Advertisement

ಮುರುಘಾ ಶರಣರ ವಿರುದ್ಧದ ದೂರಿನ ವಿಚಾರಣೆ ಆರಂಭ

10:56 PM Aug 28, 2022 | Team Udayavani |

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಪೀಠಾಧ್ಯಕ್ಷರಾದ ಡಾ| ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾದ ದೂರಿನ ವಿಚಾರಣೆ ಆರಂಭಗೊಂಡಿದೆ.

Advertisement

ಸುದ್ದಿ ಹಬ್ಬಿದ ಬಳಿಕ ನಾನಾ ಕಡೆಗಳಿಂದ ಭಕ್ತರು, ಸ್ವಾಮೀಜಿಗಳ ಹಿತೈಷಿಗಳು, ಜನಪ್ರತಿನಿಧಿಗಳು ರವಿವಾರ ಮಠಕ್ಕೆ ಆಗಮಿಸಿ ಶ್ರೀಗಳ ಜತೆ ಮಾತುಕತೆ ನಡೆಸಿದ್ದಾರೆ. ಶ್ರೀಗಳ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಭಕ್ತರು ಪ್ರತಿಭಟನೆ ಯನ್ನೂ ನಡೆಸಿದ್ದಾರೆ.

ಶನಿವಾರ ರಾತ್ರಿ ಮಠದ ಆಡಳಿತಾಧಿಕಾರಿಯೊಂದಿಗೆ ಕೆಲವರು ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಕುತೂಹಲ ಮೂಡಿಸಿದೆ.

ಹೇಳಿಕೆ ದಾಖಲು-ವೈದ್ಯಕೀಯ ಪರೀಕ್ಷೆ
ಮುರುಘಾ ಶರಣರ ವಿರುದ್ಧ ದೂರು ದಾಖಲಿಸಿದ್ದ ಬಾಲಕಿಯರನ್ನು ಒಡನಾಡಿ ಸಂಸ್ಥೆಯ ಪ್ರತಿನಿಧಿ, ಪೊಲೀ ಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಶನಿವಾರ ತಡರಾತ್ರಿ ವೇಳೆಗೆ ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆತಂದರು. ಬಾಲಕಿಯರನ್ನು ಬಿಗಿ ಪೊಲೀಸ್‌ ಬಂದೋಬಸ್ತ್ ನಲ್ಲಿ ಇಲ್ಲಿನ ಬಾಲ ಮಂದಿರದಲ್ಲಿ ಇರಿಸಲಾಗಿತ್ತು.

ರವಿವಾರ ದೂರಿನ ವಿಚಾರಣೆ ಆರಂಭಿಸಲಾಗಿದ್ದು, ಬೆಳಗ್ಗೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಪಿಎಸ್‌ಐ ಸತತ ನಾಲ್ಕು ತಾಸುಗಳ ಕಾಲ ಮಕ್ಕಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡರು. ಅನಂತರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಜಿಲ್ಲಾಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಅವರ ಪೋಷಕರನ್ನೂ ಕರೆಸಿಕೊಂಡು ಹೇಳಿಕೆಗಳನ್ನು ಪಡೆದುಕೊಳ್ಳಲಾಯಿತು.

Advertisement

ಮಕ್ಕಳಿಂದ ಹೇಳಿಕೆ ಪಡೆದುಕೊಳ್ಳುವ ವೇಳೆ ಒಡನಾಡಿ ಸಂಸ್ಥೆಯ ಪ್ರತಿನಿಧಿಯನ್ನು ಹೊರಗಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಕೊನೆಗೆ ಮಕ್ಕಳ ಅಪೇಕ್ಷೆಯಂತೆ ಒಡನಾಡಿ ಪ್ರತಿನಿಧಿಯ ಸಮ್ಮುಖದಲ್ಲೇ ಮಕ್ಕಳಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು ಎಂದು ತಿಳಿದುಬಂದಿದೆ.

ಬಾಲಕಿಯರನ್ನು ವಿಚಾರಣೆಗೆ ಒಳಪಡಿಸುವ ಮುನ್ನ ಬಾಲ ಮಂದಿರದ ಹೊರಭಾಗದಲ್ಲಿ ನೆರೆದಿದ್ದ ಸಾರ್ವಜನಿಕರ ಗುಂಪೊಂದು “ಹೆದರಬೇಡಿ, ನಿಮ್ಮ ಜತೆ ನಾವಿದ್ದೇವೆ, ದಲಿತ ಸಮಾಜವಿದೆ’ ಎಂದು ಘೋಷಣೆ ಕೂಗಿತಲ್ಲದೆ, “ಯಾವುದಕ್ಕೂ ಹೆದರದೆ ಏನು ನಡೆದಿದೆಯೋ ಅದನ್ನು ಹೇಳಿ’ ಎಂದು ಧೈರ್ಯ ತುಂಬಿತು ಎನ್ನಲಾಗಿದೆ.

