Advertisement

ನನ್ನ ಊರು, ನನ್ನ ಜನ

10:16 AM Feb 07, 2020 | mahesh |

ಈ ನೆಲದ ಮಣ್ಣನ್ನು ದೇಶೀ ವಿದೇಶೀ ಪ್ರವಾಸಿಗರು ಪವಿತ್ರ ಎಂದು ಭಾವಿಸಿ, ಹಣೆಗೆ ಹಚ್ಚಿಕೊಳ್ಳುತ್ತಾರೆ. ಪಾದರಕ್ಷೆ ಬಿಟ್ಟು ನೆಲಕ್ಕೆ ಮಣಿಯುತ್ತಾರೆ. ಶರಣರ ಗವಿಗಳು ಕ್ಷಣಾರ್ಧದಲ್ಲೇ ಧ್ಯಾನದ ಮೂಲಕ ಏಕಾಗ್ರತೆ ಸಾಧಿಸಲು ಯೋಗ್ಯ ವಾತಾವರಣ ಹೊಂದಿದ್ದವು ಎಂದು ಮೆಚ್ಚಿಕೊಳ್ಳುತ್ತಾರೆ…

Advertisement

ಕಲ್ಯಾಣ ಕರ್ನಾಟಕ ಪ್ರದೇಶ, ಪ್ರಾಚೀನ ಕಾಲದಿಂದಲೂ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಸಮಾನತೆಯ ಮಾದರಿ ನಾಡಾಗಿತ್ತು. ಸಂಪದ್ಭರಿತ, ಆದರ್ಶ ರಾಜ್ಯವಾಗಿತ್ತು. ನಿಂತ ನೆಲವನ್ನೇ ಕೈಲಾಸ ಮಾಡಿದ, ಮನೆಯ ಅಂಗಳವನ್ನೇ ಮಹಾಮನೆಯನ್ನಾಗಿ ಮಾಡಿದ ಶ್ರೇಯಸ್ಸು ಅಂದಿನ ಶರಣರಿಗೆ ಸಲ್ಲುತ್ತದೆ. ಇಡೀ ಜಗತ್ತಿಗೆ ಪ್ರಥಮ ಸಂವಿಧಾನ, ಸಂಸತ್ತು, ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯನ್ನು ಯಶಸ್ವಿಯಾಗಿ ತೋರಿಸಿಕೊಟ್ಟ ನೆಲ ಕಲ್ಯಾಣ ಕರ್ನಾಟಕ. ಅದು, ವರ್ಗ- ಲಿಂಗ ಸಮಾನತೆಯ ನೆಲೆಬೀಡು.

ಕಲಬುರಗಿಯದ್ದು ತೊಗರಿ ನಾಡಿನ ಕಣಜವೆಂದು ಹೆಸರಾದ ನೆಲ, ಭತ್ತ, ಎಳ್ಳು, ಕಡಲೆ, ಶೇಂಗಾ, ಉದ್ದು, ಸಿರಿಧಾನ್ಯಗಳನ್ನು ಬೆಳೆಯುವ ನೆಲ. ಆದರೆ, ಮಳೆ ನಿರಂತರವಾಗಿ ಕೈಕೊಡುತ್ತಾ ಹೋದರೆ ಒಕ್ಕಲಿಗ ಒಕ್ಕುವುದಿಲ್ಲ, ಜಗದ ಜನ ಬಿಕ್ಕುವುದು ನಿಲ್ಲುವುದಿಲ್ಲ. ಈ ಭಾಗದಲ್ಲಿ 20 ವರ್ಷಗಳಿಗೊಮ್ಮೆ ನಿರಂತರವಾಗಿ ಬರಗಾಲಗಳು ಬೀಳುತ್ತಲೇ ಬಂದಿರುವ ದಾಖಲೆಗಳು ದೊರೆಯುತ್ತವೆ.

