ಮಣಿಪಾಲ: ಭಜನಾ ಕಾರ್ಯಕ್ರಮದ ಮೂಲಕ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ನನಗೆ ನನ್ನ ಕನಸಿಗೆ ನೀರೆರೆದು ಪೋಷಿಸಿದವರು ಮನೆಯವರು. ನಾನು ಇಂದು ಎಲ್ಲರಿಂದಲೂ ಗುರುತಿಸಲ್ಪಡಲು ಕಾರಣರಾಗಿದ್ದು ಮನೆಯವರ ಪ್ರೋತ್ಸಾಹದಿಂದ ಎಂದು ಗಾನ ಕೋಗಿಲೆ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಕಲಾವತಿ ದಯಾನಂದ್ ಹೇಳಿದರು.
ಗಾನ ಕೋಗಿಲೆ, ಗಾನ ಮಲ್ಲಿಗೆ ಹೀಗೆ ಹಲವು ಬಿರುದುಗಳನ್ನು ಪಡೆದಿರುವ ಉಡುಪಿಯ ಕಲಾವತಿ ದಯಾನಂದ್ ಪುತ್ರನ್ ಸೋಮವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿ, ತಮ್ಮ ಸಂಗೀತ ಕ್ಷೇತ್ರದ ಪಯಣದ ಕುರಿತ ಅನುಭವವನ್ನು ಉದಯವಾಣಿ ಡಾಟ್ ಕಾಮ್ ನ “ತೆರೆದಿದೆ ಮನೆ ಬಾ ಅತಿಥಿ” ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಫೇಸ್ ಬುಕ್ ಲೈವ್ ನಲ್ಲಿ ಕಾಣದ ಕಡಲಿಗೆ ಹಂಬಲಿಸಿದ ಮನ, ಕುರುಡು ನಾಯಿ ಸಂತೆಗೆ ಬಂದಂತೆ, ಸೋರುತಿಹುದು ಮನೆಯ ಮಾಳಿಗೆ ಹಾಡನ್ನು ಹಾಡಿದರು.
ಕರಾವಳಿ ಜನ ನನ್ನ ಗುರುತಿಸಿ ಸಂಗೀತದ ಬೇರನ್ನು ಗಟ್ಟಿಗೊಳಿಸಿದ್ದರು. ಗಾನ ಕೋಗಿಲೆ ರಿಯಾಲಿಟಿ ಶೋನಲ್ಲಿ ಜನಪ್ರಿಯಳಾದ ಮೇಲೆ ನನಗೆ ಉತ್ತರ ಕರ್ನಾಟಕದ ಜನರು ಹೆಚ್ಚು ಪ್ರೀತಿ ತೋರಿಸಿ, ನಮ್ಮ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಉದಯವಾಣಿ ಕಚೇರಿಗೆ ಆಗಮಿಸಿದ್ದ ಕಲಾವತಿ ದಯಾನಂದ್ ಅವರನ್ನು ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು, ಉದಯವಾಣಿ ಡಿಜಿಟಲ್ ನ ನಾಗೇಂದ್ರ ತ್ರಾಸಿ, ಅವಿನಾಶ್ ಕಾಮತ್ ಹಾಜರಿದ್ದರು.