ಚಂಡೀಗಢ: 16 ವರ್ಷ ವಯಸ್ಸಿನ ಮುಸ್ಲಿಂ ಸಮುದಾಯದ ಹುಡುಗಿಯರು ಮದುವೆಯಾಗಬಹುದು ಎಂದು ಪಂಜಾಬ್- ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮುಸ್ಲಿಂ ಹುಡುಗಿಯೊಬ್ಬಳ ಮದುವೆ ವಿಚಾರಕ್ಕೆ ನಡೆದ ವಿಚಾರಣೆಯ ವೇಳೆ ಕೋರ್ಟ್ ಈ ಅಭಿಪ್ರಾಯಪಟ್ಟಿದೆ.
ಪಠಾಣ್ ಕೋಟ್ ಮೂಲದ 16 ವರ್ಷದ ಹುಡುಗಿ ಮತ್ತು 21 ವರ್ಷದ ಹುಡುಗ ತಮ್ಮ ಮನೆಯವರಿಂದ ರಕ್ಷಣೆ ನೀಡಬೇಕು ಎಂದು ಕೋರ್ಟ್ ಮೊರೆಹೋಗಿದ್ದರು. ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾ.ಜಸ್ಜಿತ್ ಸಿಂಗ್ ಬೇಡಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
“ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಅವರು ಭಾರತದ ಸಂವಿಧಾನದಲ್ಲಿ ಕಲ್ಪಿಸಿದಂತೆ ಅವರ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.
ಇದನ್ನೂ ಓದಿ:ಆಕ್ಸಿಜನ್ ಕೊಡಲಾಗದವರು ಯೋಗ ಮಾಡಲು ಬಂದಿದ್ದಾರೆ: ಪ್ರಧಾನಿ ಭೇಟಿಗೆ ಸಿದ್ದು ವ್ಯಂಗ್ಯ
ಸರ್ ದಿನ್ಶಾಶ್ ಫರ್ದುಂಜಿ ಮುಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಅರ್ಜಿದಾರರ ಸಂಖ್ಯೆ 2 (ಹುಡುಗಿ) 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಅವರ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹವಾಗಲು ಸಮರ್ಥರು. ಈ ಪ್ರಕರಣದ ಅರ್ಜಿದಾರ ನಂ.1 (ಹುಡುಗ) ವಯಸ್ಸು 21 ವರ್ಷಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ಹೀಗಾಗಿ, ಇಬ್ಬರೂ ಅರ್ಜಿದಾರರು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯ ವಯಸ್ಸಿನವರು”ಎಂದು ನ್ಯಾಯಾಧೀಶರು ಹೇಳಿದರು.
ಅಲ್ಲದೆ ದಂಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಪಠಾಣ್ ಕೋಟ್ ಗೆ ನ್ಯಾಯಪೀಠ ನಿರ್ದೇಶನ ನೀಡಿದೆ.