Advertisement

ಕೆಐಎಡಿಬಿಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ : ನಿರಾಣಿ 

07:37 PM Feb 15, 2022 | Team Udayavani |

ಬೆಂಗಳೂರು :  ಬೆಂಗಳೂರಿನ ಆಚೆಗೂ  ಕೈಗಾರಿಕಾ ಪ್ರದೇಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಎಂಟು ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ  ಅವರು ಘೋಷಿಸಿದರು.

Advertisement

ಮಂಗಳವಾರ ವಿದಾನಪರಿಷತ್‍ನಲ್ಲಿ ಜೆಡಿಎಸ್ ಸದಸ್ಯ ರಮೇಶ್‍ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಅವರು, 2022-23ರಲ್ಲಿ  ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಇದರಲ್ಲಿ ಪ್ರಮುಖವಾಗಿ ರಾಮನಗರದ ಹಾರೋಹಳ್ಳಿ 5ನೇ ಹಂತ,  ಚಿಕ್ಕಬಳ್ಳಾಪುರದ ಗೌರಿಬಿದನೂರು 3ನೇ ಹಂತ, ತುಮಕೂರಿನ ಮಧುಗಿರಿ ಕೈಗಾರಿಕಾ ಪ್ರದೇಶ, ಕೋಲಾರದ ಜಕ್ಕಸಂದ್ರ 2ನೇ ಹಂತ, ಮಂಡ್ಯದ ಕುದುರೆಗುಂಡಿ ಕೈಗಾರಿಕಾ ಪ್ರದೇಶ, ಹಾಸನದ ಅರಸೀಕೆರೆ ಕೈಗಾರಿಕಾ ಪ್ರದೇಶ, ಹಾಸನ ಮತ್ತು ಯಾದಗಿರಿಯ ಕಡೇಚೂರು 2ನೇ  ಹಂತ,   ಓಬಳಾಪುರ ಕೈಗಾರಿಕಾ ಪ್ರದೇಶವನ್ನು  ಅಭಿವೃದ್ಧಿ ಪಡಿಸಲಿದೆ ಎಂದು  ಹೇಳಿದರು.

ಈ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾದರೆ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹರಿದುಬರಲಿದ್ದು, ಕೈಗಾರಿಕೆಗಳ ಪುನಶ್ಚೇತನ ಮತ್ತು  ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಜೆಡಿಎಸ್  ಸದಸ್ಯ  ಕೆ.ಟಿ.ಶ್ರೀಕಂಠೇಗೌಡ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿಯವರು, ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು   ನವೆಂಬರ್ 2 ರಿಂದ 4, 2022 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು  ಪ್ರಕಟಿಸಿದರು.

Advertisement

ಕರ್ನಾಟಕವು ಈವರೆಗೆ ಒಟ್ಟು 1,02,866 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸಿದೆ.  2021 ರ ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 46ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ  ಕೈಗಾರಿಕಾ  2020-25  ನೀತಿಯನ್ನು ಜಾರಿಗೆ  ತಂದಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ

ಬೆಂಗಳೂರು ನಗರ, ಮುಂಬೈ,ಗುಜರಾತ್ ಸೇರಿದಂತೆ ವಿವಿಧ ಭಾಗಗಳಲ್ಲಿ  ಮೈಸೂರ್ ಲ್ಯಾಂಪ್ ಲಿಮಿಟೆಡ್‍ಗೆ 249.10 ಕೋಟಿ  ಆಸ್ತಿಯಿದ್ದು, ಎನ್‍ಜಿಇಎಫ್ ಲಿ.,ನ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಆದರೆ, ಇದನ್ನು ಪರಭಾರೆ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ  ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು ಲ್ಯಾಂಪ್ಸ್‍ಗೆ ನಗರದ ಮಲ್ಲೇಶ್ವರಂನ ಪಶ್ಚಿಮ ಹಳೇ ತುಮಕೂರು ರಸ್ತೆಯಲ್ಲಿ 21 ಎಕರೆ 6.73 ಗುಂಟೆ ಭೂಮಿ ಮತ್ತು ಕಟ್ಟಡಗಳಿವೆ. ರಾಜ್‍ಮಹಲ್ ವಿಲಾಸ್ ಬಡಾವಣೆಯ 2ನೇ ಹಂತದಲ್ಲಿ ಎಚ್‍ಐಜಿ ಬಂಗಲೆ 307 ಚದರ.ಮೀ ವಿಸ್ತೀರ್ಣವಿದೆ.  ಅದೇ ಜಾಗದಲ್ಲಿ 309 ಚದರ ಮೀಟರ್ ಮತ್ತೊಂದು ನಿವೇಶನವಿದೆ ಎಂದರು.

