Advertisement

ಮೃದಂಗವಾದನ ಕೃತಿಗೆ ಹುಟ್ಟಿದಂತಿರಬೇಕು; ಕಟ್ಟಿದಂತಲ್ಲ

03:35 AM Jun 30, 2017 | Team Udayavani |

ಸಂಗೀತ ಕಛೇರಿಯೊಂದರಲ್ಲಿ, ಗಾನವು ಪ್ರಸ್ತುತಿಗೊಂಡಾಗ ಪ್ರಬುದ್ಧ ವಾದಕನಾದವನು ಗಾಯಕನ ಗಾನದ, ರಾಗದ ಭಾವದೊಂದಿಗೆ ಮಿಳಿತ ಹೊಂದಲು ಉಪಕ್ರಮಿಸುತ್ತಾನೆ. ಇಲ್ಲಿ ಎರಡು ಮನಃಪ್ರಕ್ರಿಯೆಗಳನ್ನು ಕಾಣಬಹುದು. ಮೊದಲನೆಯದು ಬುದ್ಧಿಪೂರ್ವಕ ತೊಡಗಿಸಿಕೊಳ್ಳುವಿಕೆ, ಮೊದಲನೆಯದರಲ್ಲಿ ವಾದಕನಾದವನು ತಾಳ-ಲಯ, ಕೃತಿ, ಕೃತಿಯ ಗತಿ ಇವೆಲ್ಲದರ ಬಗ್ಗೆ ಪ್ರಜ್ಞಾಪೂರ್ವಕ ಅವಧಾರಣೆಯನ್ನು ಮಾಡುತ್ತಾನೆ. ಮತ್ತು ನಿಧಾನವಾಗಿ ಸರ್ವ ಲಘುಗಳಿಂದ ಕೂಡಿದ ವಾದನವನ್ನು ಆರಂಭಿಸುತ್ತಾನೆ ಅಥವಾ ಗಾಯಕನು ಹಾಡುವ ಕೃತಿಯನ್ನು ಗಮನಿಸಿ ಮನೋಧರ್ಮೀಯ ನುಡಿತಗಳಿಂದ ವಾದನವನ್ನು ನೀಡುತ್ತಾನೆ. ಇನ್ನೊಂದು ಬಗೆಯ¨ªಾದರೆ, ವಾದಕನು ಕೃತಿಯ ಮತ್ತು ಗಾನದ ಒಟ್ಟು ಭಾವಕ್ಕೆ ಅನುಗುಣವಾಗಿ ವಿರಾಮಗಳಿಂದ ಕೂಡಿದ, ಕೃತಿಯ ಸಾಹಿತ್ಯಕ್ಕೆ ಪೂರಕವಾದ ತಾಡನ ಸಾಂದ್ರತೆಗಳಿಂದೊಡಗೂಡಿದ ಟೇಕಾ, ಗುಮ್ಮಿ, ಛಾಪು, ಅರೆಛಾಪು ಇವುಗಳಿಂದ ಸಮ್ಮಿಳಿತವಾದ ಮೃದಂಗದ ಪಾಠಾಕ್ಷರಗಳೊಂದಿಗೆ “ಹಾಡಲು’ ಉಪಕ್ರಮಿಸುತ್ತಾನೆ.

