ಕಲಬುರಗಿ: ಸಂಗೀತದ ತಿಳಿವು ಮತ್ತು ತಾಳ, ರಾಗದಲ್ಲಿ ತನ್ಮಯ ಆಗುವುದರಿಂದ ಉತ್ತಮ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಸಾಧ್ಯ ಎಂದು ನಗರ ಡಿಸಿಪಿ ಅಡೂರು ಶ್ರೀನಿವಾಸಲು ಹೇಳಿದರು.
ನಗರದ ರಂಗಮಂದಿರದಲ್ಲಿ ರವಿವಾರ ಮಹಾತ್ಮಗಾಂಧಿ ಕಲೆ ಮತ್ತು ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ “ಬಾ ಹಾಡಿ ಕುಣಿಯೋಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಿನ ಮಕ್ಕಳಲ್ಲಿನ ಎನರ್ಜಿ ಲೆವಲ್ ತುಂಬಾ ಇದೆ. ಅವರಿಗೆ ಜಸ್ಟ್ ಹೀಗೆ ಮಾಡಬೇಕು ಎನ್ನುವ ಮಾರ್ಗದರ್ಶನವನ್ನು ಮಾತ್ರ ನಾವು ಕೊಡಬೇಕಿದೆ. ಉಳಿದಿದ್ದನ್ನು ತುಂಬಾ ಜಾಣ್ಮೆ ಮತ್ತು ಆಸಕ್ತಿಯಿಂದ ಕಲಿಯುತ್ತಾರೆ. ಯಾವ ಮಕ್ಕಳಲ್ಲಿ ಸಂಗೀತ ತಿಳಿವು ಇರುತ್ತದೋ ಅಂತಹ ಮಕ್ಕಳಿಂದ ಸಮಾಜಕ್ಕೆ ಯಾವುದೇ ಹಾನಿ ಇಲ್ಲ ಎಂದರು.
ಅಂತಹ ಮಕ್ಕಳಲ್ಲಿ ಮಾನವೀಯ ಮೌಲ್ಯ, ಸ್ನೇಹಮಯ ಮನಸ್ಸು, ಶಾಂತ ಸ್ವಭಾವದಿಂದ ಇದ್ದಾಗ ಅವರಿಂದ ಇತರೆ ಯಾರಿಗೆ ಆದರೂ ಏನೂ ತೊಂದರೆ ಆಗುವುದಿಲ್ಲ ಎಂದರು.
ಅತಿಥಿಯಾಗಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಮಕ್ಕಳು ತುಂಬಾ ಪ್ರತಿಭಾಶಾಲಿಗಳಾಗಿದ್ದಾರೆ. ಅವರಲ್ಲಿ ಜನ್ಮತಃ ಪರಿಸರದ ಜತೆಗಿನ ನಂಟು ಬೆಳೆದಂತೆ ಕಂಡು ಬರುತ್ತದೆ. ತುಂಬಾ ಜಾಣರಾಗಿದ್ದು, ಎಲ್ಲವನ್ನು ಕಲಿಯುವ ಗುಣವಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿನ ಪ್ರತಿಭೆಗೆ ಹೊಳಪು ಸಿಗಲಿದೆ ಎಂದರು.
ಉದ್ಯಮಿ ಅನಿಲ ಕಳಸ್ಕರ್, ಕಿರಣ ಶಟಗಾರ್, ಶಿವರಾಜ್ ಪಾಟೀಲ, ನಾರಾಯಣ ಎಸ್., ಬಸವರಾಜ ಪಾಟೀಲ, ಜೈಸಿಂಗ್ ಜಾಧವ, ಶ್ರೀಮತಿ ಹಿರೇಮಠ ಇತರರು ಇದ್ದರು. ಸಂಘದ ಅಧ್ಯಕ್ಷ ಜಿ.ಕೆ.ಮಾಲಿ ಬಿರಾದಾರ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ ಕಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.