ಮೊದಲೆಲ್ಲ ನೆಲದೊಂದಿಗೆ ಬೆರೆತು ದುಡಿಯುವ ಧೈರ್ಯ ರೈತನಿಗಿತ್ತು. ಕಾಲಕಾಲಕ್ಕೆ ಮಳೆ- ಬೆಳೆಗಳು ಬರುತ್ತಿದ್ದವು. ಸಾಲ ಎಂದರೆ ಶೂಲ ಎಂಬ ಭಯವಿತ್ತು. ತಾವೇ ಎಲ್ಲರಿಗೆ ಬೆನ್ನಲುಬಾಗಿ ನಿಲ್ಲುತ್ತೇವೆ ಎಂಬ ಆತ್ಮವಿಶ್ವಾಸವಿತ್ತು. ದೇಶೀ ಕೃಷಿಪದ್ಧತಿಗಳನ್ನು ಅಳವಡಿಸಿಕೊಂಡು ನಾನಾ ಪ್ರಯೋಗಗಳನ್ನು ಮಾಡುತ್ತ ಎಲ್ಲರಿಗೂ ಮಾದರಿಯಾಗಿ ನಿಲ್ಲುವ ಬದುಕು ಅವರದಾಗಿತ್ತು. ಭೂಮಿತಾಯಿ ತಮ್ಮ ಕೈಬಿಡುವುದಿಲ್ಲ ಎಂಬ ಭರವಸೆಯ ಮೇಲೆ ತನ್ನ ಕುಟುಂಬವನ್ನಷ್ಟೇ ಅಲ್ಲ, ತನ್ನ ಅವಲಂಬಿಸಿದ್ದ ಆಳುಗಳ, ಆಯಗಾರರ ಕುಟುಂಬಗಳನ್ನೂ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ಕಾಣುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ- ಬೆಳೆ ಸಕಾಲಕ್ಕೆ ಆಗುತ್ತಿಲ್ಲ. ಸಾಹುಕಾರ ಸಾಲ, ಸರ್ಕಾರಿ ಸಾಲ ಸೌಲಭ್ಯಗಳು, ಸಬ್ಸಿಡಿಯ ಯೋಜನೆಗಳಿಗೆ ರೈತ ಮಾರುಹೋಗಿ, ತನ್ನ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾನೆ.

ಜಗತ್ತು ಆಗಾಗ ಕ್ಷಾಮದ ಪೀಡೆಗೆ ಈಡಾಗುತ್ತ ಇರುತ್ತದೆ. ದೇಹಕ್ಕೆ ರೋಗರುಜಿನಗಳು ಬರುವ ಹಾಗೆ ಭೂಮಿಗೆ, ಬೆಳೆಯುವ ಬೆಳೆಗೆ ರೋಗ ಬಂದಾಗ ಸಹನೆಯಿಂದ ಇರಬೇಕು; ಇಲ್ಲದಿದ್ದರೆ ವಿಪತ್ತು ತಪ್ಪಿದ್ದಲ್ಲ. ಅಸಹಾಯಕತೆಯಿಂದ ತನ್ನ ಜೀವಕ್ಕೆ ಕುತ್ತು ತಂದುಕೊಳ್ಳುವುದೇ ಎಲ್ಲದಕ್ಕೂ ಪರಿಹಾರವಲ್ಲ. ಒಂದು ಜೀವ ತ್ಯಾಗದಿಂದಲೂ ಪರಿಹಾರ ಘೋಷಣೆಯಾಗುತ್ತದೆಂದು ತಿಳಿದು ರೈತ ಆತ್ಮಹತ್ಯೆಗೆ ಶರಣಾಗುತ್ತಾನೆ. ಅದಕ್ಕೂ ಈ ನೆಲವೇ ಮುನ್ನುಡಿ ಬರೆದುದನ್ನು ಕಾಣುತ್ತೇವೆ.

