Advertisement

ಅಕ್ರಮ ಮರಂ ಸಾಗಣೆ ಮತ್ತೆ ಶುರು

12:49 PM Oct 11, 2021 | Team Udayavani |

ಮಸ್ಕಿ: ಬೃಹತ್‌ ಹಿಟಾಚಿ ಬಳಸಿ ನೂರಾರು ಲಾರಿಗಳಲ್ಲಿ ಅಕ್ರಮವಾಗಿ ಮರಂ ಸಾಗಣೆ ಮಾಡಲಾಗುತ್ತಿತ್ತು. ಖುದ್ದು ತಹಶೀಲ್ದಾರ್‌ ದಾಳಿ ಬಳಿಕವೇ ಇದೆಲ್ಲವೂ ಬಹಿರಂಗವಾಗಿತ್ತು. ಈಗ ಪುನಃ ಅಕ್ರಮ ಮರಂ ಸಾಗಣೆ ರಾಜಾರೋಷವಾಗಿ ನಡೆಸಿದ್ದಾರೆ!.

Advertisement

ಮಸ್ಕಿ ಪಟ್ಟಣದ ಹೊರವಲಯ ಸೇರಿ ಹಲವು ಕಡೆಗಳಲ್ಲಿ ನೂರಾರುಲಾರಿಗಳು ಹಲವು ದಿನಗಳಿಂದ ನಿತ್ಯವೂ ಅಕ್ರಮವಾಗಿ ಮರಂ ಸಾಗಿಸುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಎಲ್ಲೂ ಮರಂ ಕ್ವಾರಿ ಗುರುತು ಮಾಡಿ ಹರಾಜು ಹಾಕಿಲ್ಲ. ಪಟ್ಟಾಭೂಮಿಯಲ್ಲೂ ಮರಂ ಎತ್ತುವಳಿಗೆ ಸರಕಾರಕ್ಕೆ ರಾಜಧನ (ರಾಯಲ್ಟಿ) ಪಾವತಿ ಮಾಡಿ ಪರವಾನಗಿ ಪಡೆದಿಲ್ಲ. ಆದರೂ ಈ ಲಾರಿಗಳು ಇಲ್ಲಿ ಸಲೀಸಾಗಿ ಅಕ್ರಮ ಮರಂ ಹೊತ್ತು ಸಾಗುತ್ತವೆ. ಅಧಿಕಾರಿಗಳು ಈ ಲಾರಿಗಳನ್ನು ತಡೆದು ನಿಲ್ಲಿಸುವ ಸಾಹಸ ಮಾಡುತ್ತಿಲ್ಲ. ಆದರೆ ಈಚೆಗೆ ತಹಶೀಲ್ದಾರ್‌ ದಾಳಿ ಮಾಡಿ ವಾಹನಗಳನ್ನು ಜಪ್ತಿ ಮಾಡಿದ್ದರು. ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದವರ ಮೇಲೆ ಕಾನೂನಿನ ಅಸ್ತ್ರ ಪ್ರಯೋಗ ಭರವಸೆ ಮೂಡಿಸಿದ್ದರು. ಆದರೆ ಈಗ ಮತ್ತದೇ ಕಾರ್ಯ ಶುರುವಾಗಿದೆ.

73 ಸಾವಿರ ದಂಡ

ಮಸ್ಕಿ ಹೋಬಳಿ ವ್ಯಾಪ್ತಿಯ ಅಂತರಗಂಗಿ ಸೀಮಾದಲ್ಲಿ ಅಕ್ರಮ ಮರಳು ಎತ್ತುವಳಿ ವೇಳೆ ತಹಸೀಲ್ದಾರ್‌ ಕವಿತಾ ಆರ್‌.ದಾಳಿ ಮಾಡಿ ಹಿಟಾಚಿ, ಎರಡು ಲಾರಿಗಳನ್ನು (ಮರಂ ಸಮೇತ) ವಶಕ್ಕೆ ಪಡೆದಿದ್ದರು (ಉಳಿದ ಲಾರಿ ಪರಾರಿಯಾಗಿದ್ದವು) ಆದರೆ ಜಪ್ತಿಯಾದ ವಾಹನಗಳಿಗೆ 73 ಸಾವಿರ ರೂ. ದಂಡ ವಿ ಧಿಸಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖಾತೆಗೆ ಈ ದಂಡದ ಮೊತ್ತ ಭರ್ತಿ ಮಾಡಿದ್ದರ ಕುರಿತು ರಶೀದಿ ತೋರಿಸಿ ಪೊಲೀಸ್‌ ಠಾಣೆಯಿಂದ ಈ ವಾಹನಗಳನ್ನು ಬಿಡುಗಡೆ ಮಾಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ರಕ್ತ ನಿಧಿ ಪ್ರಾರಂಭ ಕನಸು ನನಸಾಗುವುದೇ?

Advertisement

ಪುನಃ ಆರಂಭ

ಜಪ್ತಿಯಾದ ವಾಹನಗಳು ಹೊರ ಬರುತ್ತಿದ್ದಂತೆಯೇ ತಡ ನೈಸರ್ಗಿಕ ಸಂಪತ್ತು ಲೂಟಿಕೋರರು ಪುನಃ ಮಣ್ಣು ಲೂಟಿ ಮಾಡುವ ಕೆಲಸ ಪುನರಾರಂಭಿಸಿದ್ದಾರೆ. ಅದೇ ಜಾಗದಿಂದ ನೂರಾರು ಲಾರಿಗಳಲ್ಲಿ ಮತ್ತೆ ಮರಂ ಸಾಗಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಮಸ್ಕಿ ಪಟ್ಟಣದ ಹೃದಯ ಭಾಗ ಪೊಲೀಸ್‌ ಠಾಣೆ ಎದುರಿನ ರಸ್ತೆಯಲ್ಲಿಯೇ ಅಕ್ರಮ ಮರಂ ಹೊತ್ತ ಲಾರಿಗಳು ಓಡಾಡುತ್ತಿವೆ.ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ  ಶಾಶ್ವತ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಕ್ಷೇತ್ರದ ಜನರು.

ಅಕ್ರಮ ಮರಂ ಸಾಗಿಸಿದವರಿಗೆ ನೋಟಿಸ್‌ ನೀಡಲಾಗಿದೆ. ಜಪ್ತಿ ಮಾಡಿದ ವಾಹನಗಳಿಗೆ ದಂಡ ವಿ ಧಿಸಲಾಗಿದೆ. ಪುನಃ ಮಣ್ಣು ಸಾಗಿಸುತ್ತಿರುವ ಕುರಿತು ದೂರು ಬಂದಿವೆ. ಕ್ರಮ ಕೈಗೊಳ್ಳಲು ಅ ಧಿಕಾರಿಗಳಿಗೆ ಸೂಚನೆ ನೀಡಿರುವೆ.

ಕವಿತಾ ಆರ್‌  ತಹಶೀಲ್ದಾರ್‌ ಮಸಿ

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next