Advertisement

ಇಲ್ಲಿ ತುಂಬಾ ಕಾಡುವ ವಿಚಾರವೊಂದಿದೆ. ವಾದಕನಾದವನು ಗಾಯಕನ ಗಾಯನದಿಂದ “ಅನ್ಯ’ನಾಗಿ ನಿಂತು ನೋಡಿ ಗಾನವನ್ನು ಅನುಸರಿಸಬೇಕೋ ಅಥವಾ ಗಾನದೊಂದಿಗೇ ಒಂದಾಗಿ ನುಡಿಸಬೇಕೋ ಎನ್ನುವಂತಹದ್ದು. ಇಲ್ಲಿ “ಅನ್ಯ’ವೆಂದರೆ ವಾದಕನಲ್ಲಿರುವ ಸಾಕ್ಷಿಪ್ರಜ್ಞೆಯ ಜಾಗೃತಾವಸ್ಥೆ. ಇಲ್ಲಿ ಗಾನದ ಒಟ್ಟು ಸೌಂದರ್ಯದ ಉದ್ದೀಪನೆಗೆ ಅವನದ್ಧ ವಾದಕನಾದವನು ತನ್ನ ಕಲ್ಪನೆಯ ಮೂಸೆಯಿಂದ ಹೊರಡುವ ನಡೆಗಳನ್ನು ನುಡಿಸುವುದು. ಇಲ್ಲಿ ಅವನದ್ಧ ವಾದಕನ ಸೌಂದರ್ಯ ಪ್ರಜ್ಞೆ ಜಾಗೃತಾವಸ್ಥೆಯಲ್ಲಿರುತ್ತದೆ. ಗಾನದ ಉನ್ನತೀಕರಣಕ್ಕೆ ಯಾವುದು ಬೇಕೋ ಹಾಗೆಯೇ ರಸಿಕರಲ್ಲಿ ರಸದ ಪ್ರಸರಣೆಗೆ ಏನು ಬೇಕೋ ಅದನ್ನು ಬುದ್ಧಿಪೂರ್ವಕವಾಗಿ ಪ್ರಸ್ತುತಪಡಿಸುವುದು. ಹಾಗೆಯೇ ವಾದಕನು ಈ ಸನ್ನಿವೇಶಗಳಲ್ಲಿ ಅಭಿಜಾತತೆ (Classicism))ಯ ಬೇಲಿಯನ್ನು ದಾಟಲು ಅಷ್ಟೊಂದು ತವಕಿಸುವುದಿಲ್ಲ. ತವಕಿಸಿ ದಾಟಿದರೂ ಅಭಿಜಾತತೆಯ ಛಾಯೆಯಡಿಯಲ್ಲೇ ಅವನ ಚಲನೆ ಇರುತ್ತದೆ.

