ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ ಜನಾಕರ್ಷಣೀಯವಾಗಿತ್ತು. ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡ ಏರ್ ಶೋ ಹೆಮ್ಮೆಯ ವೀರ ಯೋಧರ ಸಾಹಸ ಪ್ರವೃತ್ತಿಗೆ ಸಾಕ್ಷಿಯಾಯಿತು. ಭಾರೀ ಜನಸ್ತೋಮದಿಂದ ತುಂಬಿದ್ದ ಮೈದಾನದ ಮೇಲೆ ಹಾರಿ ಬಂದ ಹೆಲಿಕಾಪ್ಟರ್‌ನಲ್ಲಿದ್ದ ಸೈನಿಕರು, 115 ಅಡಿ ಎತ್ತರದಿಂದ ಪುಷ್ಪ ವೃಷ್ಠಿ ಸುರಿಸುತ್ತಾ ವೈಮಾನಿಕ ಪ್ರದರ್ಶನಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಸಾ.ರಾ.ಮಹೇಶ್ ಹಾಗೂ ಇತರರು ಹಾಜರಿದ್ದರು. ಅಲ್ಲದೆ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಆಯೋಜಿಸಿರುವ ಮಕ್ಕಳ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಎರಡನೇ ದಿನವೂ ಚಿಣ್ಣರ ಸಂಭ್ರಮ ಮನೆ ಮಾಡಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದ ಪುಟಾಣಿಗಳು, ಪ್ರೇಕ್ಷಕರ ಮನತಣಿಸಿದರು. ಮಾವುತರು ಹಾಗೂ ಕಾವಾಡಿಗಳ ಮಕ್ಕಳು ತಮ್ಮದೆ ಹಾಡಿಯ ಹಾಡು, ಕುಣಿತವನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನಗೆದ್ದರು.
ದಸರಾ ಸಾಂಸ್ಕೃತಿಕ ಮೆರವಣಿಗೆಗೆ ನೀರಸ ಪ್ರತಿಕ್ರಿಯೆ: ಈ ಮಧ್ಯೆ, ಜಂಬೂಸವಾರಿಗೆ ಪೂರ್ವಭಾವಿಯಾಗಿ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆ ಯಶಸ್ವಿಯಾಗಿ ನಡೆಯಿತಾದರೂ, ಜನರ ಗಮನ ಸೆಳೆಯುವಲ್ಲಿ
ವಿಫಲವಾಯಿತು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ 2.45ಕ್ಕೆ
ಸಚಿವ ಜಿ.ಟಿ.ದೇವೇಗೌಡ ಅವರ ಜೊತೆಗೂಡಿ, ನಂದೀ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
ಬಣ್ಣ ಬಣ್ಣದ ಚಿತ್ತಾರಗಳು, ಝರಿ ಪೋಷಾಕುಗಳಿಂದ ಅಲಂಕೃತನಾಗಿ ಎಡ-ಬಲಕ್ಕೆ ಕಾವೇರಿ, ವರಲಕ್ಷ್ಮೀಯರನ್ನಿಟ್ಟುಕೊಂಡು ಬಂದ ಕ್ಯಾಪ್ಟನ್ ಅರ್ಜುನನಿಗೆ, ಮಧ್ಯಾಹ್ನ 3.44ಕ್ಕೆ ಪರಮೇಶ್ವರ್ ಮತ್ತು ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಮಂಗಳವಾದ್ಯದೊಂದಿಗೆ
ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದರು. ಈ ವೇಳೆಗೆ ಕುಶಾಲತೋಪು ಹಾರಿಸಲಾಯಿತು. ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಇತರರಿದ್ದರು. ಸಂಜೆ 5.20ಕ್ಕೆ ಮೆರವಣಿಗೆ ಬನ್ನಿಮಂಟಪ ಮೈದಾನ ತಲುಪಿತು.
ಮೆರವಣಿಗೆಯಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನ ಸೇರಿ ಹತ್ತು ಆನೆಗಳನ್ನು ಬಳಸಿಕೊಳ್ಳಲಾಗಿತ್ತು. 73 ಕಲಾ ತಂಡಗಳನ್ನು ಪಟ್ಟಿ ಮಾಡಲಾಗಿತ್ತಾದರೂ ಕಲಾತಂಡಗಳ ಸಂಖ್ಯೆ 35ನ್ನೂ ದಾಟಲಿಲ್ಲ. ಯುವ ಹಾಗೂ ಕಾಲೇಜು ವಿದ್ಯಾರ್ಥಿಗಳ 38 ತಂಡಗಳು
ಭಾಗವಹಿಸಲಿವೆ ಎಂದು ಪಟ್ಟಿ ಮಾಡಲಾಗಿತ್ತಾದರೂ ಮೆರವಣಿಗೆಯಲ್ಲಿ ಸಾಗಿದ್ದು ಎರಡೇ ತಂಡಗಳು. ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ ಜನಾಕರ್ಷಣೀಯವಾಗಿತ್ತು.