ಹುಬ್ಬಳ್ಳಿ: ಯುವ ಬ್ರಿಗೇಡ್‌ನ “ನನ್ನ ಕನಸಿನ ಕರ್ನಾಟಕ’ ಅಭಿಯಾನ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಇದರಲ್ಲಿ ರಾಜ್ಯದ ಎಲ್ಲ ಜನರು ತೊಡಗಿಕೊಳ್ಳುವುದು ಅವಶ್ಯಕ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮೂರುಸಾವಿರ ಮಠದ ಆವರಣದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ನನ್ನ ಕನಸಿನ ಕರ್ನಾಟಕ’ ಕುರಿತು ಉಪನ್ಯಾಸ ನೀಡಿದರು. ನಾವು ನಮ್ಮ ಕನಸನ್ನು ನನಸು ಮಾಡಿಕೊಳ್ಳದಿದ್ದರೆ ಇನ್ನೊಬ್ಬರ ಕನಸು ನನಸು ಮಾಡಲು ಜೀವನ ಸವೆಸಬೇಕಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವ ಸರಕಾರಕ್ಕೆ ಪ್ರತಿಯೊಂದು ನಗರದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ರಾಜಕಾರಣಿಗಳ ಹೂಡಿಕೆ ಇರುವುದರಿಂದ ಅವರು ಸಮರ್ಪಕ ಸರಕಾರಿ ಆಸ್ಪತ್ರೆಗಳನ್ನು ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ನುಡಿದರು.
ಹು-ಧಾ ಜನಪ್ರತಿನಿಧಿಗಳಿಗೆ ದೂರದೃಷ್ಟಿಯಿಲ್ಲ: ಧಾರವಾಡ-ಹುಬ್ಬಳ್ಳಿ ಅಭಿವೃದ್ಧಿ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ದೂರದೃಷ್ಟಿಯಿಲ್ಲ. ರಾಜ್ಯದ 2ನೇ ರಾಜಧಾನಿ ಎನಿಸಿಕೊಂಡ ನಗರದ ರಸ್ತೆಗಳ ದುಸ್ಥಿತಿ ದೇವರಿಗೇ ಪ್ರೀತಿ. 4 ವರ್ಷಗಳಾದರೂ ಬಿಆರ್‌ಟಿಎಸ್ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಬಸ್ ಶೆಲ್ಟರ್‌ಗಳಲ್ಲಿ ಎಲೆಕ್ಟ್ರಾನಿಕ್‌ಯಂತ್ರ ಅಳವಡಿಸಿದ ನಂತರ ರಸ್ತೆ ಕಾರ್ಯ ಮಾಡಲಾಗುತ್ತಿದೆ. ಯಂತ್ರಗಳು ಹಾಳಾಗುತ್ತವೆ ಎಂಬ ಪರಿಜ್ಞಾನ ಇಲ್ಲ ಎಂದರು. ಹುಬ್ಬಳ್ಳಿಯನ್ನು ಉತ್ಪಾದನಾ ಹಬ್ ಆಗಿ ಬೆಳೆಸುವ ದಿಸೆಯಲ್ಲಿ ಯೋಜನೆ ರೂಪಿಸಬೇಕು. ಹುಬ್ಬಳ್ಳಿಯಿಂದ ಬೇರೆ ನಗರಗಳಿಗೆ ವಿಮಾನ ಸೇವೆ ಆರಂಭಿಸಬೇಕು. ಧಾರವಾಡದ ಹಲವಾರು ಸಂಗೀತಗಾರರು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ.
ಧಾರವಾಡವನ್ನು ಹಿಂದೂಸ್ತಾನಿ ಸಂಗೀತ ಹಬ್ ಹಾಗೂ ಮೈಸೂರನ್ನು ಕರ್ನಾಟಕ ಸಂಗೀತ ಹಬ್ ಆಗಿ ಅಭಿವೃದ್ಧಿಪಡಿಸಬೇಕು ಎಂದರು. ಶ್ರೀನಿಧಿ ಕಾಮತ ಪ್ರಾರ್ಥಿಸಿದರು. ಮಂಜು ಹೆಗ್ಗೇರಿ ಪ್ರಾಸ್ತಾವಿಕ ಮಾತನಾಡಿದರು. ಚೇತನಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಮಹೇಶ ದ್ಯಾವಪ್ಪನವರ, ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಇದ್ದರು.