ಇನ್ನೊಂದು ಬಗೆಯ ವಾದನಕ್ರಮ, ಗಾನಕ್ಕಿಂತ ಅನ್ಯವಾಗಿಲ್ಲದ, ಅಂದರೆ ಗಾನದೊಂದಿಗೆ ತಾನೂ ಗಾನವಾಗಿಯೇ ಇರುವ ಭಾವಪೂರ್ಣ ನುಡಿಸುವಿಕೆ. ಇಲ್ಲಿ ವಾದಕನಿಗೆ ಗಾನದೊಂದಿಗೆ ತಾನೂ ತನ್ನ ನುಡಿ ಸಾಣಿಕೆಯೂ ಬೇರಲ್ಲ ಎಂಬ ಭಾವ ಸ್ಪಷ್ಟವಾಗಿರುತ್ತದೆ. ಇಲ್ಲಿ ತಮಾಷೆಯೆಂದರೆ, ತನ್ನ ನುಡಿಸಾಣಿಕೆ ಮತ್ತು ತಾನು ಗಾನದಿಂದ ಬೇರೆಯಾಗಿಲ್ಲ ಎಂಬ ಭಾವ ಬಂದೊಡನೆಯೇ ವಾದಕನು ಗಾನದಿಂದ ಅನ್ಯನಾಗಿ ಬಿಡುತ್ತಾನೆ! ಅದಿರಲಿ, ಈ ಭಾವಪೂರ್ಣ ಪ್ರಸ್ತುತಿಯಲ್ಲಿ ವಾದಕನಿಗೆ ಅಭಿಜಾತತೆಯ ರಾಜಸಿಕ ನಿರ್ಬಂಧಗಳ ಹಂಗಿರುವುದಿಲ್ಲ. ವಾದಕನಾದವನು ಅಭಿಜಾತತೆ ಎಂಬ ಮಂಡಲದ ಸುತ್ತಲೂ ಸುಂದರವಾದ ಚಿತ್ತಾರಗಳನ್ನು ಇಕ್ಕುತ್ತಾ ಸಾಗುತ್ತಾನೆ – ಮೂಲವನ್ನೂ ಕೇಂದ್ರದ ಬಿಂದುವನ್ನೂ ಮರೆಯದೆ. ಉದಾಹರಣೆಗೆ ನೀರಜಾಕ್ಷಿ ಕಾಮಾಕ್ಷಿ… ಎಂಬ ವಿಳಂಬ ಗತಿಯ ಕೃತಿಯ ನಿರೂಪಣೆಯನ್ನೇ ತೆಗೆದುಕೊಳ್ಳೋಣ. ಈ ಕೃತಿಯ ಮೊದಲ ಪಂಕ್ತಿ ಮುಗಿದೊಡನೆಯೇ ಭಕ್ತಿರಸವನ್ನು ಉದ್ದೀಪಿಸುವ ಸಲುವಾಗಿ (ಮುಕ್ತಾಯದ ಸೊಲ್ಲುಕಟ್ಟು ನೀಡುವುದರ ಬದಲಾಗಿ) ಮೃದುವಾದ ಬೆರಳ ಸ್ಪರ್ಶದಿಂದ ಕೂಡಿದ ಸಹಜವಾದ ಮೃದಂಗದ ಟೇಕಾ (ನಂ… ನ…)ಗಳನ್ನು ಹೊರ ಹೊಮ್ಮಿಸಬಹುದು. ಇದು ಗಾನದ ಭಾವವನ್ನು ಹೆಚ್ಚು ಪ್ರತಿಬಿಂಬಿಸುವುದಕ್ಕೆ ಸಹಕಾರಿಯಾಗುತ್ತದೆ. ಅದನ್ನು ಒಂದಾವರ್ತ ನುಡಿಸಿದರೆ ಅದನ್ನು ಖಂಡಿತವಾಗಿಯೂ ಭಾವಪೂರ್ಣ ಗಾನದೊಳಗೊಂದಾದ ಅಥವಾ “ತಾನೇ ಗಾನವಾದ’ ಮೃದಂಗದ ಮೃದು “ನಲು°ಡಿ’ ಎನ್ನಬಹುದು.

