Advertisement

ನನ್ನ ಡಿಕ್ಸನರಿ, ಬಿಜೆಪಿ ಡಿಕ್ಸನರಿ ಬೇರೆ, ಬೇರೆ: ಕತ್ತಿ

10:51 PM Aug 24, 2019 | Lakshmi GovindaRaj |

ಬೆಳಗಾವಿ: “ನಮ್ಮ ಡಿಕ್ಸನರಿ ನಮಗೆ. ಅವರ ಡಿಕ್ಸನರಿ ಅವರಿಗೆ. ನಾನು ಮತದಾರರ ಆಶೀರ್ವಾದದಿಂದ ಹೆಚ್ಚು ಬಾರಿ ಶಾಸಕನಾಗಿ ಹಿರಿಯ ಸದಸ್ಯನಾಗಿದ್ದೇನೆ. ಇದು ನನ್ನ ಡಿಕ್ಸನರಿ. ಬಿಜೆಪಿ ಅವರದ್ದು ಸಂಘ ಪರಿವಾರ. ನಿಷ್ಠಾವಂತರು ಎಂದು ಏನೇನೋ ಇದೆ. ಅದು ಅವರ ಡಿಕ್ಸನರಿ’.

Advertisement

ಇದು ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಅವರ ನೇರ ನುಡಿ. ಬೆಂಗಳೂರಿನಿಂದ ಶನಿವಾರ ಬೆಳಗಾವಿಗೆ ಆಗಮಿಸಿದ ಉಮೇಶ ಕತ್ತಿ “ಉದಯವಾಣಿ’ ಜತೆ ಮಾತನಾಡಿ, ನಮ್ಮ ಕ್ಷೇತ್ರದ ಮತದಾರರು ಪ್ರತಿ ಬಾರಿ ಆಶೀರ್ವಾದ ಮಾಡಿದ್ದರಿಂದ ಹೆಚ್ಚು ಬಾರಿ ಶಾಸಕನಾಗಿದ್ದೇನೆ. ಅವರಿಂದ ಹಿರಿಯ ಶಾಸಕ ಪಟ್ಟ ಸಿಕ್ಕಿದೆ. ಆದರೆ, ಇದು ಬಿಜೆಪಿಯಲ್ಲಿ ಪರಿಗಣನೆಗೆ ಬರುತ್ತಿಲ್ಲ ಎಂದರು.

“ಮುಖ್ಯವಾಗಿ ಹಿರಿಯ ಶಾಸಕರನ್ನು ಮಂತ್ರಿ ಮಾಡಬೇಕು ಎಂಬುದು ಬಿಜೆಪಿಯಲ್ಲಿ ಬರೆದಿಲ್ಲ. ಅದೇನೋ ಸಂಘ ಪರಿವಾರ, ನಿಷ್ಠಾವಂತರು ಎಂದು ಏನೇನೋ ಇದೆ. ನಾನು ಮಂತ್ರಿಗಿರಿಗೆ ಎಂದೂ ಆಸೆ ಪಟ್ಟವನಲ್ಲ. ನಮ್ಮ ಜೀವನ ಅದರ ಮೇಲೆಯೇ ನಿಂತಿಲ್ಲ. ಮಂತ್ರಿಗಿರಿ ಸಿಗದೇ ಇದ್ದರೆ ನನಗೆ ಮನೆ ಇದೆ. ಹೊಲ ಇದೆ. ಯಾವುದಕ್ಕೂ ಚಿಂತೆ ಇಲ್ಲ’ ಎಂದರು.

“ಮಂತ್ರಿಯಾದರೆ ಆಯಿತು, ಇಲ್ಲದಿದ್ದರೆ ಇಲ್ಲ. ಶಾಸಕನಾಗಿದ್ದರಿಂದ ಇನ್ನೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ. ಶಾಸಕರೇ ಆಗಿರದವರು ಮಂತ್ರಿ ಆಗಿದ್ದಾರೆ. ನಾನು ಶಾಸಕನಾಗಿದ್ದರಿಂದ ಸಹಜವಾಗಿಯೇ ಮಂತ್ರಿಗಿರಿ ಸಿಗಬಹುದು ಎಂಬ ನಿರೀಕ್ಷೆ ಇದೆ.

