ಒಲವು ಹೊಂದಿದ್ದ ವಿಶ್ವಾಸ್‌ಗೆ ಜೀವನದಲ್ಲಿ ಕಲಾವಿದ ಎನಿಸಿಕೊಳ್ಳಬೇಕೆನ್ನುವ ಹಂಬಲ ಪರ್ವತದಷ್ಟಿತ್ತು. ಆದರೆ, ಕಲೆಯಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟ ಎನ್ನುವ ಸಹಜ ಅಭಿಪ್ರಾಯ ತಂದೆ-ತಾಯಿಗೂ ಇದ್ದ ಕಾರಣ, ಅಷ್ಟು ಸುಲಭವಾಗಿ ಪೋಷಕರನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಪೋಷಕರ ಅಪೇಕ್ಷೆಯಂತೆ ಡಿಪ್ಲೊಮಾ ಕಾಲೇಜಿನತ್ತ ಹೆಜ್ಜೆ ಹಾಕಬೇಕಾಗಿ ಬಂತು. ಛಲ ಬಿಡದ ವಿಶ್ವಾಸ್‌ ಅಂದಿನಿಂದಲೂ ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿ ಇರುವ ಆಸಕ್ತಿಯನ್ನು ಬಚ್ಚಿಟ್ಟುಕೊಂಡು ಬಂದು, ನಿರಂತರ ಅಭ್ಯಾಸದಿಂದ ಇಂದು ಶಿಲ್ಪ ನಿರ್ಮಾಣದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

Advertisement

ಶಿಲ್ಪಗಳಲ್ಲಿನ ಸೂಕ್ಷ್ಮತೆ
ವಿಶ್ವಾಸ್‌ ಅವರ ಹೆಚ್ಚಿನ ಶಿಲ್ಪಗಳು ಭಾರತೀಯ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಶಿಲ್ಪಗಳಲ್ಲಿನ ಪ್ರಭಾವಕ್ಕೆ ಒಳಗಾಗಿರುವಂತೆ ಕಂಡರೂ, ಅದರಲ್ಲಿ ಆಧುನಿಕ ಚಿಂತನೆಗಳು ಮೇಳೈಸಿವೆ. ಈ ಕಾಲಘಟ್ಟದ ನವ್ಯ ಹಾಗೂ ಸಮಕಾಲೀನ ಗಾಂಭೀರ್ಯತೆಯನ್ನು ವಿಶ್ವಾಸ್‌ ಅವರ ಶಿಲ್ಪಗಳಲ್ಲಿ ಕಾಣಬಹುದಾಗಿದೆ. ಮನುಷ್ಯನ ಸಂವೇದನೆಗಳನ್ನೇ ತಮ್ಮ ನವ್ಯ ಶಿಲ್ಪಗಳ ರಚನೆಗೆ ವಸ್ತುವಾಗಿಸಿಕೊಂಡಿದ್ದಾರೆ ವಿಶ್ವಾಸ್‌.