ಇಂತಹ ಭಾವಪೂರ್ಣ ಮನೋಧರ್ಮೀಯ ಪ್ರಸ್ತುತಿಯಲ್ಲಿ ವಾದಕನಿಗೆ “ಅವಧೂತತ್ವ’ ಸಿದ್ಧಿಸುತ್ತದೆ. ಕಲೆಯಲ್ಲಾಗುವ “ಊಧ್ವì ಪಾತ’ ಎಂದರೆ ಇದೇ ತಾನೇ. ಕಲಾವಿದನು ಕಲೆಯೊಂದಿಗೆ ತೀರಾ ಒಂದಾಗಬಾರದೆನ್ನುವ ಮಾತೊಂದಿದೆ. ಕಲಾವಿದ ರಸವನ್ನು ಅಭಿವ್ಯಕ್ತಿಸಬೇಕೇ ಹೊರತು ತಾನೇ ರಸದೊಂದಿಗೆ ಒಂದಾಗಬಾರದೆನ್ನುವ ಮಾತೂ ಇದೆ. ರಸಿಕರನ್ನು ರಸವಂತರನ್ನಾಗಿಸಬೇಕೇ ಹೊರತು ತಾನೇ ಅದಾಗಬಾರದೆನ್ನುವ ಅರ್ಥ ಇದು. ಭಾವೋತ್ಕಟತೆಯುಳ್ಳ ಕಲಾವಿದನಾದವನಿಗೆ ಇದೊಂದು ಪರೀಕ್ಷೆಯೇ ಸರಿ. ವಾದಕನು ಗಾನದೊಂದಿಗೆ “ಅದ್ವೆ„ತ ಭಾವ’ ಹೊಂದಿದರೆ ವಾದಕನಿಗೆ “ಕೈಕಟ್ಟುವ’ ಅಪಾಯವೇ ಹೆಚ್ಚು. ಅನ್ಯನಾಗಿ ನಿಂತರೆ ಭಾವಪೂರ್ಣತೆಯೊಂದಿಗಿನ ಮನೋಧರ್ಮೀಯ ಪ್ರಸ್ತುತಿ ಆಗದಿರುವ ಕೊರತೆಯೂ ಬರುತ್ತದೆ. ವಾದಕನಿಗೆ “ಅನ್ಯ’ನಾಗುವಿಕೆ ಹಾಗೂ “ಒಂದಾಗುವಿಕೆ’ಯ ಸಾಮರ್ಥ್ಯ ಇದ್ದರಂತೂ ಸೌಭಾಗ್ಯವೇ ಸರಿ. ಕೀರ್ತಿಶೇಷ ಪಾಲ್ಛಾಟ್‌ ಮಣಿ ಅಯ್ಯರ್‌ ಅಂಥವರಿಗೆ ಅದು ಸಾಧಿತವಾಗಿತ್ತು. ಈ ಸಾಮರ್ಥ್ಯ ವಿಶೇಷದಿಂದಲೇ ವಾದಕನಾದವನಲ್ಲಿ ರಾಗದ ಭಾವವನ್ನೂ ಕೃತಿ ಭಾವವನ್ನೂ; ಮತ್ತೂ ಮುಂದಕ್ಕೆ ಹೋದರೆ ತಾಳದ (ಕಾಲದ) ಭಾವವನ್ನೂ ಅಭಿವ್ಯಕ್ತಿಸುವುದಕ್ಕೆ ಸಾಧ್ಯವಾಗುವುದು.

ತನಿ ಆವರ್ತನ ಎಂಬುದು ವಾದಕರ ಕೈಚಳಕವನ್ನು ತೋರಿಸುವ ಸಮಯ ಎಂಬುವುದು ಸರ್ವೇ ಸಾಮಾನ್ಯ ತಿಳಿವಳಿಕೆ. ಆದರೆ ನನಗಿದರಲ್ಲಿ ನಂಬಿಕೆ ಇಲ್ಲ. ತನಿ ಎಂದರೆ ಸಂತೋಷದಿಂದ, ವಿಲಾಸದಿಂದ ಸ್ವತಂತ್ರನಾಗಿ ನುಡಿಸುವುದು ಎಂದು ಅರ್ಥ. ಅದು ಬೆರಗೆಬ್ಬಿಸುವ ಬಡಿತವಾಗಬಾರದು. ಅದು ಹಾಡಿದ ಕೃತಿಯ ಭಾವದ ಪ್ರಭಾವಕ್ಕೆ ಒಳಪಟ್ಟು ಧ್ವನಿಸಬೇಕಾದ ಮೃದಂಗದ ಪಾಠಾಕ್ಷರಗಳಾಗಬೇಕು. ಕೃತಿಯ ಭಾವಾನುವಾದ ರೂಪ ಪ್ರಕಟವಾಗಬೇಕು. ಕಛೇರಿಯೊಂದರಲ್ಲಿ ತನಿ ಆವರ್ತನ ಶುರುವಾದದ್ದೇ ತಿಳಿಯಬಾರದೆಂದು ಪಾಲ್ಛಾಟ್‌ ರಘು ಅವರು ಹೇಳುತ್ತಾರೆ. ಅಂದರೆ ತನಿ ಮತ್ತು ಕೃತಿ ಬೇರೆ ಬೇರೆ ಎಂದಾಗಬಾರದು ಎಂದು. ವಾದನವು ಕೃತಿಗೆ ಹುಟ್ಟಿದಂತಿರಬೇಕು; ಕಟ್ಟಿದಂತಲ್ಲ.

Advertisement

ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next