Advertisement

ಕನ್ನಡ ಸಂಸ್ಕೃತಿಯ ಗುಣಗಳ ವಾರಸುದಾರರು ಈ ನೆಲದ ಮಕ್ಕಳು. ಸಕಲ ಜೀವಾತ್ಮರಿಗೆ ಲೇಸು ಬಯಸುವ ಜನ ಇಲ್ಲಿದ್ದರು. ದಯವೇ ಧರ್ಮ ಎಂಬ ಹೊಸ ವ್ಯಾಖ್ಯಾನವನ್ನೇ ಬರೆದರು. ಈ ಗುಣಗಳಿಂದ ಧರ್ಮವನ್ನು ಎತ್ತಿ ಹಿಡಿದರು. ಈ ಭಾಗದಲ್ಲಿ ಕನ್ನಡಕ್ಕೆ ಕನ್ನಡತನದ ಸಂಸ್ಕಾರ ಕೊಟ್ಟು ಕನ್ನಡಕ್ಕೆ ಜೀವ ತುಂಬುವ ಕೆಲಸ ನಡೆಯಿತು. ಮಡಿ, ಮೈಲಿಗೆ, ಸೂತಕಗಳು ಭಾಷೆಗೂ ಇರುತ್ತದೆ ಎಂಬುದನ್ನು ಗುರುತಿಸಿದ ಶರಣರು, ಮನದ ಮೈಲಿಗೆಯನ್ನು ಕಳೆದು ನುಡಿ ಸಿದ್ಧಾಂತವನ್ನು ಪ್ರತಿಷ್ಠಾಪಿಸಿದರು. ಹೀಗಾಗಿ, ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಸುವಂತಾಯಿತು. ಇದರ ಮುಂದುವರಿಕೆಯಾಗಿ ಕೀರ್ತನ ಪರಂಪರೆಯಲ್ಲಿ ಕನ್ನಡ ಭಾಷೆಯಲ್ಲಿ ದೇವತಾಸ್ತುತಿಗಾಗಿ ದಾಸಕೂಟ ಕೆಲಸ ಮಾಡತೊಡಗಿತು. ಕಲ್ಯಾಣ ಕರ್ನಾಟಕದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಭಾಷಾ ಬಳಕೆ ಕಲಿಕೆ ಇದೆ.

ನಿಜಾಮನ ಆಡಳಿತದಲ್ಲಿ ಕನ್ನಡ ಭಾಷೆ ತನ್ನ ನೆಲದಲ್ಲಿಯೇ ಪರಕೀಯತೆ ಅನುಭವಿಸಿತು. ಜೊತೆಗೆ ಪಾರ್ಸಿ, ಉರ್ದು, ಮರಾಠಿ ಭಾಷೆಗಳ ಪ್ರಾಬಲ್ಯದಿಂದ ಕನ್ನಡ ಹೊರನೋಟಕ್ಕೆ ಸೊರಗಿದಂತೆ ಕಾಣಿಸಿದರೂ ಅದರ ಶಕ್ತಿಯನ್ನು ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಉಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಅವರು, ಬೀದರನ ಪೂಜ್ಯ ಚೆನ್ನಬಸವ ಪಟ್ಟದ್ದೇವರು, ರಾಯಚೂರಿನ ಪಂಡಿತ ತಾರಾನಾಥ ಅವರು, ಇನ್ನುಳಿದ ಹಿರಿಯರು ಈ ಭಾಗದ ಕನ್ನಡವನ್ನು ಕಲಿಕೆಯ ಮೂಲಕವೂ ಉಳಿಸುವ ಪ್ರಯತ್ನ ಮಾಡಿದ್ದು ಅದ್ಭುತವಾದ ಕೆಲಸ.

– ಡಾ. ಜಯಶ್ರೀ ದಂಡೆ

Advertisement

Udayavani is now on Telegram. Click here to join our channel and stay updated with the latest news.

Next