ವಿಧಾನಪರಿಷತ್ತು: ಅರ್ಕಾವತಿ ಬಡಾವಣೆ ನಿರ್ಮಾಣ ಉದ್ದೇಶದ ಜಮೀನನ್ನು ಮೆಟ್ರೋ ಕಾಮಗಾರಿಗೆ ಸ್ವಾಧೀನಪಡಿಸಿಕೊಳ್ಳಲು ಭೂಮಾಲೀಕರೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ 22 ಕೋಟಿ ರೂ. ಪರಿಹಾರ ನೀಡಿರುವ ವಿಚಾರದಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮತ್ತು ಜೆಡಿಎಸ್‌ನ ಮರಿತಿಬ್ಬೇಗೌಡ ಏಕವಚನದಲ್ಲಿ ಬೈದಾಡಿಕೊಂಡ ಪ್ರಸಂಗಕ್ಕೆ ಮಂಗಳವಾರ ಮೇಲ್ಮನೆ ಸಾಕ್ಷಿಯಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಮರಿತಿಬ್ಬೇಗೌಡರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ, ಪರಿಹಾರ ಧನ ಹಿಂಪಡೆಯುವ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದರು. ಇದರಿಂದ ಕೆರಳಿದ ಮರಿತಿಬ್ಬೇಗೌಡ, ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುವ ಯೋಗ್ಯತೆ ಸರ್ಕಾರಕ್ಕಿಲ್ಲ ಎಂದರು. ಸದಸ್ಯರು ಮಿತಿದಾಟಿ ಮಾತನಾಡುತ್ತಿದ್ದಾರೆ. ಯಾವ ರೀತಿ ಮಾತನಾಡಬೇಕೆಂಬ ಯೋಗ್ಯತೆ ಅವರಿಗಿಲ್ಲ. ನಾಚಿಕೆಯಾಗಬೇಕು ಎಂದು ನಿರಾಣಿ ತಿರುಗೇಟು ನೀಡಿದರು.
ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡವರಂತೆ ಏರು ಧ್ವನಿಯಲ್ಲಿ ಮರಿಬ್ಬೇಗೌಡ ಮಾತನಾಡಿದರು. ಅದಕ್ಕೆ, ನಾನು ಉತ್ತರ ಕರ್ನಾಟಕದವನು, ನಿಮಗಿಂತ ಜೋರಾಗಿ ಮಾತನಾಡಲು ಬರುತ್ತದೆ ಎಂದು ನಿರಾಣಿ ಎಚ್ಚರಿಕೆ ನೀಡಿದರು. ಈ ವೇಳೆ ಇಬ್ಬರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡರು. ಕಾಂಗ್ರೆಸ್ ಸದಸ್ಯರು ಮರಿತಿಬ್ಬೇಗೌಡರ ಬೆಂಬಲಕ್ಕೆ ನಿಂತರೆ, ಬಿಜೆಪಿ ಸದಸ್ಯರು ಸಚಿವ ನಿರಾಣಿ ಬೆನ್ನಿಗೆ ನಿಂತರು. ಈ ವೇಳೆ ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಉತ್ತರಕ್ಕೆ ಪಟ್ಟು ಹಿಡಿದು ಮರಿತಿಬ್ಬೇಗೌಡ ಸದನದ ಬಾವಿಗಿಳಿದು ಧರಣಿಗೆ ಮುಂದಾದರು.
ಸಿಟ್ಟಾದ ಸಭಾಪತಿ ಹೊರಟ್ಟಿ ಸದನ ನಡೆಸಲು ನಿಯಮಗಳಿವೆ, ಅದನ್ನು ಎಲ್ಲರೂ ಪಾಲಿಸಬೇಕೆಂದು ತಾಕೀತು ಮಾಡಿದರು.
ಸಚಿವರಿಂದ ಉತ್ತರ ಕೊಡಿಸಿಬಿಡಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಲಹೆ ನೀಡಿದರು.ಸಭಾಪತಿ ಪಟ್ಟು ಸಡಿಲಿಸಲಿಲ್ಲ. ಮಧ್ಯಪ್ರವೇಶಿಸಿದ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಸದಸ್ಯರು ಸಚಿವರ ಕುರಿತು ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಗೆ ಅವಕಾಶ ಕೊಡಬೇಡಿ ಎಂದು ಸಭಾಪತಿಯವರಿಗೆ ಹೇಳಿದರು. ಇದರಿಂದ ಆಕ್ರೋಶಗೊಂಡ ಹರಿಪ್ರಸಾದ್, ನೀವು ಸಭಾಪತಿಗಳಾ, ಸದನ ನೀವು ನಡೆಸುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಇಬ್ಬರ ನಡುವೆ ಜಟಾಪಟಿ ನಡೆಯಿತು. “ಏನೂ ಮಾಡಕ್ಕಾಗಲ್ಲ’ ಎಂಬ ವೈ.ಎ.ನಾರಾಯಣಸ್ವಾಮಿ ಮಾತಿನಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಏನು ಮಾಡಕ್ಕಾಗುತ್ತದೆಂದು ತೋರಿಸುತ್ತೇವೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಈಗಾಗಲೇ ಬೇರೆ ಪ್ರಶ್ನೆ ಕರೆದಿದ್ದೇನೆ. ಮತ್ತೆ ಮರಿತಿಬ್ಬೇಗೌಡರಿಗೆ ಅವಕಾಶ ನೀಡಲ್ಲ. ಬೇಕಿದ್ದರೆ ಬೇರೆ ನಿಮಯದಡಿ ಅವರು ನೋಟಿಸ್ ಕೊಟ್ಟರೆ ನಾಳೆ ಅಥವಾ ನಾಡಿದ್ದು ಅವಕಾಶ ಕೊಡುತ್ತೇನೆಂದು ಸಭಾಪತಿ ಭರವಸೆ ನೀಡಿದರು. ಇದರಿಂದ ಕಾಂಗ್ರೆಸ್ ಸದಸ್ಯರು ಧರಣಿ ವಾಪಸ್ ಪಡೆದರು.