ವಿಶ್ವಾಸ ಅವರ ಎಲ್ಲಾ ಕಲಾಕೃತಿಗಳೂ ಮರದ ಗಟ್ಟಿಯಿಂದಲೇ ಕೆತ್ತಲ್ಪಟ್ಟವು. ಪ್ರತಿಯೊಂದು ಶಿಲ್ಪಕ್ಕೂ ತೇಗದ ಮರವನ್ನೇ ಬಳಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಶಿಲ್ಪ ರಚನೆಯಲ್ಲಿ ಎಲ್ಲಿಯೂ ಎರಡು ಮರದ ಗಟ್ಟಿಗಳನ್ನು ಬಳಸಿಕೊಂಡಿಲ್ಲ. ಪ್ರತಿಯೊಂದು ಸೂಕ್ಷ್ಮ ಕೆತ್ತನೆಯನ್ನೂ ಒಂದೇ  ಗಟ್ಟಿಯಲ್ಲಿ ಮಾಡಿದ್ದು, ಈ ಸೂಕ್ಷ್ಮತೆಗಳನ್ನು ಅವರ ಶಿಲ್ಪದಲ್ಲಿ ಗಮನಿಸಲು ಸಾಧ್ಯ. ಅಡುಗೆ ಮನೆ ಸಾಮಗ್ರಿಗಳ ಉತ್ಪಾದನೆ, ಮಾರಾಟ ಉದ್ಯಮದಲ್ಲಿರುವ ದಂಪತಿಯ ಮಗನಾದ ವಿಶ್ವಾಸ್‌, ಈಗ  ವೃತ್ತಿಪರವಾಗಿ ಕಲೆಯನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಕೆತ್ತನೆಯಲ್ಲಿ ಮರ ಬಳಕೆ ಹೇಗೆ?
ಕರಕುಶಲ ಕಲಾ ಪ್ರಕಾರವಾಗಿ ಕಲಾತ್ಮಕ ಕೆತ್ತನೆಯಲ್ಲಿ ಮರದ ಬಳಕೆ ಇಂದು ನಿನ್ನೆಯದಲ್ಲ. ಸಾಕಷ್ಟು ವರ್ಷಗಳ ಇತಿಹಾಸವೇ ಇದೆ. 16,17ನೇ ಶತಮಾನದಲ್ಲಿಯೇ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳು ಲಭ್ಯ. ಶಿಲ್ಪ ಹಾಗೂ ಉಬ್ಬು ಶಿಲ್ಪಗಳಿಗೆ ಮರವನ್ನು ಉಪಯೋಗಿ ವಸ್ತುವಾಗಿ ಬಳಸಿಕೊಳ್ಳಲಾಗಿದೆ. ಕನ್ಯಾಕುಮಾರಿಯಿಂದ ಹಿಡಿದು, ಜಮ್ಮು ಕಾಶ್ಮೀರದ ತನಕ ನೂರಾರು ಶೈಲಿಯ    ಸಾಂಪ್ರದಾಯಿಕ ಕೆತ್ತನೆಗೆ ವಿವಿಧ ಜಾತಿಯ ಮರ ಬಳಕೆ ಮಾಡಿಕೊಂಡಿದ್ದಾರೆ. ಬಾಗಿಲು, ಕಿಟಕಿ, ಪೀಠೊಪಕರಣಗಳು, ಆಭರಣ ಪೆಟ್ಟಿಗೆ ಸೇರಿದಂತೆ ಅನೇಕ ವಸ್ತುಗಳಲ್ಲಿ ಇಂಥ ಕೆತ್ತನೆಗಳನ್ನು ಕಾಣಬಹುದು.

ಸಾಮಾನ್ಯವಾಗಿ ಮರಗೆತ್ತನೆಗೆ ವಿವಿಧ ರೀತಿಯ ಟೂಲ್‌(ಚಾಣ)ಗಳನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿಯೇ ಬೇರೆ ಬೇರೆ ಗಾತ್ರದ ಚಾಣಗಳು ಮಾರುಕಟ್ಟೆಯಲ್ಲಿ ಲಭ್ಯ.  ಮಾರ್ಬಲ್‌, ಕಲ್ಲು, ಮರ, ಮಣ್ಣುಗಳಲ್ಲಿನ ಕೆತ್ತನೆಗೆಂದೇ ವಿವಿಧ ರೀತಿಯ ಟೂಲ್‌ಗ‌ಳು ಸಿಗುತ್ತವೆ. ಮರದ ಮೈವಳಿಕೆ, ಲಕ್ಷಣಗಳನ್ನು ನೋಡಿ ಬೇರೆ ಬೇರೆ ವಿಧವಾದ ಟೂಲ್‌ಗ‌ಳನ್ನು ಬಳಸಿಕೊಳ್ಳುತ್ತಾರೆ.

ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next