ಮುಂಬೈನ ಪೊರ್ಲಿ ಪ್ರದೇಶದ ಟಿವಿ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ 79 ಚದರ ಅಡಿ ಕಟ್ಟಡವಿದೆ. ಅಹಮದಾಬಾದ್‍ನಗರದ ನವರಂಗ್ ವೃತ್ತದಲ್ಲಿ ಜಿಟಿ ಅಸೋಸಿಯೇಷನ್ ಸಮುಚ್ಚಯದ 8ನೆ  ಹಂತಸ್ತಿನಲ್ಲಿ 1043 ಚದರ ಅಡಿ ಕಟ್ಟಡ, ನೆಲಮಹಡಿಯಲ್ಲಿ 300 ಅಡಿ ಜಾಗ ಇದೆ.  ಈ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 249.10 ಕೋಟಿ ಎಂದು ಅಂದಾಜಿಸಲಾಗಿದೆ ಎಂದರು.

ಎನ್‍ಜಿಇಎಫ್‍ನ ಸಂಸ್ಥೆಗೆ ಬೆಂಗಳೂರಿನ ಕೆಆರ್‍ಪುರಂ ತಾಲ್ಲೂಕಿನ ಬಯ್ಯಪ್ಪನಹಳ್ಳಿ ಮತ್ತು ಬೆನ್ನಿಗಾನಹಳ್ಳಿ ಗ್ರಾಮಗಳಲ್ಲಿ 119.60 ಎಕರೆ ಜಮೀನು ಇದ್ದು ಇದರಲ್ಲಿ 105 ಎಕರೆ ಕಾಂಪೌಂಡ್‍ನೊಳಗೆ ಉಳಿದ ಜಮೀನು ಕಾಂಪೌಂಡ್‍ನ ಹೊರಗೆ ಇದೆ. ಇದನ್ನು ಖಚಿತಪಡಿಸಿಕೊಳ್ಳಲು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆ ಇಲಾಖೆಗಳನ್ನು ಕೋರಲಾಗಿದೆ. ಕಚ್ಚಾ ಮಾಲಾಗಿ ಉಪಯೋಗಿಸುತ್ತಿದ್ದ 14.57 ಕೆಜಿ ಬೆಳ್ಳಿ , 5.5 ಕೆಜಿ ಮಿಶ್ರ ಲೋಹದ ಚರಾಸ್ತಿ ಸಹ ಇದೆ ಎಂದು ವಿವರಿಸಿದರು.

ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಬೆಂಗಳೂರಿನ ಇತಿಹಾಸ, ರಾಜ್ಯದ ಆಹಾರ ಪದ್ದತಿ ಸೇರಿದಂತೆ ಹಲವಾರು ಐತಿಹಾಸಿಕ ಯೋಜನೆಗಳನ್ನು ಜಾರಿಗೊಳಿಸಲು “ಬೆಂಗಳೂರು ಬೆಳಕು”  ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಈ ಜಾಗದ  ಹಸರೀಕರಣ ಹಾಗೂ ವಿವಿಧ ಯೋಜನೆಗಳಿಗಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 7 ಮಂದಿ ಐಎಎಸ್ ಅಕಾರಿಗಳು, 5 ಖಾಸಗಿ  ವ್ಯಕ್ತಿಗಳನ್ನು ಒಳಗೊಂಡ ಟ್ರಸ್ಟ್‌ ರಚಿಸಲಾಗಿದೆ. ಯಾವುದೇ ಕಾರಣಕ್ಕೂ ಜಾಗವನ್ನು ಪರಭಾರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next