Advertisement
ಆರಂಭದ ದಿನ ಸರಿಗಮಭಾರತಿ ಸಂಗೀತ ವಿದ್ಯಾಲಯದ ಮಕ್ಕಳಿಂದ ದೇವರನಾಮಗಳ ಪ್ರಸ್ತುತಿಯು ನಡೆಯಿತು. ಬಳಿಕ ಚೆನ್ನೈಯ ವಿದ್ಯಾ ಕಲ್ಯಾಣಿ ರಾಮನ್ ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ಒಳ್ಳೆಯ ಮನೋಧರ್ಮ ಹೊಂದಿ ರುವ ವಿದ್ಯಾ ಕಲ್ಯಾಣ ರಾಮನ್ ತಮ್ಮ ಕಛೇರಿಯಲ್ಲಿ ಪ್ರಧಾನವಾಗಿ ಬೈರವಿ ರಾಗವನ್ನು ಒಳ್ಳೆಯ ಸುಭಗವಾದ ಶೈಲಿಯಲ್ಲಿ ನಿರೂಪಿಸಿದರು. ಇದಲ್ಲದೆ “ಜಯ ಜಯಾ’, “ವರವ ಕೊಡು ಎನಗೆ’, “ಸಂತಾನ ಗೋಪಾಲಕೃಷ್ಣ’, “ಬಾರೋ ಕೃಷ್ಣಯ್ಯ’ ದೇವರನಾಮವನ್ನೂ ಮನೋಜ್ಞವಾಗಿ ನಿರೂಪಿಸಿದರು. ಇವರಿಗೆ ರಾಹುಲ್ ವಯಲಿನ್ ಸಾಥಿ ಒದಗಿಸಿದರು. ಮೃದಂಗದಲ್ಲಿ ಸ್ವಾಮಿನಾಥನ್ ಸಹಕರಿಸಿದರು.
Related Articles
Advertisement
ಸಂಜೆಯ ಪ್ರಧಾನ ಕಛೇರಿಯಲ್ಲಿ ಬೆಂಗಳೂರಿನ ಪೂರ್ಣಿಮಾ ಕುಲಕರ್ಣಿ ಅವರು ತಮ್ಮ ಸುಶ್ರಾವ್ಯವಾದ ಶಾರೀರದಿಂದ ಪಂಡಿತ ಪಾಮರರನ್ನು ಸಮಾನವಾಗಿ ರಂಜಿಸಿದರು. ಇವರಿಗೆ ಭರತ್ ಹೆಗ್ಡೆ ಹಾರೊನಿಯಂನಲ್ಲೂ ರಂಗ ಪೈಯವರು ತಬ್ಲಾದಲ್ಲೂ ನಂದಿತಾ ಪೈಯವರು ತಾನ್‌ಪುರದಲ್ಲಿಯೂ ನಾಗರಾಜ್ ಶೇಟ್ ಅವರು ತಾಳದಲ್ಲಿಯೂ ಸಹಕರಿಸಿದರು. ಉತ್ಸವದ ಕೊನೆಯ ದಿನ ಬೆಳಗ್ಗೆ ವಾದಿರಾಜ-ಕನಕದಾಸ ಕೀರ್ತನ ಸ್ಪರ್ಧೆಯಲ್ಲಿ ಬಹುಮಾನ ಪಡೆದವರಿಂದ ಕೃತಿ ಪ್ರಸ್ತುತಿ ಕಾರ್ಯಕ್ರಮ ನಡೆಯಿತು. ಆ ಬಳಿಕ ಪೂರ್ವಾಹ್ನದ ಪ್ರಧಾನ ಕಛೇರಿ ಯಲ್ಲಿ ಕಾಣಿಸಿಕೊಂಡವರು ಬೆಂಗಳೂರಿನ ವಿವೇಕ ಸದಾಶಿವಂ ಮತ್ತು ಬಳಗದವರು. ವಯಲಿನ್‌ನಲ್ಲಿ ಬೆಂಗಳೂರಿನ ಅಚ್ಯುತರಾವ್ ಮತ್ತು ಮೃದಂಗದಲ್ಲಿ ನಿಕ್ಷಿತ್ ಟಿ. ಪುತ್ತೂರು, ಖಂಜೀರದಲ್ಲಿ ಬೆಂಗಳೂರಿನ ಕಾರ್ತಿಕ್ ಅವರು ಉತ್ತಮವಾಗಿ ಸಹಕರಿಸಿದರು. ಎರಡು ಸ್ಥಾಯಿಗಳಲ್ಲಿ ಸುಲಲಿತವಾಗಿ ಸಂಚರಿಸಬಲ್ಲ ಅಮೋಘ ಶಾರೀರ, ಅದನ್ನು ಉಜ್ವಲವಾಗಿ ಬೆಳಗಿಸಬಲ್ಲ ಮನೋಧರ್ಮ, ಮುಕುಟಪ್ರಾಯವಾಗಿ ನಿಲ್ಲುವ ಕೃತಿ ಇವು ವಿವೇಕ ಸದಾಶಿವಂ ಅವರ ಕಛೇರಿಯನ್ನು ಬಹು ಎತ್ತರಕ್ಕೆ ಒಯ್ದ ಪರಿಕರಗಳು. ಕೃತಿಗಳ ಆಯ್ಕೆ, ರಾಗಗಳ ಆಯ್ಕೆ, ವಿಭಿನ್ನ ತಾಳಗಳು ಬರುವಂತಹ ಜಾಣ್ಮೆ ಎಲ್ಲವೂ ಮೇಳೈಸಿದಾಗ ಯಾವ ಬಗೆಯ ಅನುಭೂತಿಯನ್ನು ಕೊಡಬಹುದು ಎಂಬುದಕ್ಕೆ ಈ ಕಛೇರಿ ಸಾಕ್ಷಿ. ಚಾರುಕೇಶಿ ರಾಗವನ್ನು ಪ್ರಧಾನ ರಾಗ ವಾಗಿ ಆಯ್ದುಕೊಂಡ ವಿವೇಕ್ ಅವರು ತಮ್ಮ ಕಛೇರಿಯಲ್ಲಿ ಕೃಪಯಾ ಪಾಲಯ ಶೌರೇ ಕೃತಿಯನ್ನು ಸೊಗಸಾಗಿ ಪ್ರಸ್ತುತಪಡಿಸಿದರು.
ಅಪರಾಹ್ನದ ಮೊದಲ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕು| ಧನ್ಯಾ ದಿನೇಶ್ ಅವರು ಸಾವೇರಿ ರಾಗವನ್ನು ಹಾಡಿದರು. ವಯಲಿನ್‌ನಲ್ಲಿ ವೇಣುಗೋಪಾಲ್ ಶ್ಯಾನುಭೋಗ್ ಮತ್ತು ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್ಯ ಉತ್ತಮ ಸಹಕಾರ ನೀಡಿದರು.
ಅಪರಾಹ್ನದ ಎರಡನೆಯ ಕಛೇರಿಯಲ್ಲಿ ಕಾಣಿಸಿಕೊಂಡವರು ಚೆನ್ನೈನ ಐಶ್ವರ್ಯಾ ಶಂಕರ್. ಖರಹರಪ್ರಿಯ ರಾಗವನ್ನು ಪ್ರಧಾನ ರಾಗವಾಗಿ ಆರಿಸಿಕೊಂಡು ಒಳ್ಳೆಯ ಪೋಷಕ ಅಂಶಗಳೊಂದಿಗೆ ವಿಸ್ತರಿಸಿ ಕಛೇರಿಯನ್ನು ಉತ್ತಮ ಮಟ್ಟಕ್ಕೆ ಒಯ್ಯುವಲ್ಲಿ ಕಲಾವಿದೆ ಯಶಸ್ವಿಯಾದರು. ಬೆಂಗಳೂರಿನ ಅಚ್ಯುತರಾವ್ ವಯಲಿನ್‌ನಲ್ಲಿಯೂ ಬಿ.ಎಸ್. ಪ್ರಶಾಂತ್ ಅವರು ಮೃದಂಗದಲ್ಲಿಯೂ ಉತ್ತಮವಾದ ಸಹಕಾರ ನೀಡಿದರು.
ಕೊನೆಯ ಕಛೇರಿಯನ್ನು ಚೆನ್ನೈಯ ಕಾರ್ತಿಕ್ ನಾರಾಯಣ್ ನಡೆಸಿಕೊಟ್ಟರು. ಪ್ರಧಾನ ರಾಗವಾಗಿ ಶಂಕರಾಭರಣ ಎತ್ತಿಕೊಂಡು ಒಳ್ಳೆಯ ವಿಸ್ತಾರ ಒದಗಿಸಿ ಪ್ರೌಢ ಮಟ್ಟದ ಕೃತಿ ವಿಸ್ತಾರದಿಂದ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದರು. ಪ್ರತೀ ವರ್ಷವೂ ನಡೆಯುವ ವಾದಿರಾಜ- ಕನಕದಾಸ ಉತ್ಸವವು ಉಡುಪಿಯ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಡಿ ಬರುತ್ತಿರುವುದು ಸಂತೋಷದ ವಿಚಾರ.
ನಾಸಿಕಾಭೂಷಿಣಿ