ಆದರೆ, ಇದನ್ನು ನಾನು ಖಂಡಿತವಾಗಿಯೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಮುಂದಿನ ವಾರ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಕಾಯಿರಿ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ. ಕಾಯುತ್ತೇವೆ. ನಾನು ಹಾಗೂ ಬಾಲಚಂದ್ರ ಜಾರಕಿಹೊಳಿ ಸಚಿವರಾಗಬಹುದು. ಅವಕಾಶ ಇಲ್ಲದಿದ್ದರೆ ನಾವು ಮಂತ್ರಿ ಆಗುವುದಿಲ್ಲ. ಆದರೆ, ಇದರಿಂದ ಖಂಡಿತ ಅಸಮಾಧಾನ ಇಲ್ಲ’ ಎಂದರು.

Advertisement

“ನಾನು ಹೊನ್ನಾಳಿ ಹುಲಿ’
ಸಿರಿಗೆರೆ (ಚಿತ್ರದುರ್ಗ): “ನಾನು ಹೊನ್ನಾಳಿ ಹುಲಿ, ಯಾವು ದಕ್ಕೂ ಜಗ್ಗುವವನಲ್ಲ. ಮಣ್ಣಿನ ಹೆಂಡೆಯಲ್ಲ, ಕಲ್ಲು ಬಂಡೆ ಇದ್ದಂತೆ. ಸಚಿವ ಸ್ಥಾನಕ್ಕಾಗಿ ಯಾರ ಬಳಿಯೂ ಬೇಡುವುದಿಲ್ಲ’ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ನನಗೆ ಸಚಿವ ಸ್ಥಾನದ ನಿರೀಕ್ಷೆಯೇ ಇಲ್ಲ. ಮಂತ್ರಿಗಿರಿಗಾಗಿ ಅಪೇಕ್ಷೆ ಇದ್ದಿದ್ದರೆ ನೇರವಾಗಿ ಸಿಎಂ ಯಡಿಯೂರಪ್ಪನವರ ಬಳಿ ಹೋಗಿ ಪಟ್ಟು ಹಿಡಿದು ಕೂರುತ್ತಿದ್ದೆ.

ನನಗೆ ಸದ್ಯಕ್ಕೆ ಸಚಿವ ಸ್ಥಾನದ ಅಗತ್ಯವಿಲ್ಲ. ಅಲ್ಲದೆ, ಯಡಿಯೂರಪ್ಪ ಅವರಿಗೆ ದ್ರೋಹ ಮಾಡುವುದಿಲ್ಲ’ ಎಂದರು. ಈಗ ಮಾತನಾಡುವವರು ಯಡಿಯೂರಪ್ಪನವರು ಸಂಕಷ್ಟ ದಲ್ಲಿದ್ದಾಗ ಮಾತನಾಡಲಿಲ್ಲ. ಈಗ ಸಚಿವರಾಗಿ ನಮಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದು ಟಾಂಗ್‌ ನೀಡಿದರು.

ಆಂಜನೇಯ ವಿರುದ್ಧ ವಾಗ್ಧಾಳಿ: ಬಿಜೆಪಿ ಹೈಕಮಾಂಡ್‌ ಬಳಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆಂಬ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಆಂಜನೇಯ ಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರ ಬಾಲವಾಗಿದ್ದರು. ಯಡಿಯೂರಪ್ಪನವರ ಬಗ್ಗೆ ಆಂಜನೇಯಗೇನು ಗೊತ್ತಿದೆ ಎಂದು ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.

ನಾನು ಹಾಗೂ ಲಕ್ಷ್ಮಣ ಸವದಿ ದಿನಾಲೂ ಮಾತನಾಡುತ್ತೇವೆ. ಅವನು 3 ಬಾರಿ ಕರೆ ಮಾಡಿದರೆ, ನಾನು ನಾಲ್ಕು ಬಾರಿ ಕರೆ ಮಾಡಿ ಮಾತನಾಡುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಎಲ್ಲ ನಾಯಕರು ಕೂಡಿಯೇ ಇರುತ್ತೇವೆ.
-ಉಮೇಶ ಕತ್ತಿ, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next