ಬಿರುಸಿನ ಚಟುವಟಿಕೆ
ಇನ್ನೊಂದೆಡೆ ಮಠದೊಳಗೆ ಬಿರುಸಿನ ಚಟುವಟಿಕೆಗಳು ನಡೆದವು. ಬೆಳಗ್ಗೆ ಏಳು ಗಂಟೆಯಿಂದಲೇ ಭಕ್ತರು, ಶ್ರೀಗಳ ಅಭಿಮಾನಿಗಳು, ಮಠದ ಸಿಬಂದಿ ಆಗಮಿಸುತ್ತಿದ್ದರು. ಶ್ರೀಗಳ ಜತೆಗೆ ಹಲವು ದಶಕಗಳಿಂದ ಒಡನಾಟ ಹೊಂದಿದ್ದವರೂ, ಮಠದ ಪರಮ ಭಕ್ತರೂ ಆಗಮಿಸಿ ಶ್ರೀಗಳನ್ನು ಮಾತನಾಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಶ್ರೀಗಳ ಪರ ಪ್ರತಿಭಟನೆ
ಶ್ರೀಗಳ‌ ವಿರುದ್ಧ ದೂರು ದಾಖಲಾದ ಸುದ್ದಿ ಹಬ್ಬುತ್ತಿದ್ದಂತೆ ವಿವಿಧೆಡೆಯಿಂದ ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ. ಇದೇ ವೇಳೆ ದಾವಣಗೆರೆಯಿಂದ ಮಠಕ್ಕೆ ಆಗಮಿಸಿದ್ದ ಭಕ್ತರ ತಂಡವೊಂದು ಶ್ರೀಗಳ ಪರ ಘೋಷಣೆ ಕೂಗಿ ಇದೊಂದು ಷಡ್ಯಂತ್ರ ಎಂದು ಆರೋಪಿಸಿ ಇದರ ಹಿಂದಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಈ ಪ್ರಕರಣದಲ್ಲಿ ಶ್ರೀಗಳನ್ನು ಬಂಧಿ ಸದೆ ವಿಚಾರಣೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ಸಿದ್ದಾಪುರದಲ್ಲಿ ಗೌಪ್ಯಸಭೆ..?
ಇದೇ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ತಡರಾತ್ರಿ ಗೌಪ್ಯಸಭೆ ನಡೆದಿದೆ ಎನ್ನಲಾಗಿದ್ದು, ಇದು ಕುತೂಹಲ ಮೂಡಿಸಿದೆ. ಶನಿವಾರ ಇಡೀ ದಿನ ಮಠದಲ್ಲಿ ಸರಣಿ ಸಭೆಗಳ ಅನಂತರ ಮಠದ ಭಕ್ತರು, ಶ್ರೀಗಳ ಆಪ್ತರು, ವೀರಶೈವ ಸಮಾಜದ ಮುಖಂಡರು ನಗರದ ಹೊರವಲಯದ ಸಿದ್ದಾಪುರ ಗ್ರಾಮದಲ್ಲಿ ಮಠದ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಬಸವರಾಜನ್‌ ಅವರ ಜತೆಗೆ ಸಭೆ ನಡೆಸಿ ಸಂಧಾನ ನಡೆಸುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ. ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಮಠಕ್ಕೆ ಉದ್ಯಮಿ ವೀರೇಂದ್ರ ಪಪ್ಪಿ ಮತ್ತಿತರ ಮುಖಂಡರು ಆಗಮಿಸಿ ಇಲ್ಲಿಂದ ರಹಸ್ಯ ಸ್ಥಳಕ್ಕೆ ತೆರಳಿದರು. ಮುರುಘಾ ಶರಣರು ಹಾಗೂ ಬಸವರಾಜನ್‌ ನಡುವಿನ ಮುನಿಸಿನ ಕಾರಣಕ್ಕೆ ಇಷ್ಟೆಲ್ಲ ನಡೆಯುತ್ತಿದ್ದು, ಬಸವರಾಜನ್‌ ಅವರನ್ನು ಸಮಾಧಾನಪಡಿಸಿದರೆ ಪ್ರಕರಣ ಸುಖಾಂತ್ಯವಾಗಬಹುದು ಎಂದು ಸಭೆ ನಡೆಸಲಾಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next